ಸಿದ್ದಾಪುರ, ನ. 2: ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳು ಹಾಡುಹಗಲೆ ರಸ್ತೆಯಲ್ಲಿ ರಾಜರೋಷವಾಗಿ ಸುತ್ತಾಡುತ್ತಿದ್ದು, ವಾಹನ ಸವಾರರು ಸೇರಿದಂತೆ ಕಾರ್ಮಿಕರು ಭಯಭೀತರಾದ ಪ್ರಸಂಗ ಎದುರಾಗಿದೆ.

ಇಲ್ಲಿನ ಪಾಲಿಬೆಟ್ಟ ರಸ್ತೆಯ ಬೀಟಿಕಾಡು ತೋಟದಿಂದ ಮುಖ್ಯರಸ್ತೆಗಾಗಿ ಸುಮಾರು 15 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಯಾವದೇ ಭೀತಿಯಿಲ್ಲದೆ ಸಂಚರಿ ಸುತಿದ್ದು ರಸ್ತೆಯಲ್ಲಿ ಸಂಚರಿಸುತಿದ್ದ ವಾಹನಗಳ ಮೇಲೆ ಏಕಾಏಕಿ ಧಾಳಿಗೆ ಮುಂದಾದ ಪ್ರಸಂಗವೂ ನಡೆಯಿತು. ಕಾಡಾನೆಯನ್ನು ಕಂಡ ವಾಹನ ಚಾಲಕರು ತಮ್ಮ ವಾಹನವನ್ನು ಹಿಂದಕ್ಕೆ ತೆಗೆದರು. ಕಾಡಾನೆ ಹಿಂಡು ರಸ್ತೆಯಲ್ಲೇ ನಿಂತ ಕಾರಣ ಕೆಲ ಕಾಲ ಪಾಲಿಬೆಟ್ಟ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡು ವಾಹನಗಳು ಸಾಲಾಗಿ ನಿಂತಿದ್ದವು.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಭಯಭೀತ ರಾಗಿದ್ದಾರೆ. ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಾಲಿಬೆಟ್ಟ ರಸ್ತೆಯ ಬೀಟಿಕಾಡು ಸಮೀಪ ರಸ್ತೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ಹಿಂಡಿನಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿದ ಕಾಡಾನೆಯೂ ಇತ್ತು. ಹೆಣ್ಣಾನೆಯ ಕುತ್ತಿಗೆಯಲ್ಲಿ ಅಳವಡಿಸಿದ ರೇಡಿಯೋ ಕಾಲರ್ ನೋಡಿ ಕೆಲವರು ಇದು ಸಾಕಾನೆ ಯೆಂದು ಸಂಶಯ ವ್ಯಕ್ತಪಡಿಸಿದರು. ಕಾಡಾನೆಯ ಚಲನವಲನ ಅರಿಯಲು ಇತ್ತೀಚೆಗೆ ಅರಣ್ಯ ಇಲಾಖೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದೆ.

-ಎ.ಎನ್. ವಾಸು