ಮಡಿಕೇರಿ, ನ. 1: ಭಾರತದ ಯುವ ಜನಾಂಗಕ್ಕೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ದೇಶದಲ್ಲಿ ಆರ್ಥಿಕ ದಿವಾಳಿತನಕ್ಕೆ ಹೊಣೆ ಹೊರಬೇಕಿದೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಬಾರಿ ಕೆ.ಸಿ. ವೇಣುಗೋಪಾಲ್ ಟೀಕಿಸಿದ್ದಾರೆ.ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಒಳ್ಳೆಯ ದಿನಗಳು ಬರಲಿವೆ ಎಂದು ಸುಳ್ಳಿನ ಕಂತೆ ಹೆಣೆದು ಅಧಿಕಾರ ಹಿಡಿದ ಬಿಜೆಪಿ ದೇಶದ ಜನತೆಗೆ ಭ್ರಮನಿರಶನ ಮೂಡಿಸಿದೆ ಎಂದು ಆರೋಪಿಸಿದರು.ವಿದೇಶದಿಂದ ಕಪ್ಪು ಹಣ ಹಿಂತಿರುಗಿ ತರುವದು, ನೋಟು ಅಮಾನ್ಯತೆ ಯಿಂದ ಭಯೋತ್ಪಾದನೆ ಹಾಗೂ ಕಾಳಧನ ನಿಯಂತ್ರಣ ಮಾಡುವ ಮೂಲಕ ಬಡವರ ಖಾತೆಗೆ ಹಣ ಹೂಡುವ ದಾಗಿ ಹೇಳಿ, ಕಳೆದ ಮೂರುವರೆ ವರ್ಷದಿಂದ ಜನರನ್ನು ಮೋಸ ಗೊಳಿಸಿದೆ ಎಂದು ವೇಣುಗೋಪಾಲ್ ಪ್ರತಿಪಾದಿಸಿದರು.

ದೇಶದಲ್ಲಿ ಮೋದಿ ಅವರಿಗೆ ಪರ್ಯಾಯ ನಾಯಕರಾಗಿ ರಾಹುಲ್ ಗಾಂಧಿ 2019ರ ಚುನಾವಣೆಯಲ್ಲಿ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಕೇಂದ್ರ ಸರಕಾರದ ಜನವಿರೋಧಿ ಕಾರ್ಯಕ್ರಮಗಳಿಂದ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಏಕರೂಪ ತೆರಿಗೆ ಪದ್ಧತಿ ಜಿಎಸ್‍ಟಿಯಿಂದ ದೇಶದಲ್ಲಿ ಎಲ್ಲವೂ ದುಬಾರಿಯಾಗಲಿದೆ ಎಂದು ಟೀಕಿಸಿದ ಅವರು, ಕೇಂದ್ರ ಸರಕಾರ ಬಡವರಿಗೆ ಅನುಕೂಲ ದೊರಕಿಸುವ ಬದಲಿಗೆ ಬೃಹತ್ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳಿಗೆ ಉತ್ತೇಜನ ಕಲ್ಪಿಸಿದೆ ಎಂದು ಟೀಕಿಸಿದ ಅವರು, ಹೀಗಾಗಿ ದೇಶದ ಜನತೆ ಕಾಂಗ್ರೆಸ್‍ನತ್ತ ಒಲವು ಹೊಂದುತ್ತಿರುವದಾಗಿ ಸಮರ್ಥಿಸಿಕೊಂಡರು.

ಕರ್ನಾಟಕದಲ್ಲಿ ಟಿಪ್ಪು ಜಯಂತಿಗೆ ವಿರೋಧಿಸುವ ಬಿಜೆಪಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಠ (ಮೊದಲ ಪುಟದಿಂದ) ಕಲಿಸಿದ್ದು, ಟಿಪ್ಪು ಓರ್ವ ಸ್ವಾತಂತ್ರ್ಯ ಹೋರಾಟ ಗಾರನೆಂದು ಆತನ ಜಯಂತಿಯನ್ನು ರಾಜ್ಯ ಸರಕಾರ ಆಚರಿಸುವಂತಾಗಿದೆ ಎಂದು ಸಮರ್ಥನೆ ನೀಡಿದರು. ಗೋವಿನ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಲಾಗುತ್ತಿದ್ದು, ಜಾತ್ಯತೀತ ಕಾಂಗ್ರೆಸ್ ಎಲ್ಲರಿಗೂ ನ್ಯಾಯ ಹಾಗೂ ಸಮಾನತೆ ಕಲ್ಪಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಬದಲಾಗುತ್ತಿರುವ ಸನ್ನಿವೇಶದಿಂದ ಕಾಂಗ್ರೆಸ್ ಪ್ರಮುಖರು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಮುಂದಿನ ಚುನಾವಣೆ ಎದುರಿಸುವ ಮೂಲಕ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ವೇಣುಗೋಪಾಲ್ ಕರೆ ನೀಡಿದರು.

ಭೂಮಿ ಪೂಜೆ: ಕಾಂಗ್ರೆಸ್ ನಾಯಕರೊಂದಿಗೆ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಗೆಲುವಿಗೆ ಬೆಂಬಲ ಕೋರುತ್ತಾ, ರಾಜ್ಯ ಸರಕಾರದ ಸಾಧನೆಗಳನ್ನು ವಿವರಿಸಿದರು. ಗಣಪತಿ ಬೀದಿಯಲ್ಲಿ ಅಭಿಯಾನ ನಡೆಸಿದ ಬಳಿಕ ಗಾಂಧಿ ಮೈದಾನ ರಸ್ತೆಯ ಕಾಫಿ ಕೃಪಾ ಬಳಿ ಪಕ್ಷದ ನಿವೇಶನದಲ್ಲಿ ನೂತನ ಕಚೇರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ರಾಜ್ಯದಿಂದ ಕಚೇರಿ ನಿರ್ಮಾಣಕ್ಕೆ ರೂ. 2 ಲಕ್ಷ ಪ್ರಕಟಿಸಿದರು. ಅಧಿಕ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.