ವೀರಾಜಪೇಟೆ, ನ. 1: ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಪಂಚಾಯಿತಿ ಅಧ್ಯಕ್ಷೆ ಕೆ. ಮೋಹಿನಿ ಅಲ್ಲಿದ್ದ ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವ್ಯವಹಾರ ಆಗಿರುವ ವಸತಿ ನಿಲಯದ ವಿರುದ್ಧ ಸಮಾಜ ಕಲ್ಯಾಣ ಇಲಾಖೆಯ ಮೇಲಧಿಕಾರಿ ಗಳಿಗೆ ದೂರು ನೀಡುವದಾಗಿ ತಿಳಿಸಿದರು.

ಕಾಕೋಟುಪರಂಬು ಗ್ರಾಮ ಪಂಚಾಯಿತಿಗೆ ದೂರು ಬಂದ ಹಿನ್ನೆಲೆ ಮೋಹಿನಿ ಅವರು ವಸತಿ ನಿಲಯಕ್ಕೆ ಭೇಟಿ ನೀಡಿದಾಗ 16 ಮಕ್ಕಳು ಖುದ್ದು ಹಾಜರಿದ್ದರು. ಹಾಜರಿ ಪುಸ್ತಕದಲ್ಲಿ 21 ಮಕ್ಕಳ ಹಾಜರಾತಿಯನ್ನು ಸಹಿ ಹಾಕಿ ತೋರಿಸಲಾಗಿತ್ತು.

ವಸತಿ ನಿಲಯದ ವಾರ್ಡನ್ ಹಿಲೇರಿ ಮೊಂತರೋ ವಸತಿ ನಿಲಯಕ್ಕೆ ಪ್ರತಿ ದಿನ ಬೆಳಿಗ್ಗೆ 21 ಮಕ್ಕಳಿಗೆ ಎರಡು ಲೀಟರ್ ಹಾಲು ನೀಡಿದ ನಂತರ ಮತ್ತೆ ವಸತಿ ನಿಲಯದಲ್ಲಿ ಕಾಣಿಸಿಕೊಳ್ಳುವದು ಮಾರನೇ ದಿನ.

ಸರಿಯಾದ ತರಬೇತಿ ಇಲ್ಲದೆ ವಿದ್ಯಾಭ್ಯಾಸದಲ್ಲಿ ಮಕ್ಕಳನ್ನು ಕಡೆಗಣಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶವಿಲ್ಲ. ರಾತ್ರಿ ವೇಳೆಯಲ್ಲಿ ಮಕ್ಕಳು ಅನಾರೋಗ್ಯ ದಿಂದ ನರಳಿದರೆ ಮಕ್ಕಳಿಗೆ ಚಿಕಿತ್ಸೆ ಕೊಡುವ ಜವಾಬ್ದಾರಿ ಇಲ್ಲ.

ಕಳೆದ ಮೂರು ವರ್ಷಗಳಿಂದ ಈವರೆಗೆ ಯಾವ ತನಿಖಾಧಿಕಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ವಾರ್ಡನ್ ಹಿಲೇರಿ ಮೊಂತರೋ ಕಳೆದ ಜೂನ್‍ನಲ್ಲಿ ಗುತ್ತಿಗೆ ಆಧಾರದ ಮೇಲೆ ಬಂದ ಅಧಿಕಾರಿ ವಸತಿ ನಿಲಯದಲ್ಲಿಯೇ ವಾಸ್ತವ್ಯ ಹೂಡುತ್ತಿಲ್ಲ. ವಸತಿ ನಿಲಯದಲ್ಲಿರುವ ಅಡುಗೆ ಉಸ್ತುವಾರಿ ಶಾರದಾ ಅಲಿಯಾಸ್ ಸುಬ್ಬಕ್ಕ ಅವರಿಗೆ ಜವಾಬ್ದಾರಿ ನೀಡಿ ವೀರಾಜಪೇಟೆಯ ಮನೆಯಲ್ಲಿಯೇ ವಾಸ್ತವ್ಯ ಹೂಡುವದು ವಾಡಿಕೆಯಾಗಿದೆ. ಮೋಹಿನಿ ಅವರು ವಸತಿ ನಿಲಯದಿಂದ ದೂರವಾಣಿ ಯಲ್ಲಿ ಹಿಲೇರಿಯನ್ನು ಸಂಪರ್ಕಿಸಿ ದಾಗ ನಾನು ಪ್ರತಿ ದಿನ ಪೊನ್ನಂಪೇಟೆ ಯಲ್ಲಿರುವ ತಾಲೂಕು ಪಂಚಾ ಯಿತಿಯ ಕಾರ್ಯನಿರ್ವಹಣಾಧಿ ಕಾರಿಗೆ ಹಾಜರಾತಿಯನ್ನು ಒಪ್ಪಿಸುತ್ತಿದ್ದೇನೆ. ವಸತಿ ನಿಲಯದಲ್ಲಿಯೇ ಇರುವ ಅಗತ್ಯ ಇಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅಧ್ಯಕ್ಷೆ ಮೋಹಿನಿ ದೂರಿದರು.

ಮೋಹಿನಿಯವರು ವಸತಿ ನಿಲಯದ ಅಡುಗೆ ಮನೆಯನ್ನು ಪರಿಶೀಲಿಸಿದಾಗ ಅಶುಚಿತ್ವದಿಂದ ಕೂಡಿದ್ದು ವಸತಿ ನಿಲಯ ಅವ್ಯವಸ್ಥೆಯ ಆಗರವಾದುದರಿಂದ ಕಳೆದ ಸಾಲಿನಲ್ಲಿ ವಸತಿ ನಿಲಯದಲ್ಲಿ 36 ಮಕ್ಕಳಿದ್ದುದು ಈ ಬಾರಿ 21ಕ್ಕೆ ಇಳಿದಿದೆ. ಮುಂದಿನ ವರ್ಷ ವಸತಿ ನಿಲಯಕ್ಕೆ ಮಕ್ಕಳ ಸೇರ್ಪಡೆ ಶೂನ್ಯವಾಗುವ ಸಾಧ್ಯತೆ ಇದೆ ಎಂದು ಅಸಮಾಧಾನಗೊಂಡರು.

ಅಧ್ಯಕ್ಷರ ಜೊತೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರ ಅನಿಲ್ ಅಯ್ಯಪ್ಪ ಮಾತನಾಡಿ, ಇತ್ತೀಚೆಗೆ ಕಾಕೋಟು ಪರಂಬಿನ ಪ್ರೌಢಶಾಲಾ ಆಡಳಿತ ಮಂಡಳಿ ಸದಸ್ಯರುಗಳ ಸಭೆಯಲ್ಲಿ ವಸತಿ ನಿಲಯದ ಕುರಿತು ಸದಸ್ಯರುಗಳು ಗಂಭೀರವಾಗಿ ಆರೋಪಿಸಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ ನಂತರ ವಸತಿ ನಿಲಯಕ್ಕೆ ಭೇಟಿ ನೀಡಲಾಯಿತು. ಬೇಜವಾಬ್ದಾರಿಕೆಯಿಂದ ನಡೆಯುತ್ತಿರುವ ಈ ವಸತಿ ನಿಲಯಕ್ಕೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ ಎಂದರು.