ಮಡಿಕೇರಿ, ನ. 1: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಕಾಂಗ್ರೆಸ್ ಪಕ್ಷದಿಂದ ಬಿರುಸಿನ ಚಟುವಟಿಕೆ ಯೊಂದಿಗೆ, ನೂತನ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಸಹಿತ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಹಿತ ಮನೆ ಮನೆ ಸಂಪರ್ಕ ಅಭಿಯಾನ ನಡೆಸಲಾಯಿತು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕಾರ್ಯಕರ್ತರ ಸಮಾವೇಶಕ್ಕೆ ಮುನ್ನ, ಜಿಲ್ಲಾ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಸುವ ಮೂಲಕ ಗಂಟೆ ಗಟ್ಟಲೆ ಜಿಲ್ಲೆಯ ಸಮಸ್ಯೆಗಳ ಕುರಿತು ಗಂಭೀರ ಸಮಾಲೋಚನೆ ನಡೆಸಲಾಯಿತು. ಎರಡು ದಶಕಗಳ ಹಿಂದೆ ಕೊಡಗಿನಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್, ಅನಂತರದಲ್ಲಿ

(ಮೊದಲ ಪುಟದಿಂದ) ಬಿಜೆಪಿ ತೆಕ್ಕೆಗೆ ಜಾರಲು ಕಾರಣಗಳನ್ನು ಈ ವೇಳೆ ಮೆಲುಕು ಹಾಕಲಾಯಿತು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಿದ್ದರೂ, ಜಿಲ್ಲೆಯಲ್ಲಿ ಬಹುತೇಕ ಆಡಳಿತ ಬಿಜೆಪಿ ಹಿಡಿತವಿರುವ ಬಗ್ಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ಹೊರಗೆಡವಿದರು. ಈ ಎಲ್ಲ ಸೂಕ್ಷ್ಮತೆಗಳನ್ನು ಗಮನಿಸಿದ ರಾಜ್ಯಾಧ್ಯಕ್ಷರು ಹಾಗೂ ಕಾಂಗ್ರೆಸ್ ಪ್ರಬಾರಿಗಳು, ಜಿಲ್ಲೆಯ ಎಲ್ಲಾ ಮುಖಂಡರು ತಮ್ಮ ತಮ್ಮ ನಡುವೆ ಮನಸ್ತಾಪ ಬಿಟ್ಟು, ಒಗ್ಗಟ್ಟಿನಿಂದ ಮುಂದಿನ ಚುನಾವಣೆಯ ಗೆಲುವಿಗೆ ಶ್ರಮಿಸುವಂತೆ ಕಿವಿಹಿಂಡಿದರು.

ಕೋರ್ ಕಮಿಟಿಯ ಅಭಿಪ್ರಾಯಗಳನ್ನು ಮುಂದಿಟ್ಟು ಕೊಂಡು ಸಭೆಯಲ್ಲಿ ಮಾತನಾಡಿದ ವೇಣುಗೋಪಾಲ್, ಒಂದು ಹಂತದಲ್ಲಿ ತಮ್ಮನ್ನೇ ಉದಾಹರಣೆಯಾಗಿ ಕಾಂಗ್ರೆಸ್ ಪಕ್ಷದಿಂದ ಹೊರತುಪಡಿಸಿದರೆ ಎಲ್ಲ ನಾಯಕರು ‘ಶೂನ್ಯ’ ಎಂದು ನೆನಪಿಸುತ್ತಾ, ಪಕ್ಷದಲ್ಲಿದ್ದರೆ ಮಾತ್ರ ತಾವು ನಾಯಕರೆಂದು ಚಾಟಿ ಬೀಸಿದರು. ಅಂತೆಯೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಮ್ಮ ಮಾತಿನ ನಡುವೆ, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದರೂ ಕೊಡಗಿನಲ್ಲಿ ‘ಶೂನ್ಯ’ ಎಂದರಲ್ಲದೆ ಈ ಸ್ಥಿತಿಗೆ ವೇದಿಕೆಯಲ್ಲಿರುವ ಎಲ್ಲ ನಾಯಕರ ಸಹಿತ ಸಭಾಂಗಣದಲ್ಲಿ ನೆರೆದಿರುವ ಜನಸ್ತೋಮ ಕಾಂಗ್ರೆಸ್ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸದಿರುವದು ಕಾರಣವೆಂದು ನೇರವಾಗಿ ಬೊಟ್ಟು ಮಾಡುತ್ತಾ, ಭವಿಷ್ಯದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವಂತೆ ಕೈಮುಗಿದು ಬೇಡಿದರು.