ಶ್ರೀಮಂಗಲ, ನ. 2: ಕರ್ನಾಟಕ ಸರ್ಕಾರ ಹೊರಡಿಸಿರುವ ಟಿಪ್ಪು ಜಯಂತಿ ಆಚರಣೆಯ ಆದೇಶಕ್ಕೆ ತಡೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದ್ದು, ತಾ. 3 ರಂದು (ಇಂದು) ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಹೆಚ್.ಜಿ. ರಮೇಶ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಕ.ಸಂ.ವಾ 139-2016/2092016 ನ್ನು ಉಲ್ಲೇಖಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹೊರಡಿಸಿರುವ ಸುತ್ತೋಲೆ ಸಂಖ್ಯೆ ಡಿಕೆಸಿ.40025/59/2017 ಯಲ್ಲಿ ಕರ್ನಾಟಕ 30 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ನವೆಂಬರ್ 10 ರಂದು ಹಜóರತ್ತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ನಿರ್ದೇಶಿಸಲಾಗಿತ್ತು. ಈ ಆದೇಶಕ್ಕೆ ತಡೆಯನ್ನು ಕೋರಿ ಯುನೈಟೆಡ್ ಕೊಡವ ಅರ್ಗನೈಸೇಷನ್ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು

(ಮೊದಲ ಪುಟದಿಂದ) ನ್ಯಾಯವಾದಿ ಪವನಚಂದ್ರ ಶೆಟ್ಟಿ ಅವರ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆ, ನಿರ್ದೇಶಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಪ್ರಧಾನ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು ಅರ್ಜಿದಾರರ ಪರವಾಗಿ ಮತ್ತೋರ್ವ ಹಿರಿಯ ನ್ಯಾಯವಾದಿ ಟಿ.ಎನ್. ರಘುಪತಿ ಸಹ ವಾದ ಮಂಡಿಸಲಿದ್ದಾರೆ.

ಸರ್ಕಾರವು ಟಿಪ್ಪು ಜಯಂತಿ ಆಚರಿಸುವದರ ವಿರುದ್ಧ ರಾಜ್ಯಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳಿಗೂ ಆಡಳಿತ ಪಕ್ಷವನ್ನು ಹೆಣೆಯಲು ದಾಳವಾಗಿರುವ ಟಿಪ್ಪು ಜಯಂತಿ ಆಚರಣೆಯ ವಿಷಯವು ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದೆ.

ಗೋಣಿಕೊಪ್ಪಲು : ಸರ್ಕಾರ ತಾ. 10 ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆಗೆ ಇಲ್ಲಿನ ಇಗ್ಗುತಪ್ಪ ಕೊಡವ ಸಂಘ ವಿರೋಧ ವ್ಯಕ್ತಪಡಿಸಿದೆ.

ವಿರೋಧದ ನಡುವೆಯೂ ಸರ್ಕಾರ ಜಯಂತಿ ಆಚರಿಸುವ ಉದ್ದೇಶವೇನು ಎಂದು ತಿಳಿಯುತ್ತಿಲ್ಲ. ಸಾರ್ವಜನಿಕರಿಗೆ ಬೇಡದ ಆಚರಣೆಗೆ ಮುಂದಾಗಬಾರದು. ಸಮಾಜದಲ್ಲಿ ಶಾಂತಿ ನೆಲೆಸಲು ಸರ್ಕಾರ ಯೋಜನೆ ರೂಪಿಸಬೇಕಿತ್ತು. ಆದರೆ ಇದನ್ನು ಗಮನಕ್ಕೆ ತೆಗೆದುಕೊಳ್ಳದ ಸರ್ಕಾರ ಸಾರ್ವಜನಿಕ ಅಭಿಪ್ರಾಯಕ್ಕೆ ವಿರೋಧವಾಗಿ ಅಚರಣೆಗೆ ಮುಂದಾಗಬಾರದು. ಇಂತಹ ಆಚರಣೆಗೆ ಕೊಡವ ಸಂಘ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಲಿದೆ ಎಂದು ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಹಾಗೂ ಸದಸ್ಯರುಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಶಾಲನಗರ : ಟಿಪ್ಪು ಜಯಂತಿ ಆಚರಣೆಯನ್ನು ಕುಶಾಲನಗರ ಕೊಡವ ಸಮಾಜ ಖಂಡಿಸಿದೆ. ಕುಶಾಲನಗರ ಕೊಡವ ಸಮಾಜದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಕೊಡವ ಸೈನಿಕರು ಹಾಗೂ ಮೂಲ ನಿವಾಸಿಗಳನ್ನು ಹತ್ಯೆಗೈದು, ಮಹಿಳೆಯರು, ಮಕ್ಕಳು, ವೃದ್ಧರ ಮೇಲೆ ದೌರ್ಜನ್ಯ ಎಸಗಿದ ಟಿಪ್ಪುವಿನ ಜಯಂತಿ ಆಚರಣೆಯನ್ನು ಸರಕಾರ ಕೈಬಿಡಬೇಕಿದೆ. ಬಲವಂತದಿಂದ ಆಚರಿಸಿ ಅನಾಹುತಗಳು ಸಂಭವಿಸಿದಲ್ಲಿ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಟಿಪ್ಪು ಜಯಂತಿ ಆಚರಿಸಿದಲ್ಲಿ ಸಮಾಜದ ವತಿಯಿಂದ ಕರಾಳ ದಿನ ಆಚರಣೆಗೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯದವರನ್ನು ಓಲೈಸಲು ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವದು ಖಂಡನೀಯ ವಿಚಾರ. ಕೊಡಗು ಜಿಲ್ಲೆಯಲ್ಲಿ ಟಿಪ್ಪು ನಡೆಸಿದ ದೌರ್ಜನ್ಯಗಳಿಗೆ ಪ್ರಸ್ತುತ ಸಾಕ್ಷಿಗಳು ಲಭ್ಯವಿದ್ದು, ಯಾವದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಸರಕಾರ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಯಲಪಂಡ ಮಂದಣ್ಣ, ಮಾಜಿ ಸೈನಿಕ ಕೋಂಪುಳಿರ ವಿಷ್ಣು ದೇವಯ್ಯ, ಸಂಘದ ಖಜಾಂಚಿ ಗೌಡಂಡ ದೇವಯ್ಯ, ನಿರ್ದೇಶಕರುಗಳಾದ ಕೇಕಡ ಸೋಮಣ್ಣ, ಚೌರೀರ ತಿಮ್ಮಯ್ಯ, ಪ್ರಮುಖರಾದ ಅಜ್ಜೆಟ್ಟಿರ ದೇವಯ್ಯ, ಅಮ್ಮತ್ತಿರ ನಂದಕುಮಾರ್ ಇದ್ದರು.