ಸುಂಟಿಕೊಪ್ಪ, ನ. 1: ಸಮಾಜದ ಉನ್ನತೀಕರಣಕ್ಕೆ ತುಳಿತಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿದ ಮಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜ ಬಾಂಧವರು ಮುಖ್ಯವಾಹಿನಿಗೆ ಬರಬೇಕು ಎಂದು ಪುತ್ತೂರು ಬಿಲ್ಲವ ಸಮಾಜದ ಅಧ್ಯಕ್ಷ ಜಯಂತ್ ನಡುಬೈಲ್ ಹೇಳಿದರು.
ಸುಂಟಿಕೊಪ್ಪದ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣ ಗುರುಗಳ 163ನೇ ಜಯಂತೋತ್ಸವ ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಮೇಲ್ವರ್ಗದ ತುಳಿತಕ್ಕೆ ಒಳಗಾಗಿದ್ದ ಹಿಂದುಳಿದ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡಲು ಎಷ್ಟೋ ಕಷ್ಟ ಕಾರ್ಪಣ್ಯ ಗಳನ್ನು ಸಹಿಸಿಕೊಂಡು ದೇವಾಲಯ ನಿರ್ಮಿಸಿ, ವಿದ್ಯಾಮಂದಿರವನ್ನು ಕಟ್ಟಿಕೊಂಡು ಸಮಾನತೆಯಿಂದ ಎಲ್ಲರೂ ಸಹಬಾಳ್ವೆ ನಡೆಸಲು ನಾರಾಯಣ ಗುರುಗಳು ಅನುವು ಮಾಡಿಕೊಟ್ಟರೆಂದು ಬಣ್ಣಿಸಿದರು.
ಬಿಲ್ಲವ ಸಮಾಜದ ಸಂಸ್ಕøತಿ ಆಚಾರ ವಿಚಾರಗಳನ್ನು ಮಹಿಳೆಯರು ರೂಢಿಸಿಕೊಳ್ಳಬೇಕು. ಸಮಾಜದ ಮುಖ್ಯಸ್ತರಗಳಲ್ಲಿ ಪುರುಷರಷ್ಟೇ ಸಮಾನವಾಗಿ ಮುಂದೆ ಬರಬೇಕು. ಅಂತರ್ಜಾಲ ತಾಣಗಳಾದ ವಾಟ್ಸ್ಆಪ್, ಪೇಸ್ಬುಕ್ಗೆ ಮೊರೆ ಹೊಗದೆ ಜೀವನದಲ್ಲಿ ಕಠಿಣ ಶ್ರಮದಿಂದ ಸಾಧನೆ ಮಾಡಬೇಕು ದೇವಸ್ಥಾನಗಳಿಗೆ ತೆರಳುವಾಗ ಹೆಣ್ಣು ಮಕ್ಕಳು ಆಧುನಿಕ ಉಡುಪುಧರಿಸಿ ಹೋಗುವದು ಸಂಸ್ಕಾರ ಅಲ್ಲ ಎಂದು ಅಂತರಾಷ್ಟ್ರೀಯ ಕರಾಟೆಪಟು ಮಮತಾ ಪೂಜಾರಿ ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಕೀಲ ನವನೀತ್ ಡಿ.ಹಿಂಬಾಣಿ ಅವರು ಎಲ್ಲರಿಗೂ ಸಾಮಾಜಿಕ ನ್ಯಾಯಸಿಗಬೇಕೆಂದು ಪ್ರತಿಪಾದಿಸಿ ಅದರಲ್ಲಿ ಯಶಸ್ವಿಯಾದ ಶ್ರೀ ನಾರಾಯಣ ಗುರುಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಪ್ರಪಂಚದಾದ್ಯಂತ ಅವರ ಆದರ್ಶಗಳನ್ನು ಇಂದು ಪರಿಪಾಲಿಸುತ್ತಿದ್ದಾರೆ. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಸಮಾಜದಲ್ಲಿ ಸಮಾನತೆಗೆ ಒತ್ತು ನೀಡಿದರಲ್ಲದೆ, ಶಿಕ್ಷಣಕ್ಕೆ ಆದ್ಯತೆ ನೀಡಿದರು. ಪೋಷಕರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೆತ್ರದಲ್ಲೂ ತಮ್ಮ ಪ್ರಾಬಲ್ಯ ತೋರಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮಣಿ ಮುಖೇಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಸಾಹಿತಿಗಳೂ ಯುವ ಚಿಂತಕರಾದ ಶೈಲೇಶ್ ಐರ್ವ, ಸುಳ್ಯ ಬಿಲ್ಲವ ಯುವ ವಾಹಿನಿ ಅಧ್ಯಕ್ಷ ಶಿವಪ್ರಸಾದ್ ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ (ರಾಜ), ಕುಶಾಲನಗರ ಹೋಬಳಿ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಹೆಚ್.ಬಿ ರಮೇಶ್, ಸುಂಟಿಕೊಪ್ಪ ಹೋಬಳಿ ದೇಯಿ ಬೈದೇದಿ ಬಿಲ್ಲವ ಮಹಿಳಾ ಸಮಾಜದ ಅಧ್ಯಕ್ಷೆ ಮಧು ನಾಗಪ್ಪ ಮಾತನಾಡಿದರು. ಜಯಂತಿ ಕೃಷ್ಣಪ್ಪ ಪ್ರಾರ್ಥಿಸಿ, ಮಧುನಾಗಪ್ಪ ಸ್ವಾಗತಿಸಿ, ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷ ಎಂ.ಎಸ್. ಸುನಿಲ್ ನಿರೂಪಿಸಿ, ವೆಂಕಪ್ಪ ಕೋಟ್ಯಾನ್ ವಂದಿಸಿದರು.