ಮಡಿಕೇರಿ, ನ. 2: ನಿನ್ನೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಸಹಿತ ಅನೇಕ ವರಿಷ್ಠರು ಮಡಿಕೇರಿಗೆ ಆಗಮಿಸಿ ಮುಂದಿನ ಚುನಾವಣೆ ಎದುರಿಸಲು ಒಗ್ಗಟ್ಟಿನ ಮಂತ್ರ ಜಪಿಸಿದರೆ, ಸ್ವತಃ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆ ಅಧ್ಯಕ್ಷರಿಗೆ ‘ಕ್ಲಾಸ್’ ತೆಗೆದುಕೊಳ್ಳುವ ಸಂದರ್ಭ ಅಸಮಾಧಾನಗೊಂಡ ಹಲವರು ಸಚಿವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.ಮಂಗಳವಾರ ರಾತ್ರಿಯ ಈ ಪ್ರಸಂಗಕ್ಕೆ ಕೇವಲ ಕಾಂಗ್ರೆಸ್ಸಿಗರು ಮತ್ರವಲ್ಲದೆ ಮಡಿಕೇರಿ ನಗರ ದಸರಾ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದ ಹಲವು ಮಂದಿ ಸಾಕ್ಷಿಯಾಗಿದ್ದು, ಕಾಂಗ್ರೆಸ್ಸಿಗರಿಂದಲೇ ಹಿರಿಯರು ಬೈಗುಳ ತಿಂದರೆ ಇತರರು ಬಂದಿದ್ದ ವಿಷಯವನ್ನು ಕೂಡ ಜನನಾಯಕರೊಂದಿಗೆ ಪ್ರಸ್ತಾಪಿಸುವ ಗೋಜಿಗೆ ಹೋಗದೆ ಜಾಗ ಖಾಲಿ ಮಾಡಿದ್ದಾಗಿ ಗೊತ್ತಾಗಿದೆ.

(ಮೊದಲ ಪುಟದಿಂದ)

ಸಿಟ್ಟಿಗೆ ಕಾರಣ: ಎರಡು ತಿಂಗಳ ಹಿಂದೆಯೇ ನಗರಸಭೆ ಆಯುಕ್ತರ ಕಾರ್ಯವೈಖರಿ ಬಗ್ಗೆ ವಿರೋಧಿಸುತ್ತಿರುವ ಒಂದಿಷ್ಟು ಕೈ ಪಾಳೆಯದ ನಗರಸಭಾ ಸದಸ್ಯರು, ನೇರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದು, ಇಲ್ಲಿಂದ ವರ್ಗಾಯಿಸಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಆಯುಕ್ತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವರು, ಈ ಬಗ್ಗೆ ತಮ್ಮ ಅರಿವಿಗೆ ತಾರದೆ ಮುಖ್ಯಮಂತ್ರಿ ಬಳಿ ದೂರು ಕೊಟ್ಟಿದ್ದರಿಂದ ಸಿಡಿಮಿಡಿಗೊಂಡಿದ್ದರು. ಜೊತೆಯಲ್ಲಿ ತಾವು ಸರಕಾರದಿಂದ ಮಂಜೂರು ಮಾಡಿಸಿರುವ 35 ಕೋಟಿ ರೂಪಾಯಿ ಯೋಜನೆಗೆ ಈಗಿನ ಅಧ್ಯಕ್ಷರು ಸರಿಯಾಗಿ ಸ್ಪಂದಿಸಿಲ್ಲವೆಂಬ ತೀವ್ರ ಸಿಟ್ಟೂ ಸಚಿವರಲ್ಲಿತ್ತು.

ಮಂಗಳವಾರ ಸಂಜೆ ನಗರದ ಹೊಟೇಲ್‍ವೊಂದರಲ್ಲಿ ಕಾಂಗ್ರೆಸ್ ನಾಯಕರ ಸಹಿತ ಸಚಿವರು ತಂಗಿದ್ದ ವೇಳೆಯಲ್ಲಿ ನಗರಸಭೆ ವಿಷಯ ಪ್ರಸ್ತಾಪಗೊಂಡು, ಅಲ್ಲಿಗೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಮಾತುಕತೆಗಾಗಿ ಸಚಿವರು ಕರೆಸಲು ಆಪ್ತರಿಗೆ ಸೂಚಿಸಿದ್ದರು.

ಸಚಿವರು ಕರೆದಿರುವ ಬಗ್ಗೆ ಅಧ್ಯಕ್ಷರು ಕೆಲವರು ಸದಸ್ಯರಿಗೆ ವಿಷಯ ಮುಟ್ಟಿಸಿದ್ದು, ನಾಲ್ಕಾರು ಮಂದಿ ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸಚಿವರು ನೇರವಾಗಿ ವಿಷಯ ಪ್ರಸ್ತಾಪಿಸಿ, ಲೆಕ್ಕಾಚಾರದಂತೆ ನಗರಸಭೆಯೊಳಗೆ ಕಾಂಗ್ರೆಸ್ ಬಹುಮತ ಕಳೆದುಕೊಂಡಿರುವದರಿಂದ ಹಾಲೀ ಅಧ್ಯಕ್ಷರು ಅಧಿಕಾರ ತೊರೆಯಬೇಕೆಂದೂ, ಮಾಜಿ ಅಧ್ಯಕ್ಷೆ ಶ್ರೀಮತಿ ಬಂಗೇರ ಅವರನ್ನು ಆ ಸ್ಥಾನಕ್ಕೆ ನಿಯೋಜಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಅಷ್ಟರಲ್ಲಿ ಏರುಧ್ವನಿಯಲ್ಲಿ ಆಕ್ಷೇಪಿಸಿರುವ ಹೆಚ್.ಎಂ. ನಂದಕುಮಾರ್, ಈ ವಿಷಯದಲ್ಲಿ ತಾವು ಮೂಗು ತೂರಿಸದಿದ್ದರೆ ಒಳ್ಳೆಯದೆಂದರೂ, ಈಗಿನ ಪರಿಸ್ಥಿತಿಯಲ್ಲಿಯೇ ನಗರಸಭೆ ಆಡಳಿತ ಮುಂದುವರಿದರೆ ಕಾಂಗ್ರೆಸ್‍ಗೆ ಅನುಕೂಲವೆಂದು ಮನವರಿಕೆ ಮಾಡಿಕೊಡಲು ಮುಂದಾದರೆನ್ನಲಾಗಿದ್ದು, ಮೊದಲೇ ಈ ವ್ಯಕ್ತಿ ಬಗ್ಗೆ ಸಿಟ್ಟಾಗಿದ್ದ ಸಚಿವರು ಮತ್ತಷ್ಟು ಏರುಧ್ವನಿಯಲ್ಲಿ ಗದರಿಸಿದ್ದಾರೆ.

ಈ ಸಂದರ್ಭ ಪ್ರತಿರೋಧವಾಗಿ ಮಾತನಾಡಿರುವ ಸದಸ್ಯರು ಹಾಗೂ ಸಚಿವರ ಮಾತಿನ ಸಮರ ತಾರಕಕ್ಕೇರಿದ್ದು, ಅಲ್ಲಿಂದ ಹೊರ ಹೋಗುವಂತೆ ಸಚಿವರು ತಾಕೀತು ಮಾಡಿದ್ದಾರೆ. ಸದಸ್ಯ ನಂದಕುಮಾರ್ ಕೂಡ ಸಚಿವರ ಮಾತಿಗೆ ಪ್ರತಿಯಾಗಿ ಆಡಬೇಕಾದ ತನ್ನ ಮಾತುಗಳನ್ನು ಪ್ರಯೋಗಿಸಿ ಹೊರ ಬಂದಿದ್ದಾರೆ.

ಇದಾದ ಕೆಲವೇ ಸಮಯದಲ್ಲಿ ಅಧ್ಯಕ್ಷೆ ಕಾವೇರಮ್ಮ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವರು, ಕುರ್ಚಿ ಬಿಡುವಂತೆ ಕಟ್ಟಪ್ಪಣೆ ಮಾಡುತ್ತಿದ್ದಂತೆಯೇ ಅವರು ಅಶ್ರುಧಾರೆಯೊಂದಿಗೆ ಹೊರಬಂದು ಮತ್ತೆ ತಮ್ಮ ಬಳಗದ ಸದಸ್ಯರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಈ ವೇಳೆಗೆ ಇಲ್ಲಿನ ನೂತನ ಕಾರ್ಯಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ನಿವೇಶನದಲ್ಲಿ ಕಾರ್ಯನಿರತರಾಗಿದ್ದ ನಾಲ್ಕಾರು ಸದಸ್ಯರು ಸಹಿತ ಕೆಲವರು ಮತ್ತೆ ಹೊಟೇಲ್‍ಗೆ ದೌಡಾಯಿಸಿದ್ದಾರೆ. ಕಾವೇರಮ್ಮ ಕಣ್ಣೀರುಗರಿಯುವದನ್ನು ಕಂಡೊಡನೆ ಕೆರಳಿದ ನಂದಕುಮಾರ್ ಹಾಗೂ ಇತರರು ಪರೋಕ್ಷವಾಗಿ ಸಚಿವರು ಕೇಳಿಸಿಕೊಳ್ಳುವಂತೆ ಬೈಗುಳದ ಸುರಿಮಳೆ ಗೈದಿದ್ದಾರೆ.

ಈ ಬೆಳವಣಿಗೆಯ ಪರಿಣಾಮ ನಿನ್ನೆ ಕಾಂಗ್ರೆಸ್ ನಾಯಕರು ಗಣಪತಿ ಬೀದಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಆಂದೋಲನದಲ್ಲಿ ತೊಡಗಿಸಿಕೊಂಡ ಸಂದರ್ಭವೂ ನಂದಕುಮಾರ್ ಸಚಿವರ ವಿರುದ್ಧ ಪಕ್ಷದ ಇತರರೊಂದಿಗೆ ತನ್ನ ಸಿಟ್ಟನ್ನು ಬಹಿರಂಗವಾಗಿ ಹೊರ ಹಾಕುತ್ತಿದ್ದ ದೃಶ್ಯ ಗೋಚರಿಸಿತು.

ಈ ಬೆಳವಣಿಗೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸಹಿತ, ಒಂದಿಬ್ಬರು ರಾಜ್ಯ ಅಲ್ಪಸಂಖ್ಯಾತ ಮುಖಂಡರು ಹಾಗೂ ಅಸಮಾಧಾನಗೊಂಡವರ ನಡುವೆ ಚರ್ಚೆ ತಾರಕಕ್ಕೆ ಏರಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ವಿವೇಕಪೂರ್ಣ ನಡೆಯೊಂದಿಗೆ ಎಲ್ಲರನ್ನು ಸಮಾಧಾನಗೊಳಿಸಿ, ಪ್ರಸಕ್ತ ಚುನಾವಣೆಯ ಪರ್ವದಲ್ಲಿ ಯಾವ ಬದಲಾವಣೆಗೂ ಅವಕಾಶವಾಗದಂತೆ ನಗರಸಭೆ ಆಡಳಿತ ಯಥಾಸ್ಥಿತಿ ಮುಂದುವರಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ನಿನ್ನೆ ಕಾಂಗ್ರೆಸ್ ವೇದಿಕೆಯಲ್ಲಿ ಪಕ್ಷದ ನಾಯಕರು ಒಗ್ಗಟ್ಟಿನ ಮಂತ್ರ ಬೋಧಿಸಿದ್ದರೆ, ಇತ್ತ ಮಡಿಕೇರಿ ನಗರಸಭೆಯ ಒಳಬೋಗುದಿ ಬೀದಿ ರಂಪಾಟಕ್ಕೆ ಎಡೆಮಾಡಿಕೊಟ್ಟಂತಾಗಿದೆ.