ಮಡಿಕೇರಿ, ನ. 1: ಕನ್ನಡ ನಾಡು ನುಡಿಯ ಹಿತಾಸಕ್ತಿಗಾಗಿ ಕರ್ನಾಟಕ ಸರ್ಕಾರ ಕಟಿಬದ್ಧವಾಗಿದೆ ಎಂದು ಯೋಜನೆ, ಸಾಂಖ್ಯಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.ಕೊಡಗು ಜಿಲ್ಲಾಡಳಿತದ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು.ಕನ್ನಡ ನಮ್ಮ ಭಾಷೆ ಎಂಬ ಸ್ವಾಭಿಮಾನದ ಜೊತೆಗೆ ಸೋದರ ಭಾಷೆಗಳನ್ನು ಗೌರವಿಸುವ ವಿಶಾಲ ಭಾವನೆ ನಮ್ಮೆಲ್ಲರದಾಗಿದೆ. ಈ ಮೂಲಕ ಭಾಷಾ ಸಾಮರಸ್ಯ, ಸಾಂಸ್ಕøತಿಕ ಸಾಮರಸ್ಯ ರೂಪಿತವಾಗಿರುವದು ಕನ್ನಡ ನಾಡಿನ ಹಿರಿಮೆಯಾಗಿದೆ. ಈ ಹಿರಿಮೆಯನ್ನು ಹೆಚ್ಚಿಸಲು ಪ್ರತಿಯೊಬ್ಬರು ಪಾಲುದಾರರಾಗಬೇಕು. ಕನ್ನಡ ಕುರಿತ ಕಾಳಜಿ, ಕಳಕಳಿ ಎಲ್ಲೆಡೆ ಎಲ್ಲರಲ್ಲೂ ನಿರಂತರವಾಗಿ ಜಾಗೃತವಾಗಿರಬೇಕು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಯಶಸ್ವಿ 5ನೇ ವರ್ಷಕ್ಕೆ ಮುನ್ನಡೆದಿದ್ದು, ಜನಪರ ಕಾರ್ಯಗಳಿಗೆ ಒತ್ತು ನೀಡಿದೆ.

ಹಸಿವು ಮುಕ್ತ ಕರ್ನಾಟಕ ಎಂಬ ಧ್ಯೇಯದೊಂದಿಗೆ ಪ್ರಾರಂಭಗೊಂಡ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 91512 ಕುಟುಂಬಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಿಲ್ಲೆಯಲ್ಲಿ 3 ಕಡೆ ಸದ್ಯದಲ್ಲಿಯೇ ಪ್ರಾರಂಭಿಸಲಾಗುವದು. ಈ ಮೂಲಕ ಸ್ಥಳೀಯರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬಡ ಜನರಿಗೆ ಅತೀ ಕಡಿಮೆ ದರದಲ್ಲಿ ಆಹಾರ ಒದಗಿಸುವದು.

ಸರ್ಕಾರ ನೂತನವಾಗಿ ಬೆಳೆ ಸಮೀಕ್ಷೆ ಯೋಜನೆಯನ್ನು ಜಾರಿಗೊಳಿಸಿದ್ದು, ಮೊಬೈಲ್ ತಂತ್ರಾಂಶವನ್ನು ಬಳಸಿ ರಾಜ್ಯಾದ್ಯಂತ ಬೆಳೆದಿರುವ ಎಲ್ಲಾ ಬೆಳೆ ಮಾಹಿತಿಯ ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇನ್ನು ಒಂದು ತಿಂಗಳೊಳಗಾಗಿ ಎಲ್ಲಾ ಪಹಣಿ ಪತ್ರಿಕೆಗಳಲ್ಲಿ ಬೆಳೆ ವಿವರಗಳನ್ನು ನಮೂದಿಸಲಾಗುವದು. ಈ ಮಾಹಿತಿಯನ್ನು ಆಧರಿಸಿ ಬೆಳೆ ವಿಮೆ ಯೋಜನೆ, ಕನಿಷ್ಟ ಬೆಂಬಲ ಬೆಲೆ ಮತ್ತು ಸಹಾಯಧನ ನೀಡಿಕೆಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

2025ರ ವೇಳೆಗೆ ಕೊಡಗು ಜಿಲ್ಲೆ ಒಳಗೊಂಡಂತೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ವಿಶಾಲ ನಾಗರಿಕರ ಅಭಿಪ್ರಾಯಗಳನ್ನು ಆಧರಿಸಿ ವಿಷನ್-2025 ಶೀರ್ಷಿಕೆಯಡಿ ಅಭಿವೃದ್ಧಿಗೆ ಬುನಾದಿಯಾಗುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಸಂಬಂಧ ಅಭ್ಯರ್ಥಿಗಳ ನೋಂದಣಿಯನ್ನು ಮಾಡಲಾಗಿದ್ದು, ಸದ್ಯದಲ್ಲಿಯೇ

(ಮೊದಲ ಪುಟದಿಂದ) ಕೌಶಲ್ಯ ತರಬೇತಿ ಪ್ರಾರಂಭಿಸಲಾಗುವದು.

ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯಡಿ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ 45461 ಫಲಾನುಭವಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1152 ಗ್ರಾಮೀಣ ಮತ್ತು ನಗರ ಸ್ತ್ರೀಶಕ್ತಿ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಹಲವಾರು ಕಾರ್ಯಕ್ರಮಗಳು ಜಾರಿಯಲ್ಲಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ನಿವೇಶನ ಗುರುತಿಸಿ ಈಗಾಗಲೇ ಬಹುತೇಕ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿವೆ. ಬಿದಾಯಿ ಯೋಜನೆಯಡಿ 347 ಫಲಾನುಭವಿಗಳಿಗೆ ತಲಾ ರೂ. 50,000 ಗಳಂತೆ ಸಹಾಯಧನ ನೀಡಲಾಗಿದೆ.

ಕೊಡಗು ಜಿಲ್ಲಾ ಪಂಚಾಯತ್‍ನ ಕಾರ್ಯಕ್ರಮಗಳಿಗೆ ರೂ. 199.16 ಕೋಟಿ ಬಿಡುಗಡೆಯಾಗಿದ್ದು, ರೂ. 54.65 ಕೋಟಿ ವೆಚ್ಚ ಭರಿಸಿದ್ದು, ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಯೋಜನೆಯಡಿ 216 ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಯೋಜನೆಯಡಿ ಒಟ್ಟು 22.57 ಕಿ.ಮೀ. ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ. ಟಾಸ್ಕ್‍ಫೋರ್ಸ್ ಯೋಜನೆಯಡಿ 138 ಕಾಮಗಾರಿ ಮತ್ತು ಕೆರೆ ಸಂಜೀವಿನಿ ಯೋಜನೆಯಡಿ 55 ಕೆರೆ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ.

ಪ್ರವಾಸೋದ್ಯಮ ಇಲಾಖೆಯಿಂದ 2013-14ನೇ ಸಾಲಿನಿಂದ ಇಲ್ಲಿಯವರೆಗೆ 161 ಫಲಾನುಭವಿಗಳಿಗೆ ತಲಾ 2 ಲಕ್ಷ ಸಹಾಯಧನದಲ್ಲಿ ಪ್ರವಾಸಿ ಟ್ಯಾಕ್ಸಿ ವಿತರಿಸಲಾಗಿದೆ. 2013-14ನೇ ಸಾಲಿನಿಂದ ಇಲ್ಲಿಯವರೆಗೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಇತ್ಯಾದಿ ಕಾಮಗಾರಿಗಳಿಗೆ ಒಟ್ಟು ರೂ.14.76 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2017-18 ನೇ ಸಾಲಿಗೆ ಜಿಲ್ಲೆಗೆ ರೂ. 14.30 ಕೋಟಿ ಅನುದಾನ ನಿಗದಿಯಾಗಿದ್ದು, ಇದುವರೆಗೆ 2.10 ಲಕ್ಷ ಮಾನವ ದಿನಗಳಿಗೆ ಉದ್ಯೋಗ ಕಲ್ಪಿಸಲಾಗಿದೆ.

ವೈಯಕ್ತಿಕ ಶುಚಿತ್ವ ಮತ್ತು ಪರಿಸರದ ಶುಚಿತ್ವ ಕಾಪಾಡುವದು ಅತೀ ಮುಖ್ಯ, ಅದರಂತೆ ಜಿಲ್ಲೆಯನ್ನು “ಬಯಲು ಬಹಿರ್ದೆಸೆ ಮುಕ್ತ” ಜಿಲ್ಲೆಯನ್ನಾಗಿ ಸರ್ಕಾರ ಅಕ್ಟೋಬರ್ 2, 2016ರಂದು ಘೋಷಣೆ ಮಾಡಲಾಗಿದೆ.

2016-17ನೇ ಸಾಲಿನಲ್ಲಿ ಬರ ಪರಿಹಾರ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲೆಗೆ ಈವರೆಗೆ 257 ಕಾಮಗಾರಿಗಳ ಬಾಬ್ತು ರೂ. 3.22 ಕೋಟಿ ಅನುದಾನವನ್ನು ಅನುಷ್ಠಾನಾಧಿಕಾರಿಗಳಿಗೆ ಬಿಡುಗಡೆಗೊಳಿಸಲಾಗಿದೆ.

ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 28 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ದಿ ಯೋಜನೆಯಡಿ 44 ಕಾಮಗಾರಿಗಳು ಪೂರ್ಣಗೊಂಡಿವೆ. ನಗರೋತ್ಥಾನ (ಮುನಿಸಿಪಾಲಿಟಿ) 3ನೇ ಹಂತ ಯೋಜನೆಯಡಿ 49 ಕಾಮಗಾರಿಗಳ ಕ್ರಿಯಾಯೋಜನೆಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದ್ದು ಉದ್ದೇಶಿತ ಕಾರ್ಯ ಪ್ರಗತಿಯಲ್ಲಿದೆ.

ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಡಿ. ಜೇನು ಕುರುಬ, ಕಾಡು ಕುರುಬ, ಎರವ, ಸೋಲಿಗ ಜನಾಂಗದ ಸುಮಾರು 9500 ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಗಿದೆ.

ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ 1592 ಪರಿಶಿಷ್ಟ ಪಂಗಡದ ಅರಣ್ಯವಾಸಿಗಳಿಗೆ ವೈಯಕ್ತಿಕ ಅರಣ್ಯಹಕ್ಕು ಹಾಗೂ 45 ಸಮುದಾಯ ಕ್ಲೇಮುಗಳನ್ನು ಮಾನ್ಯ ಮಾಡಿ 5 ಸಮುದಾಯ ಸಂಪನ್ಮೂಲ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.

ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ ಅರ್ಹ 528 ನಿರಾಶ್ರಿತ ಗಿರಿಜನ ಕುಟುಂಬಗಳಿಗೆ ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಗ್ರಾಮದ 6.70 ಎಕರೆ ಜಾಗದಲ್ಲಿ 174 ಹಾಗೂ ಬ್ಯಾಡಗೊಟ್ಟ ಗ್ರಾಮದ 14.76 ಎಕರೆ ಜಾಗದಲ್ಲಿ 354 ಒಟ್ಟು 21.46 ಎಕರೆ ಜಾಗದಲ್ಲಿ 528 ನಿವೇಶನಗಳನ್ನು ವಿಂಗಡಣೆ ಮಾಡಿ ಆಧುನಿಕ ಬಡಾವಣೆಯನ್ನು ನಿರ್ಮಿಸಲಾಗುತ್ತಿದೆ.

ಇಂಡಿಯಾ ಟುಡೇ ವತಿಯಿಂದ ನಡೆದ ಸಮೀಕ್ಷೆಯಲ್ಲಿ ಸಮೃದ್ಧಿ ವಿಭಾಗದಲ್ಲಿ ಕೊಡಗು ಜಿಲ್ಲೆಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಲಭಿಸಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಜಿಲ್ಲಾಧಿಕಾರಿ ಆರ್.ವಿ. ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಡಿವೈಎಸ್ಪಿ ಸುಂದರ್‍ರಾಜ್, ಡಿಎಫ್‍ಓ ಸೂರ್ಯಸೇನ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಜಿ.ಪಂ. ಅಧ್ಯಕ್ಷ ಹರೀಶ್ ಮತ್ತಿತರರು ಇದ್ದರು.