ಮಡಿಕೇರಿ, ನ. 1: ಜಿಲ್ಲೆಯ ಜನತೆಯ ಅಪೇಕ್ಷೆಯಂತೆ ಕುಶಾಲನಗರ ಹಾಗೂ ಪೊನ್ನಂಪೇಟೆ ಯನ್ನು ನೂತನ ತಾಲೂಕುಗಳನ್ನಾಗಿ ರಚಿಸಲು ರಾಜ್ಯದ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರೊಡನೆ ಮಾತುಕತೆಯೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡ ಲಾಗುವದು ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಆಶ್ವಾಸನೆ ನೀಡಿದ್ದಾರೆ. ಇಲ್ಲಿನ ಕ್ರಿಸ್ಟಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಕ್ಕೆ ಮಾಹಿತಿಯ ಕೊರತೆಯಿಂದ ರಾಜ್ಯದ ಇತರ ತಾಲೂಕುಗಳೊಂದಿಗೆ ಈ ಎರಡು ಹೊಸ ತಾಲೂಕುಗಳ ಘೋಷಣೆ ಸಾಧ್ಯವಾಗಿಲ್ಲವೆಂದು ಅಭಿಪ್ರಾಯಪಟ್ಟರು.

ಇದೀಗ ಜನತೆಯ ಹೋರಾಟದ ಕೂಗು ಅರಿವಿಗೆ ಬಂದಿದ್ದು, ರಾಜ್ಯಾಧ್ಯಕ್ಷ ರಾದ ತಾವು ಉಸ್ತುವಾರಿ ಕೆ.ಸಿ. ವೇಣುಗೋಪಾಲ್,

(ಮೊದಲ ಪುಟದಿಂದ) ಕೊಡಗಿನ ಸಚಿವರ ಸಹಿತ ಜನಪ್ರÀತಿನಿಧಿಗಳನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರೊಂದಿಗೆ ಮಾತುಕತೆ ನಡೆಸಿ ತಾಲೂಕುಗಳ ರಚನೆಗೆ ಅಗತ್ಯ ಕ್ರಮಕೈಗೊಳ್ಳುವದಾಗಿ ಘೋಷಿಸಿದರು.

ಸಿಓಡಿ ತನಿಖೆ: ಗೋಣಿಕೊಪ್ಪಲು ಎಪಿಎಂಸಿಯಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಂಡಿರುವ ಕಳಪೆ ಕಾಳುಮೆಣಸು ಹಗರಣ ಕುರಿತು ಬೊಟ್ಟು ಮಾಡಿದ ಅವರು, ಪ್ರಬಾವಿ ಬಿಜೆಪಿ ನಾಯಕರ ನೆರಳಿನಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರಲ್ಲದೆ, ಸರಕಾರದಿಂದ ಸಿಓಡಿ ತನಿಖೆ ನಡೆಸಿ ಹಗರಣ ಬಯಲಿಗೆಳೆಯಲಾಗುವದು ಎಂಬದಾಗಿ ಪ್ರಕಟಿಸಿದರು.

2018 ಏಪ್ರಿಲ್‍ಗೆ ಚುನಾವಣೆ: ಕರ್ನಾಟಕ ವಿಧಾನಸಭೆಗೆ 2018ನೇ ಏಪ್ರಿಲ್‍ನಲ್ಲಿ ಚುನಾವಣೆ ಘೋಷಣೆಯಾಗಲಿದೆ ಎಂದು ಭವಿಷ್ಯ ನುಡಿದ ಪರಮೇಶ್ವರ್, ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವದರೊಂದಿಗೆ, ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದು ಕರೆ ನೀಡಿದರು. ಎರಡು ದಶಕದ ಹಿಂದೆ ಕೊಡಗಿನಲ್ಲಿ ಪಕ್ಷ ಬಲಿಷ್ಠವಿದ್ದು, ತಾನು ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ ಎಂದು ನೆನಪಿಸಿಕೊಂಡ ಕೆಪಿಸಿಸಿ ಅಧ್ಯಕ್ಷರು, ಪಕ್ಷದೊಳಗಿನ ಅಂತಃಕಲಹದಿಂದ ಇತ್ತೀಚೆಗೆ ಸತತ ಸೋಲು ಕಾಣಬೇಕಾಯಿತು ಎಂದು ವಿಷಾದಿಸಿದರು.

ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಮಣಿಸುವದರೊಂದಿಗೆ, ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ವಿರುದ್ಧದ ಅಪಪ್ರಚಾರಕ್ಕೆ ತಿರುಗೇಟು ನೀಡಬೇಕೆಂದು ಕರೆ ನೀಡಿದ ಅವರು, ಈ ದಿಸೆಯಲ್ಲಿ ರಾಜ್ಯ ಸರಕಾರದ ಯೋಜನೆಗಳೊಂದಿಗೆ ಸಾಧನೆಯನ್ನು ಮನೆ ಮನೆಗೆ ತಲುಪಿಸುವಂತೆ ಸಲಹೆಯಿತ್ತರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನತೆಗೆ ಮನವರಿಕೆಯೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾಳಜಿಯನ್ನು ಪ್ರಚುರಪಡಿಸುತ್ತ ಕೇಂದ್ರದಲ್ಲಿ 2019ಕ್ಕೆ ರಾಹುಲ್ ಗಾಂಧಿ ಪ್ರಧಾನಿಯಾಗುವಂತೆ ಈಗಿನಿಂದಲೇ ಶ್ರಮಿಸುವಂತೆ ಪರಮೇಶ್ವರ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಜಿಎಸ್‍ಟಿ, ನೋಟು ಅಮಾನೀಕರಣ, ಅಲ್ಪಸಂಖ್ಯಾತರ ವಿರುದ್ಧ ಕೇಂದ್ರದ ನಡೆಯನ್ನು ಬೊಟ್ಟು ಮಾಡಿದ ಅವರು, ದೇಶದಲ್ಲಿ ಜಾತ್ಯತೀತ ನೆಲೆಯಲ್ಲಿ ಎಲ್ಲರಿಗೆ ಸಮಾನ ನ್ಯಾಯ ಕೊಡಿಸುವದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯವೆಂದು ಪ್ರತಿಪಾದಿಸಿದರು.

ಸಚಿವರ ಕರೆ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಗೆಲುವಿಗೆ ಶ್ರಮಿಸುವ ಮೂಲಕ ಮುಂದೆಯೂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಕೊಡಗಿನ ಜನತೆಯ ಸೇವೆಗೆ ಅವಕಾಶ ಕಲ್ಪಿಸಿಕೊಡುವಂತೆ ಕರೆ ನೀಡಿದರು.

ಸಮಾರಂಭದ ವೇದಿಕೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಪದಾಧಿಕಾರಿಗಳಾದ ಚಂದ್ರಶೇಖರ್, ಸಯ್ಯದ್ ಹುಸೇನ್, ಮಮತಾಗಟ್ಟಿ, ಮಿಟ್ಟು ಚಂಗಪ್ಪ, ಅರುಣ್ ಮಾಚಯ್ಯ, ಶುಭೋದಿನಿ, ಶೈಲಾ ಕುಟ್ಟಪ್ಪ, ಚಂದ್ರಮೌಳಿ, ರೇಷ್ಮೆ ಮಂಡಳಿಯ ಟಿ.ಪಿ. ರಮೇಶ್, ಅರಣ್ಯ ನಿಗಮದ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ವಿವಿಧ ಮುಖಂಡರಾದ ಪಿ.ಸಿ. ಹಸೈನಾರ್, ಕೆ.ಎಂ. ಇಬ್ರಾಹಿಂ, ನಾಪಂಡ ಮುತ್ತಪ್ಪ, ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ಬೇಕಲ್ ರಮನಾಥ್, ಧರ್ಮಜ ಉತ್ತಪ್ಪ, ನಟೇಶ್ ಗೌಡ, ಮನು ಮೇದಪ್ಪ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಚುಮ್ಮಿ ದೇವಯ್ಯ, ಬಿ.ಎಸ್. ತಮ್ಮಯ್ಯ, ಪ್ರಕಾಶ್ ಆಚಾರ್ಯ, ಅಬ್ದುಲ್ ರಜಾಕ್, ಕೆ.ಎ. ಯಾಕೂಬ್ ಸೇರಿದಂತೆ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸ್ವಾಗತಿಸಿ, ನೆರವಂಡ ಉಮೇಶ್ ಹಾಗೂ ತೆನ್ನಿರ ಮೈನಾ ನಿರೂಪಿಸಿದರು. ಈ ವೇಳೆ ಬಿಎಸ್‍ಪಿ ಜಿಲ್ಲಾಧ್ಯಕ್ಷ ಗೌತಂ ಶಿವಪ್ಪ ಕಾಂಗ್ರೆಸ್ ಸೇರಿದರು. ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ವಂದಿಸಿದರು.