ವೀರಾಜಪೇಟೆ, ನ. 2: ರಾಜ್ಯದ ವಿವಿಧೆಡೆಗಳಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ವಾಸಿಗಳಿಗೆ ಸರ್ಕಾರದ ಮುಂದಾಲೋಚನೆಯಿಂದ ಸೂರು ಹೊಂದಲು ನೀಡಿದ ಸ್ಥಳಗಳಿಗೆ ನೀಡುವ ಹಕ್ಕು ಪತ್ರವನ್ನು ಇತರರಿಗೆ ಪರಭಾರೆ ಮಾಡದೇ ಜೋಪಾನ ಮಾಡಿಕೊಳ್ಳಿ ಎಂದು ರಾಜ್ಯ ಯೋಜನಾ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಅರ್. ಸೀತಾರಾಂ ಫಲಾನುಭವಿಗಳಿಗೆ ಕರೆ ನೀಡಿದರು.

ಕಂದಾಯ ಇಲಾಖೆ ವೀರಾಜಪೇಟೆ ತಾಲೂಕು ಆಡಳಿತ ವತಿಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 94 (ಸಿ) ರ ಅಡಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ನಗರದ ಮಹಿಳಾ ಸಮಾಜದ ಸಭಾಂಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿ ಹಕ್ಕು ಪತ್ರ ವಿತರಿಸಿ ಮಾತನಾಡಿದ ಸಚಿವ ಎಂ.ಅರ್. ಸೀತಾರಾಂ, ಇದು ವೀರಾಜಪೇಟೆ ಕ್ಷೇತ್ರದಲ್ಲಿ ಮೂರನೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವಾಗಿರುತ್ತದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳ ಅನುಮತಿಯ ಮೇರೆಗೆ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ವಾಸಿಸುವ ಸೂರು ಇಲ್ಲದ ನಿರ್ಗತಿಕರಿಗೆ ಶಾಶ್ವತ ನೆಲೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುತ್ತಿದೆ. ಸತತವಾಗಿ ಹಕ್ಕು ಪತ್ರ ಪಡೆಯಲು ಹಲವಾರು ರೀತಿಯಲ್ಲಿ ಶ್ರಮ ಪಟ್ಟಿರುತ್ತೀರಿ. ಅದನ್ನು ಮನಗಂಡ ರಾಜ್ಯ ಸರ್ಕಾರ ತಮ್ಮ ಶ್ರಮಕ್ಕೆ ದಿಕ್ಕು ತೋರಲು ತಮಗೆ ಸ್ಥಳದ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಸರ್ಕಾರ ನೀಡಿರುವ ಹಕ್ಕು ಪತ್ರವನ್ನು ಯಾವದೇ ವ್ಯಕ್ತಿಗೆ ಪರಭಾರೆ ಮಾಡದೆ ಸುರಕ್ಷಿತವಾಗಿ ತಮ್ಮ ಬಳಿ ಇರಿಸಿಕೊಳ್ಳಿರಿ. ಹಕ್ಕು ಪತ್ರವನ್ನು ದುರುಪಯೋಗ ಪಡಿಸಿಕೊಂಡಲ್ಲಿ ಸರ್ಕಾರದದಿಂದ ದೊರೆಯುವ ಇತರ ಸೌಲಭ್ಯಗಳಿಂದ ವಂಚಿತರಾಗುವಿರಿ ಎಂದು ಎಚ್ಚರಿಕೆ ನೀಡಿದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪ್ಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಅರ್ಹ ಫಲಾನುಭವಿಗಳನ್ನು ಗುರುತಿಸಿ ತಮಗೆ ನೀಡಿರುವ ಹಕ್ಕು ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳದೆ ಜಾಗ್ರತೆ ವಹಿಸಬೇಕು. ಬಡತನ ರೇಖೆಗೆ ಕೆಳಗಿರುವ ನಿರ್ಗತಿಕ ಕುಟುಂಬಗಳಿಗೆ ವಾಸಿಸಲು ಸ್ಥಳ ನೀಡಿದ್ದು, ಮುಂದಿನ ದಿನಗಳಲ್ಲಿ ಸ್ವಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಸಹಾಯಧನವನ್ನು ಕೂಡ ಒದಗಿಸಲಾಗುತ್ತದೆ. ಸದನದ ಯಾವದೇ ಕಲಾಪಗಳಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಅನುಷ್ಠಾನ ಮಾಡುವವರೆಗೂ ಪಟ್ಟು ಬಿಡದಾ ಕಾಗೋಡು ತಿಮ್ಮಪ್ಪ ಅವರು ಭೂ ಕಾಯ್ದೆಯನ್ನು ಜಾರಿಗೆ ತಂದು ಅನುಷ್ಠಾನಗೊಳಿಸುವಲ್ಲಿ ಸಫಲರಾಗಿದ್ದಾರೆ. ಹಲವು ವರ್ಷಗಳಿಂದ ಹಕ್ಕು ಪತ್ರವಿಲ್ಲದೇ ಪರಿತಪಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಉತ್ತಮ ಕಾರ್ಯವಾಗಿದೆ ಎಂದರು. ಹಕ್ಕು ಪತ್ರ ಪಡೆದ ತಾಲೂಕಿನ ಎಲ್ಲಾ ಫಲಾನುಭವಿಗಳು ಹಕ್ಕು ಪತ್ರದಲ್ಲಿ ನೀಡಿರುವ ಕಾನೂನುಗಳನ್ನು ಪರಿಪಾಲನೆ ಮಾಡಬೇಕು ಎಂದರು. ಸಮಾರಂಭದಲ್ಲಿ ವೀರಾಜಪೇಟೆ ತಾಲೂಕಿನ ಬಾಳೆಲೆ ಹೋಬಳಿಯಲ್ಲಿ 48, ಶ್ರೀಮಂಗಲ ಹೋಬಳಿಯಲ್ಲಿ 63, ಅಮ್ಮತ್ತಿ ಹೋಬಳಿಯಲ್ಲಿ 95 ಮತ್ತು ವೀರಾಜಪೇಟೆ ಹೋಬಳಿಯಲ್ಲಿ 43 ಹೀಗೆ ಒಟ್ಟು 249 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ರಾಜ್ಯ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರಾಜ್ಯ ಅರಣ್ಯ ನಿಗಮದ ಉಪಧ್ಯಾಕ್ಷೆ ಪದ್ಮಿನಿ ಪೊನ್ನಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮತ್ತು ಉಪಾಧ್ಯಕ್ಷ ಚಲನ್ ಕುಮಾರ್, ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಜಿ.ಪಂ. ಸದಸ್ಯೆ ಲೀಲಾವತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ತಹಶೀಲ್ದಾರ್ ಗೊವಿಂದರಾಜು, ತಾ.ಪಂ. ಸದಸ್ಯರಾದ ಪ್ರಶಾಂತ್, ಬಾನಂಡ ಪ್ರಥ್ಯು, ಪೆಲ್ವಿನ್ ಪೂಣಚ್ಚ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಉಪಾಧ್ಯಕ್ಷ ತಸ್ನಿಂ ಅಖ್ತರ್ ಉಪಸ್ಥಿತರಿದ್ದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚಾಲ್ಸ್ ಡಿಸೋಜ ಸ್ವಾಗತಿಸಿ, ನಿರೂಪಿಸಿದರು. ಪೊನ್ನಂಪೇಟೆ ಕಂದಾಯ ಪರಿವೀಕ್ಷಕ ರಾಧಾಕೃಷ್ಣ ವಂದಿಸಿದರು. - ಕೆ.ಕೆ.ಎಸ್. ವೀರಾಜಪೇಟೆ