ಗೋಣಿಕೊಪ್ಪಲು, ನ. 2: ಸುಳುಗೋಡು ಗ್ರಾಮದಲ್ಲಿ ಸೇರಿಕೊಂಡಿರುವ ಹುಲಿಯೊಂದು ಮತ್ತೆ ಕರುವಿನ ಧಾಳಿ ನಡೆಸಿರುವ ಘಟನೆ ನಡೆದಿದೆ. ಅಲ್ಲಿನ ಸುಳ್ಳಿಮಾಡ ಕಿರಣ್ ಎಂಬವರಿಗೆ ಸೇರಿದ ಹಸುವನ್ನು ಕಳೆದ 4 ದಿನಗಳ ಹಿಂದಷ್ಟೆ ಕೊಂದು ಹಾಕಿದ್ದ ಹುಲಿ ಮತ್ತೆ ಕರುವಿನ ಮೇಲೆರಗುವ ಮೂಲಕ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗದ್ದೆಯಲ್ಲಿ ಕಟ್ಟಿಹಾಕಿದ್ದ ಕರುವಿನ ಮೇಲೆರಗಲು ಹುಲಿ ಬಂದಿದೆ. ಕರುವಿನ ಮೇಲೆ ಧಾಳಿ ನಡೆಸುವ ಸಂದರ್ಭ ಕಾರ್ಮಿಕರು ಕೂಗಿ ಕೊಂಡಿದ್ದರಿಂದ ಕರುವನ್ನು ಬಿಟ್ಟು ಓಡಿ ಕಾಡು ಸೇರಿಕೊಂಡಿದೆ. ಈ ಬಗ್ಗೆ ಮತ್ತಿಗೊಡು ವನ್ಯಜೀವಿ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಹಲವು ದಿನಗಳಿಂದ 8ಕ್ಕೂ ಹೆಚ್ಚು ಜಾನುವಾರುಗಳು ಹುಲಿಬಾಯಿಗೆ ಆಹುತಿಯಾಗುತ್ತಿದ್ದರೂ, ಅರಣ್ಯ ಇಲಾಖೆ ರೈತರ ಪರ ನಿಲ್ಲುತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೋನ್ ಇಟ್ಟು ಹುಲಿಯನ್ನು ಹಿಡಿಯಲು ಮುಂದಾಗದೆ ಹಿರಿಯ ಅಧಿಕಾರಿಗಳು ಬೋನ್ ಇಡಲು ಸಮ್ಮತಿ ಸೂಚಿಸುತ್ತಿಲ್ಲ ಎಂಬ ಬೇಜವ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ನಮಗೆ ಆತಂಕ ಮೂಡಿಸಿದೆ. ಇಲಾಖೆಯ ವಿರುದ್ಧ ಗ್ರಾಮದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳಿಯರು ಎಚ್ಚರಿಸಿದ್ದಾರೆ.