ಶ್ರೀಮಂಗಲ, ನ. 2 : ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪೊನ್ನಂಪೇಟೆಯನ್ನು ನೂತನ ತಾಲೂಕ್ಕಾಗಿ ರಚನೆ ಮಾಡಲು ಆಗ್ರಹಿಸಿ 2ನೇ ದಿನವು ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಯಿತು.

ಈ ಸಂದರ್ಭ ಸತ್ಯಾಗ್ರಹದಲ್ಲಿ ಭಾಗವಹಿಸಿದ ಪ್ರಮುಖರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯನ್ನು ಕ್‍ಗ್ಗಟ್ಟ್‍ನಾಡ್ ತಾಲೂಕು ಎಂದು ಪ್ರತ್ಯೇಕ ತಾಲೂಕ್ಕಾಗಿತ್ತು. ಪೊನ್ನಂಪೇಟೆ ತಾಲೂಕು ಕೇಂದ್ರವಾಗಿದ್ದ ಸಂದರ್ಭದಲ್ಲಿಯೇ ಇಲ್ಲಿ ಬಹಳಷ್ಟು ತಾಲೂಕು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದಿಗೂ ಹಲವಷ್ಟು ತಾಲೂಕು ಕೇಂದ್ರಗಳು ಇಲ್ಲಿ ಇವೆ ಎಂದು ತಿಳಿಸಿದರು.

ಗುರುವಾರದ ಪ್ರತಿಭಟನೆಯಲ್ಲಿ ತಾಲೂಕು ಕೇಂದ್ರಕ್ಕೆ ಅರ್ಹತೆ ಇರುವ ಎಲ್ಲಾ ಸರ್ಕಾರದ ಕಚೇರಿಗಳು ಇವೆ ಎಂದು ಸತ್ಯಾಗ್ರಹದಲ್ಲಿ ಭಾಗವಹಿಸಿದ ಪ್ರಮುಖರು ಮಾಹಿತಿ ನೀಡಿದರು.

ಇಂದಿನ ಸತ್ಯಾಗ್ರಹದಲ್ಲಿ ನಾಗರಿಕ ವೇದಿಕೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕದಂಬ ಸೇನೆ, ವಕೀಲರುಗಳು, ರಂಗಕಲಾವಿದರು, ಮಾಜಿ ಸೈನಿಕರ ಸಂಘ, ಪೊನ್ನಂಪೇಟೆ ಜಮಾಅತ್, ಎರವ ಯುವ ಒಕ್ಕೂಟ, ಕೊಡವ ಸಮಾಜ, ಗ್ರಾ.ಪಂ., ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾ.3ರಂದು (ಇಂದು) ಸತ್ಯಾಗ್ರಹದಲ್ಲಿ ಪೊನ್ನಂಪೇಟೆಯ ರಾಮಕೃಷ್ಣ ವಾಹನ ಚಾಲಕರು ಮತ್ತು ಮಾಲೀಕರು ಸಂಘ ಭಾಗವಹಿಸಲಿದ್ದಾರೆ.

ತಾ. 4ರಂದು ಗೋಣಿಕೊಪ್ಪದಲ್ಲಿ ಸೇನಾನಿಗಳ ಪ್ರತಿಮೆ ಅನಾವರಣ ಕಾರ್ಯಕ್ರಮವಿರುವದರಿಂದ ಸತ್ಯಾಗ್ರಹ ನಡೆಯುವದಿಲ್ಲ. ತಾ. 5ಕ್ಕೆ ಎರವ ಯುವ ಒಕ್ಕೂಟ, ತಾ. 6ಕ್ಕೆ ಪೊನ್ನಂಪೇಟೆಯ ಮಾಜಿ ಸೈನಿಕರ ಸಂಘ, ತಾ7ಕ್ಕೆ ನಂದೀಶ್ವರ ಅಟೋ ಚಾಲಕರು ಮತ್ತು ಮಾಲೀಕರ ಸಂಘ, ತಾ.8ರಂದು ಪೊನ್ನಂಪೇಟೆ ಮಹಿಳಾ ಸಮಾಜದ ವತಿಯಿಂದ ಸತ್ಯಾಗ್ರಹ ನಡೆಯಲಿದೆ ಎಂದು ತಾಲೂಕು ಹೋರಾಟ ಸಮಿತಿಯ ಸಂಚಾಲಕ ಎಂ.ಎಂ.ರವೀಂದ್ರ ಮಾಹಿತಿ ನೀಡಿದರು.