ಗೋಣಿಕೊಪ್ಪಲು, ನ. 1: ಹಾಕಿ ಲೀಗ್ ಫೈನಲ್‍ನಲ್ಲಿ ಬೇಗೂರು ಈಶ್ವರ ಯೂತ್ ಕ್ಲಬ್ ಜಯಗಳಿಸುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಸೋಲನುಭವಿಸಿದ ಹಾತೂರು ಸ್ಪೋಟ್ರ್ಸ್ ಕ್ಲಬ್ ಚಾಂಪಿಯನ್ ಪಟ್ಟ ಕಳೆದುಕೊಳ್ಳುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ಬುಧವಾರ ನಡೆದ ಫೈನಲ್ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಉಭಯ ತಂಡಗಳ ಸಮಬಲದ ಆಟ ಹಾಕಿಪ್ರಿಯರಲ್ಲಿ ಸಂಚಲನ ಮೂಡಿಸಿತು. ಎರಡು ತಂಡಗಳ ಗೋಲು ಪೆಟ್ಟಿಗೆಯತ್ತ ಸಾಗುತ್ತಿದ್ದ ಚೆಂಡು ಯಾವ ತಂಡ ಗೆಲ್ಲುತ್ತದೆ ಎಂಬವದನ್ನು ನಿರ್ಧರಿಸಲು ಅವಕಾಶ ನೀಡದಂತೆ ಆಟ ಪ್ರದರ್ಶಗೊಂಡಿತು.
ಶೂಟ್‍ನಲ್ಲಿ ಹಾತೂರು ತಂಡದ ಕಳಪೆ ನಿರ್ವಹಣೆ ಚಾಂಪಿಯನ್ ಪಟ್ಟ ಕಳಚಿಕೊಳ್ಳುವಂತಾಯಿತು. ಬೇಗೂರು ತಂಡವು 5-2 ಗೋಲುಗಳ ಅಂತರದಲ್ಲಿ ಜಯ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು.
ಬೇಗೂರು ಪರ ಪಂದ್ಯದ 1 ನೇ ನಿಮಿಷದಲ್ಲಿ ಮಣಿ, 50 ನೇ (ಪಿಸಿ) ನಿಮಿಷದಲ್ಲಿ ಅಯ್ಯಮ್ಮ, ಹಾತೂರು ಪರ 4 ನೇ ನಿಮಿಷದಲ್ಲಿ ಗಣಪತಿ, 40ನೇ ನಿಮಿಷದಲ್ಲಿ ಶಾನ್ ಗೋಲು ಹೊಡೆದರು. ಬೇಗೂರು ತಂಡಕ್ಕೆ 3, ಹಾತೂರು ತಂಡಕ್ಕೆ 2 ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು.
ಪಂದ್ಯದ ಪೂರ್ಣ ಅವಧಿಯಲ್ಲಿ ಉಭಯ ತಂಡಗಳು 2-2 ಗೋಲುಗಳ ಸಮಬಲದ ಮೂಲಕ ಡ್ರಾ ಸಾಧನೆ ಮಾಡಿತು. ಶೂಟೌಟ್‍ನಲಿ ಹಾತೂರು ತಂಡದ ಆಟಗಾರರು ನೀರಸ ಪ್ರದರ್ಶನ ನೀಡಿದರು. ಚೆಂಡನ್ನು ತಳ್ಳಲು ತೆರಳಿದ್ದ ಗಣಪತಿ, ಸೋಮಣ್ಣ ಹಾಗೂ ಅಪ್ಪಯ್ಯ ಗೋಲು ದಾಖಲಿಸಲಿಲ್ಲ. ಬೇಗೂರು ತಂಡದ ಆಟಗಾರರುಗಳಾದ ದೀಪಕ್, ವರುಣ್ ಹಾಗೂ ಮಿಲನ್ ಗೋಲು ದಾಖಲಿಸಿದರು.
ಇದೇ ಮೊದಲ ಬಾರಿಗೆ ಮೂರನೇ ಅಂಪೈಯರ್ ತೀರ್ಪಿಗೆ ಮೊರೆ ಹೋಗಲಾಯಿತು. ಹಾತೂರು ತಂಡದ ಆಟಗಾರ ಶಾನ್ ಬಾರಿಸಿದ ಗೋಲು ಸರಿಯೇ ಎಂಬವದನ್ನು ಪರೀಕ್ಷಿಸಲು ತೀರ್ಪುಗಾರ ಮನವಿ ಸಲ್ಲಿಸಿದರು. ವೀಡಿಯೋ ಕ್ಲಿಪಿಂಗ್ ವೀಕ್ಷಿಸುವ ಮೂಲಕ ಗೋಲು ಎಂದು ತೀರ್ಪು ನೀಡಲಾಯಿತು.
ಗಣಪತಿ ಸರಣಿ ಶ್ರೇಷ್ಠ : ಮ್ಯಾನ್ ಆಫ್ ಸೀರಿಸ್ ಆಗಿ ಹಾತೂರು ತಂಡದ ಗಣಪತಿ, ಭವಿಷ್ಯದ ಆಟಗಾರನಾಗಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್‍ನ ಯಶ್ವಂತ್, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಬೇಗೂರು ತಂಡದ ವೇಣು, ಬೆಸ್ಟ್ ಡಿಫೆಂಡರ್ ಆಗಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ಶರತ್, ಮಿಡ್ ಫೀಲ್ಡರ್ ಆಗಿ ಚಾರ್ಮರ್ಸ್ ತಂಡದ ಮಾರ್ಚಂಡ ಸೋಮಣ್ಣ, ಸ್ಟ್ರೈಕರ್ ಪ್ರಶಸ್ತಿಯನ್ನು ಪೊನ್ನಂಪೇಟೆ ತಂಡದ ಟಿ. ತರುಣ್, ಪಡೆದುಕೊಂಡರು.
22 ದಿನ ನಡೆದ ಟೂರ್ನಿಗೆ ಸಂಭ್ರಮದ ತೆರೆ ಎಳೆಯಲಾಯಿತು. ಸಮಾರೋಪದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ಹಾಕಿಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಟೂರ್ನಮೆಂಟ್ ಕಮಿಟಿ ಅಧ್ಯಕ್ಷ ಬುಟ್ಟಿಯಂಡ ಚೆಂಗಪ್ಪ, ಪಂದ್ಯಾವಳಿ ನಿರ್ದೇಶಕ ನೆಲ್ಲಮಕ್ಕಡ ಪವನ್, ದಾನಿಗಳಾದ ಕುಟ್ಟಂಡ ತಂಗಿ, ಕುಟ್ಟಂಡ ರಾಜಾ ಗಣಪತಿ, ಸೋಮೆಯಂಡ ದೇವಕಿ, ಸೋಮಣ್ಣ, ಪೊನ್ನಣ್ಣ ನಗದು ಹಾಗೂ ಟ್ರೋಫಿ ವಿತರಿಸಿದರು.
ಪಂದ್ಯಾವಳಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ಅನ್ನಾಡಿಯಂಡ ಪೊನ್ನಣ್ಣ, ಚೋಯಮಾಡಂಡ ಚೆಂಗಪ್ಪ, ತಾಂತ್ರಿಕ ವರ್ಗದಲ್ಲಿ ಹರಿಣಾಕ್ಷಿ, ಅಪ್ಪಣ್ಣ, ಕೊಂಡೀರ ಕೀರ್ತಿ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ ವೀಕ್ಷಕ ವಿವರಣೆ ನೀಡಿದರು.