ಮಡಿಕೇರಿ, ನ. 2: ಇಲ್ಲಿನ ವೆಬ್ಸ್ ಬಳಿ ಮಡಿಕೇರಿ ನಗರಸಭೆಯಿಂದ ನಡೆಯುತ್ತಿರುವ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ತೀರಾ ಕಳಪೆಗೊಂಡಿರುವದು ಗೋಚರಿಸಿದೆ. ಅಂದಾಜು ರೂ. 5 ಕೋಟಿ ವೆಚ್ಚದ ಬಹು ನಿರೀಕ್ಷೆಯ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಪ್ರಾರಂಭ ದಿಂದಲೂ ಹಲವು ತೊಡಕುಗಳಿದ್ದು, ಎಲ್ಲ ನಿವಾರಣೆಯೊಂದಿಗೆ ಇನ್ನೇನು ಕೆಲಸ ಶುರುವಾಗಿದೆ ಎನ್ನುವಷ್ಟರಲ್ಲಿ ಇದೀಗ ಅಡಿಪಾಯದಲ್ಲೇ ಸಂಶಯ ಹುಟ್ಟಿಕೊಂಡಿದೆ.ಮೈಸೂರಿನ ಗುತ್ತಿಗೆದಾರ ಸಿದ್ದಪ್ಪ ಎಂಬವರಿಗೆ ರೂ. 4.99 ಕೋಟಿಯ ಕಾಮಗಾರಿಗೆ ಟೆಂಡರ್ ನೀಡಲಾಗಿದ್ದು, ಕಳೆದ ವರ್ಷಾಂತ್ಯಕ್ಕೆ ಭೂಮಿಪೂಜೆ ನೆರವೇರಿಸುವದ ರೊಂದಿಗೆ, ಶಾಸಕ ಅಪ್ಪಚ್ಚು ರಂಜನ್ ಸಹಿತ ಬಿಜೆಪಿಯ ನಗರಸಭಾ ಸದಸ್ಯರು ನಿವೇಶನದ ಕುರಿತಾಗಿ ಆಕ್ಷೇಪಿಸಿದ್ದರು.

ಅನಂತರದಲ್ಲಿ ತಾಂತ್ರಿಕ ಸಲಹೆ ಯೊಂದಿಗೆ ಮೇ ತಿಂಗಳಿನಲ್ಲಿ ಅಧಿಕೃತವಾಗಿ ಬಸ್ ನಿಲ್ದಾಣ ಕಟ್ಟಡಕ್ಕೆ ಅಡಿಪಾಯ ಹಾಕಲಾಗಿತ್ತು. ಬೇಸಿಗೆಯಲ್ಲೇ ನಿವೇಶನದಲ್ಲಿ ನೀರು ಕಾಣಿಸಿಕೊಂಡು, ಮಳೆಗಾಲದಲ್ಲಿ ತೀರಾ ಕೆಸರುಮಯ ದೊಂದಿಗೆ ಕೆಲಸ ಸ್ಥಗಿತಗೊಂಡಿತ್ತು.

ಇದೀಗ ಮತ್ತೆ ಕೈಗೊಂಡಿರುವ ಕೆಲಸವನ್ನು ನೋಡಿದರೆ, ಭವಿಷ್ಯದಲ್ಲಿ ಕಟ್ಟಡ ತಲೆಯೆತ್ತಿದರೂ ಮುಂದೊಂದು ದಿನ ನೆಲಕಚ್ಚುವ ಸುಳಿವಿನೊಂದಿಗೆ ಇಲ್ಲಿ ಗುತ್ತಿಗೆದಾರರ ಸಹಿತ ನಗರಸಭೆ ಪ್ರತಿನಿಧಿಗಳ ನಿರ್ಲಕ್ಷ್ಯ ಪರಿಸ್ಥಿತಿಗೆ ಕಾರಣ ವೆಂಬ ಆರೋಪ ಕೇಳಿ ಬರತೊಡಗಿದೆ.

ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ಅನುಭವ ಹೊಂದಿರುವ ತಜ್ಞರ ಪ್ರಕಾರ, ಪ್ರಸಕ್ತ ಕಟ್ಟಲಾಗುತ್ತಿರುವ ಕಟ್ಟಡ ಕಾಮಗಾರಿಯ ‘ಬೆಲ್ಟ್ ಭೀಮ್’ (ಅಡಿಪಾಯ ರಕ್ಷಾಕವಚ) ತೀರಾ ಕಳಪೆಯಾಗಿರುವದು ಬಹಿರಂಗಗೊಂಡಿದೆ.

(ಮೊದಲ ಪುಟದಿಂದ) ಕಟ್ಟಡದ ಸುರಕ್ಷತೆಗೆ ನಿರ್ಮಾಣಗೊಳ್ಳುತ್ತಿರುವ ಆಧಾರಸ್ತಂಭ 24 ಇಂಚು ಅಗಲವಿದ್ದರೆ, ಅದಕ್ಕೆ ಹೊಂದಿಕೊಂಡು ನೆಲಮಟ್ಟದಲ್ಲಿ ಅಷ್ಟೇ ವಿಸ್ತೀರ್ಣದಲ್ಲಿ ನಿರ್ಮಿಸಬೇಕಿದ್ದ ‘ಬೆಲ್ಟ್ ಭೀಮ್’ ಕೇವಲ 8 ಇಂಚು ಗೋಚರಿಸಿದೆ.

ಮಾತ್ರವಲ್ಲದೆ ಇಡೀ ಕಟ್ಟಡಕ್ಕೆ ಕೇವಲ ಒಂದು ಸುತ್ತು ಬೆಲ್ಟ್ ಭೀಮ್ ನಿರ್ಮಿಸಿದ್ದರೂ ಅದು ಇಂಚು ಮಾತ್ರವಾದ್ದರಿಂದ ಮೊದಲೇ ಗೊಸರು ಭೂಮಿಯಲ್ಲಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ನಿತ್ಯ ನೂರಾರು ಬಸ್‍ಗಳು ಬಂದು ಹೋಗುವಂತಾದರೆ ಅವುಗಳ ಕಂಪನಕ್ಕೆ ಕಟ್ಟಡ ಉಳಿಯುವದೇ ಎಂಬ ಶಂಕೆ ಮೂಡಿದೆ.

ಅಲ್ಲದೆ ನೂತನ ಕಟ್ಟಡ ಕೆಲಸಕ್ಕೆ ಪ್ರಸಕ್ತ ಎಲ್ಲಿಯೂ ಉಭಯ ಕಡೆ ನಿರ್ಮಿಸಿರುವ ಆಧಾರ ಸ್ತಂಭಗಳಿಗೆ ಇಲ್ಲಿ ಬೆಲ್ಟ್ ಭೀಮ್ ನಿರ್ಮಿಸದಿರುವದು ಅಚ್ಚರಿಗೆ ಕಾರಣವಾಗಿದೆ. ಈ ಕಾಮಗಾರಿ ಬಗ್ಗೆ ಮೈಸೂರಿನ ಸಿದ್ದಪ್ಪ ಎಂಬ ವ್ಯಕ್ತಿಯ ಹೆಸರು ತೇಲಿ ಬರುತ್ತಿದ್ದರೂ ಕೂಡ ಒಮ್ಮೆಯೂ ಕಟ್ಟಡ ಕಾಮಗಾರಿ ಪರಿಶೀಲನೆಗೆ ಬಂದಿಲ್ಲವೆಂಬ ಆರೋಪವಿದೆ.

ಮೇಲ್ಮನೆ ಸದಸ್ಯರ ಆಕ್ರೋಶ

ಬಸ್ ನಿಲ್ದಾಣ ಕಾಮಗಾರಿಯಲ್ಲಿ ಕಳಪೆ ಆರೋಪದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ ಹಾಗೂ ಸದಸ್ಯರುಗಳಾದ ಅನಿತಾ ಪೂವಯ್ಯ, ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಲಕ್ಷ್ಮಿ ಕುಟ್ಟಪ್ಪ ಇವರುಗಳು ತೆರಳಿ ಪರಿಶೀಲಿಸಿದರು.

ಈ ವೇಳೆ ತುಕ್ಕು ಹಿಡಿದ ಕಬ್ಬಿಣದ ತುಂಡುಗಳನ್ನು ಅಲ್ಲಲ್ಲಿ ಜೋಡಿಸಿ ಆಧಾರ ಸ್ತಂಭದ ಕೆಲಸ ನಿರ್ವಹಿಸಿದ್ದು ಗೋಚರಿಸಿತಲ್ಲದೆ, ಕಾಂಕ್ರಿಟ್ ಕೆಲಸ ಪೂರೈಸಿ 15 ದಿನ ಕಳೆದಿದ್ದರೂ, ನೀರು ಹಾಯಿಸಿ ‘ಕ್ಯೂರಿಂಗ್’ ಕೂಡ ಕೈಗೊಳ್ಳದಿರುವದು ಬೆಳಕಿಗೆ ಬಂತು.

ಈ ಬಗ್ಗೆ ತೀವ್ರ ಅಸಮಾಧಾನ ಗೊಂಡ ಮೇಲ್ಮನೆ ಸದಸ್ಯರು ಗುತ್ತಿಗೆದಾರ ಮತ್ತು ನಗರಸಭೆ ಇಂಜಿನಿಯರ್‍ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರಲ್ಲದೆ, ಕಳಪೆ ಕೆಲಸದಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವದಾಗಿ ‘ಶಕ್ತಿ’ಯೊಂದಿಗೆ ತಿಳಿಸಿದರು. ಕಾಮಗಾರಿ ಗುಣಮಟ್ಟದ ಬಗ್ಗೆ ನಗರಸಭೆ ಉಪಾಧ್ಯಕ್ಷರ ಸಹಿತ ಬಿಜೆಪಿ ಸದಸ್ಯರು ತನಿಖೆಗೆ ಆಗ್ರಹಿಸಿದರು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳು ವದಾಗಿ ಸುಳಿವು ನೀಡಿದರು.