ಮಡಿಕೇರಿ, ನ. 2: ಭತ್ತ ಸೇರಿದಂತೆ ರಾಗಿ, ಜೋಳ, ನವಣೆ, ಸಾಮೆ, ಕಂಬು ಇವುಗಳು ಮಳೆಯಾಶ್ರಿತ ಸಿರಿಧಾನ್ಯ ಬೆಳೆಗಳಾಗಿದ್ದು, ಈ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಸಲಹೆ ಮಾಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ಭತ್ತವು ಸಹ ಸಿರಿಧಾನ್ಯ ಬೆಳೆಯಾಗಿದ್ದು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾಶ್ರಿತ ಬೆಳೆಯಾದ ಭತ್ತ ಬೆಳೆಯಲು ಮುಂದಾಗಬೇಕು. ಯಾವದೇ ಕಾರಣಕ್ಕೂ ಭೂಮಿಯನ್ನು ಪಾಳು ಬಿಡಬಾರದು. ಸರ್ಕಾರ ಕ್ವಿಂಟಾಲ್ ಭತ್ತಕ್ಕೆ ರೂ. 1550 ಬೆಂಬಲ ಬೆಲೆ ನೀಡುತ್ತಿದೆ ಎಂದರು.

ಪ್ರತಿಯೊಬ್ಬರಿಗೂ ಊಟಕ್ಕೆ ಆಹಾರ ಭದ್ರತೆ ಪ್ರಥಮ ಆದ್ಯತೆ. ಜೊತೆಗೆ ಆರ್ಥಿಕ ಭದ್ರತೆಯು ಸಹ ಅತೀ ಮುಖ್ಯ. ಆ ನಿಟ್ಟಿನಲ್ಲಿ ಕೃಷಿ ಭೂಮಿ ಸದ್ಭಳಕೆ ಮಾಡಿಕೊಳ್ಳುವತ್ತ ಉತ್ತೇಜನ ನೀಡಬೇಕು ಎಂದು ಅವರು ನುಡಿದರು. ಭತ್ತ, ರಾಗಿ, ತೊಗರಿ ಬದಲಾಗಿ ಮುಸುಕಿನ ಜೋಳ, ಅಡಿಕೆ ಜೊತೆಗೆ ಹತ್ತಿ ಬೆಳೆಯುವದು ಹೆಚ್ಚಾಗುತ್ತಿದೆ. ಇದು ಸಮರ್ಪಕವಲ್ಲ, ರಾಗಿ, ಜೋಳ, ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳನ್ನು ಹೆಚ್ಚಾಗಿ ಬೆಳೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

(ಮೊದಲ ಪುಟದಿಂದ) ಸರ್ಕಾರ ಭತ್ತ, ತೊಗರಿ, ರಾಗಿ, ಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಮಾಡುತ್ತಿದೆ. ಆದರೆ ಜೋಳ, ರಾಗಿ, ಭತ್ತ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ ಪದಾರ್ಥದಲ್ಲಿ ಕೊರತೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಳುಮೆಣಸು ರಾಜ್ಯ ವ್ಯಾಪ್ತಿಗೆ ಬರುವದಿಲ್ಲ. ಆದರೂ ಸಹ ರೈತರ ಸಂಕಷ್ಟ ನಿವಾರಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕರಿಮೆಣಸು ಆಮದು ತಡೆಯುವ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡುವ ನಿಟ್ಟಿನಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವದು ಎಂದು ಹೇಳಿದರು. ರೈತರಾದ ಭಾಗಮಂಡಲದ ಹರ್ಷ ಅವರು ಭತ್ತ ಬೆಳೆಗೆ ಕನಿಷ್ಟ ರೂ. 2 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.

ಕಪಣಪ್ಪ ಮಾತನಾಡಿ, ಹಿಂದೆ 10 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದೆ, ಈಗ 4 ಎಕರೆಗೆ ಬಂದಿದ್ದೇನೆ. ಭತ್ತ ಬೆಳೆಯುವದರಿಂದ ಯಾವದೇ ಪ್ರಯೋಜನವಿಲ್ಲದಂತಾಗಿದೆ. ಆದ್ದರಿಂದ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.

ಚೇರಂಬಾಣೆಯ ಹ್ಯಾರಿ ತಮ್ಮಯ್ಯ ಮಾತನಾಡಿ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಪರಿಹಾರ ಹೆಚ್ಚಾಗಿ ಒದಗಿಸಬೇಕು ಎಂದರು. ರೈತರಾದ ತೇಜಸ್ ಭತ್ತ ಬೆಳೆಗೆ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸಬೇಕಿದೆ. ಜಾನುವಾರುಗಳನ್ನು ಸಾಕಲು ಹೆಚ್ಚಿನ ಉತ್ತೇಜನ ನೀಡಬೇಕಿದೆ ಎಂದು ಅವರು ಹೇಳಿದರು.

ಮಾಜಿ ಸೈನಿಕ ತಿಮ್ಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಹೋಬಳಿಗೊಂದು ಮಣ್ಣು ಪರೀಕ್ಷಾ ಕೇಂದ್ರಗಳು ಸ್ಥಾಪಿಸಬೇಕು ಎಂದರು. ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ರೂ. 60 ರಿಂದ 70 ಇದೆ. ಆದರೆ ಭತ್ತಕ್ಕೆ ರೂ. 15 ಮಾತ್ರ ಇದೆ. ಇದರಿಂದ ರೈತರಿಗೆ ಪ್ರಯೋಜನವೇನು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬೆಳೆಗಾರರ ಒಕ್ಕೂಟದ ವಿಶ್ವನಾಥ್ ಇಂಡೋನೇಷಿಯಾ, ವಿಯೆಟ್ನಾಂ ಮತ್ತು ಶ್ರೀಲಂಕಾದಿಂದ ಕರಿಮೆಣಸು ಆಮದಾಗಿದ್ದು, ಈ ಸಂಬಂಧ ಎಸಿಬಿಯಿಂದ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಕರಿಮೆಣಸು ಆಮದು ತಡೆಯುವ ನಿಟ್ಟಿನಲ್ಲಿ ಆನ್‍ಲೈನ್ ಮೂಲಕ ಅಭಿಯಾನ ನಡೆಯುತ್ತಿದ್ದು, ಸುಮಾರು 2,500 ರೈತರು ಸಹಿ ಮಾಡಿದ್ದಾರೆ ಎಂದು ಅವರು ವಿವರಿಸಿದರು. ರೈತರಾದ ಎಂ.ಬಿ. ದೇವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಭತ್ತ ಬೆಳೆ ಕಡಿಮೆಯಾಗುತ್ತಿದ್ದು, ಭತ್ತ ಬೆಳೆಯಲು ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಹೇಳಿದರು.

ರೈತರಾದ ಕುಮಾರ, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ದೇವಕಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ವೀರೇಂದ್ರ ಕುಮಾರ್, ಸಂಬಾರ ಮಂಡಳಿಯ ನಿರ್ದೇಶಕ ಅಂಕೇಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ, ಮಂಜುನಾಥ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್, ರಮೇಶ್, ಇತರರು ಹಲವು ಮಾಹಿತಿ ನೀಡಿದರು.