ಆಲೂರು-ಸಿದ್ದಾಪುರ, ನ. 1: ಕೊಡ್ಲಿಪೇಟೆ ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಬೆಂಬಳೂರು ವಾರ್ಡ್ ವಿಭಾಗದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗದಿರುವದು, ಬೀದಿ ದೀಪ ಉರಿಯದಿರುವದು ಸೇರಿದಂತೆ ಯಾವದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಗ್ರಾ.ಪಂ. ಅಧ್ಯಕ್ಷರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಭಿವೃದ್ಧಿ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಬೆಂಬಳೂರು ವಾರ್ಡಿನ ಸದಸ್ಯರುಗಳಾದ ಬಿ.ಕೆ. ದಿನೇಶ್, ಹೇಮಾವತಿ ಈರಪ್ಪ, ಕೇಶವ ಮುಂತಾದ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಹೆಚ್.ಎಸ್. ಹರೀಶ್ ಬೆಂಬಳೂರು ವಾರ್ಡಿನಲ್ಲಿ ಅಭಿವೃದ್ಧಿ ಕೆಲಸವಾಗುತ್ತಿದೆ ನೀವು ಸುಮ್ಮನೆ ಆರೋಪ ಮಾಡುತ್ತಿದ್ದೀರಿ. ನಾನು ಕಾನೂನು ಚೌಕಟ್ಟಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು. ಇದರಿಂದ ಕುಪಿತರಾದ ಸದಸ್ಯರು ಯಾವ ಅಭಿವೃದ್ಧಿ ಕೆಲಸವಾಗಿದೆ ಎಂದು ವಿವರಕೊಡಿ ಎಂದರು. ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಕೆಲವು ಅಭಿವೃದ್ಧಿ ಕಾಮಗಾರಿಯ ಕ್ರಿಯಾಯೋಜನೆಯನ್ನು ಸಹ ತಯಾರಿಸಲಾಗಿದೆ ಮತ್ತು ಗ್ರಾ.ಪಂ.ಯ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿಲ್ಲ ಎಂದು ಪಿಡಿಓ ಹೇಳಿದಾಗ ಮತ್ತಷ್ಟು ಕೆರಳಿದ ಸದಸ್ಯರು ಕ್ರಿಯಾಯೋಜನೆ ತಯಾರಿಸಿದ ಮೇಲೆ ಕಾಮಗಾರಿ ಕಾರ್ಯದ ಟೆಂಡರ್ ಯಾಕೆ ಕರೆದಿಲ್ಲ? ನೀವು ಒಬ್ಬರು ಜವಾಬ್ದಾರಿ ಇರುವ ಅಧಿಕಾರಿಯಾಗಿದ್ದೀರಿ, ನಿಮಗೆ ಇಲ್ಲಿ ಕೆಲಸ ಮಾಡಲಿಕೆ ಆಗಿಲ್ಲ ಅಂದಮೇಲೆ ಬೇರೆಕಡೆಗೆ ಹೋಗಿ ಎಂದರು. ಇದಕ್ಕೆ ಉತ್ತರಿಸಿದ ಪಿಡಿಓ ನಾನು ಈ ಗ್ರಾ.ಪಂ.ಗೆ ಖಾಯಂ ಅಧಿಕಾರಿಯಾಗಿದ್ದೇನೆ, ಬೇರೆಕಡೆಗೆ ಹೋಗಿ ಎಂದು ಹೇಳುವ ಅಧಿಕಾರ ನಿಮಗಿಲ್ಲ ಎಂದರು. ಸದಸ್ಯರು ಮತ್ತು ಪಿಡಿಓ ಅವರ ಕಿತ್ತಾಟವನ್ನು ಗಮನಿಸಿದ ಗ್ರಾ.ಪಂ. ಉಪಾಧ್ಯಕ್ಷ ಬಿ.ಎ. ಅಹಮದ್ ಸಮಾಧಾನಪಡಿಸಿದರು.

ನಂತರ ನಡೆದ ಚರ್ಚೆಯಲ್ಲಿ ಪ್ರಸ್ತಾಪಿಸಿದ ಸದಸ್ಯರಾದ ಹೇಮಾವತಿ, ಬಿ.ಕೆ. ದಿನೇಶ್ ಗ್ರಾ.ಪಂ.ಯ ಆದಾಯ ಹೆಚ್ಚಿಸಬೇಕಾದರೆ ಮನೆ ಕಂದಾಯ ಸೇರಿದಂತೆ ವಿವಿಧ ಕರವಸೂಲಿ ಸಮರ್ಪಕವಾಗಿ ವಸೂಲಾತಿ ಮಾಡಬೇಕಾಗಿದೆ. ಇದರ ಆದಾಯದಿಂದ ಗ್ರಾ.ಪಂ.ನ್ನು ಅಭಿವೃದ್ಧಿ ಪಡಿಸಬಹುದು ಎಂದು ಸಲಹೆ ನೀಡಿದರು. ಗ್ರಾ.ಪಂ. ಶೇ. 25 ರ ಅನುದಾನದಲ್ಲಿ ಗ್ರಾ.ಪಂ. ವ್ಯಾಪ್ತಿಯ ಎಸ್‍ಸಿ ಮತ್ತು ಎಸ್‍ಟಿ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸದಸ್ಯರಾದ ರೇಣುಕ ಮೇದಪ್ಪ, ಈರಪ್ಪ, ಗೌರಮ್ಮ ದೊಡ್ಡಯ್ಯ, ಸಾವಿತ್ರಿ ಕುಮಾರ್ ಮತ್ತಿತರರು ಹಾಜರಿದ್ದರು.