ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಬೆಳ್ಳಂಬೆಳಿಗ್ಗೆ ಈ ದಿನವನ್ನು ಮರೆತು ಹೋಗಿದ್ದವರಿಗೂ ನೆನಪಿಸುವಂತಹ ಪ್ರಯತ್ನವೊಂದು ಇಂದು ನಗರಸಭೆಯಿಂದ ನಡೆದಿದ್ದು, ವಿಶೇಷವಾಗಿತ್ತು. ನಗರದೆಲ್ಲೆಡೆ 6 ಟಿಪ್ಪರ್ ವಾಹನ ಹಾಗೂ 5 ಟ್ರ್ಯಾಕ್ಟರ್‍ಗಳಲ್ಲಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಈ ವಾಹನಗಳಲ್ಲಿ ಕಸ ವಿಲೇವಾರಿ ಕುರಿತಾಗಿ ಜಾಗೃತಿ ಮೂಡಿಸುವಂತಹ ಹಾಡುಗಳನ್ನು ಹಾಕಿಕೊಂಡು ನಗರದ ಎಲ್ಲಾ ವಿಭಾಗಗಳಿಗೆ ತೆರಳುತ್ತಿರುವದು ನಗರದ ಮಂದಿಗೆ ತಿಳಿದಿರುವ ವಿಚಾರ. ಆದರೆ ಈ ದಿನದ ಮಟ್ಟಿಗೆ ಬೆಳಿಗ್ಗೆ ಹಾಡು ಕೇಳಿದವರಿಗೆ ಅದರಲ್ಲೂ ರಾಜ್ಯೋತ್ಸವದ ದಿನ ಎಂಬದನ್ನು ಮರೆತಂತಿದ್ದವರಿಗೆ ಪಟ್ಟನೆ ದಿನದ ಮಹತ್ವ ಅರಿವಾಗುವಂತಿತ್ತು. ಎಲ್ಲಾ ವಾಹನಗಳಲ್ಲಿ ಈ ದಿನ ಕೇಳಿ ಬಂದಿದ್ದು, ಕನ್ನಡದ ಬಗ್ಗೆ ಕನ್ನಡಾಂಬೆಯ ಬಗ್ಗೆ ಅಭಿಮಾನ ಮೂಡಿಸುವಂತಹ ಹಾಡುಗಳಾಗಿದ್ದವು.
ಕನ್ನಡ ನಾಡಿನ ಜೀವನದಿ ಕಾವೇರಿ.., ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿರುವೆ, ಹಚ್ಚೇವು ಕನ್ನಡದ ದೀಪ, ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು... ಮತ್ತಿತರ ಹಾಡುಗಳು ಜನತೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವಂತೆ ದಿನವಿಡೀ ಪಸರಿಸುತ್ತಿತ್ತು.
ನಗರಸಭೆಯ ಆಯುಕ್ತರಾದ ಶುಭಾ ಅವರ ಪರಿಕಲ್ಪನೆಗೆ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಿದ್ದು, ಈ ಪ್ರಯತ್ನ ಗಮನ ಸೆಳೆಯಿತು. ಇದರೊಂದಿಗೆ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆಯಿಂದ ತಯಾರಿಸಲಾದ ಸ್ತಬ್ಧಚಿತ್ರಕ್ಕೆ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ದೊರೆತಿದ್ದು, ಈ ಪ್ರಯತ್ನಕ್ಕೆ ಪ್ರೇರಣೆ ನೀಡಿದಂತಾಗಿದೆ. ಅಲ್ಲದೆ ಇಂದು ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಯುಕ್ತೆ ಶುಭಾ ಅವರು ಕನ್ನಡದ ಧ್ವಜ ಬಣ್ಣದ ಉಡುಪು ಧರಿಸಿ ಕನ್ನಡಾಭಿಮಾನ ಮೆರೆದರು.
-ಶಶಿ