ಮಡಿಕೇರಿ, ನ. 2: ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿನ ಜೀಪುಗಳ ಪೈಕಿ ಕೆಲವೊಂದು ಜೀಪುಗಳು ಇಂದೋ ನಾಳೆಯೋ ಗುಜರಿ ಸೇರುವ ಸ್ಥಿತಿಯಲ್ಲಿವೆ. ‘ಮುದುಕಿಗೆ ಸಿಂಗಾರ’ ಎಂಬ ಮಾತಿನಂತೆ ಆಗಿಂದ್ದಾಗೆ ಗ್ಯಾರೇಜ್ ಸೇರಿ ರಿಪೇರಿಯಾಗುವ ವಾಹನಗಳನ್ನು ಚಾಲಿಸುವದು ಇಲಾಖೆಯ ಚಾಲಕರಿಗೆ ಸಾವಲು ಎಂಬಂತಾಗಿದೆ.

ಹೌದು... ಹುಡುಕುತ್ತಾ ಹೋದರೆ ಇಂತಹ ವಾಹನಗಳು ಪೊಲೀಸ್ ಇಲಾಖೆಯಲ್ಲಿ ಬಹಳಷ್ಟಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ವಾಹನವೊಂದಿದೆ. ಅದುವೇ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದಂತಹ ಅತ್ಯಮೂಲ್ಯ ಸಂದರ್ಭಗಳಲ್ಲಿ ಸಚಿವರು, ಗಣ್ಯರು ಗೌರವ ವಂದನೆ ಸ್ವೀಕರಿಸಲು ಬಳಸುವ ‘ಓಪನ್ ಜಿಪ್ಸಿ’.

ಈ ಜಿಪ್ಸಿಯ ಸಂಖ್ಯೆ ಕೆಎ 12 ಜಿ 28. ಇಪ್ಪತ್ತೆಂಟು ಸಂಖ್ಯೆ ಹೊಂದಿರುವ ಈ ವಾಹನಕ್ಕೆ ನೂರೆಂಟು ಸಮಸ್ಯೆಗಳು. ಈ ವಾಹನ ಕೊಡಗು ಪೊಲೀಸ್ ಇಲಾಖೆಗೆ ಬಂದು ಸುಮಾರು 28 ವರ್ಷಗಳೇ ಕಳೆದಿದೆ. ಇಪ್ಪತ್ತೆಂಟು ವರ್ಷಗಳಿಂದ ರಾಜ್ಯ, ರಾಷ್ಟ್ರಮಟ್ಟದ ನಾಯಕರುಗಳನ್ನು ಪ್ರಮುಖ ಸಂದರ್ಭಗಳಲ್ಲಿ ಪಥ ಸಂಚಲನದ ವೇಳೆ ಗೌರವ ವಂದನೆ ಸ್ವೀಕರಿಸಲು ಹೊತ್ತು ಸಾಗುತ್ತಿದ್ದ ಈ ವಾಹನ ಪ್ರಸ್ತುತ ಪೊಲೀಸ್ ಇಲಾಖೆಯ ‘ನೋ ಗ್ಯಾರಂಟಿ’ ವಾಹನ ಎಂಬಂತಾಗಿದೆ.

ಎಲ್ಲೆಂದರಲ್ಲಿ ಕೈಕೊಡುವ ಈ ವಾಹನ ಕೆಲವೊಂದು ಬಾರಿ ಜಪ್ಪಯ್ಯ... ಎಂದರೂ ‘ಸ್ಟಾರ್ಟ್’ ಆಗುವದಿಲ್ಲ. ಇದರಿಂದಾಗಿ ಇದನ್ನು ಕೊಂಡೊಯ್ಯುವ ಚಾಲಕರು ಕೆಲವೊಮ್ಮೆ ಪರದಾಡುವಂತಹ ಪರಿಸ್ಥಿತಿ. ಕೆಲ ಚಾಲಕರು ಸ್ವಂತ ಖರ್ಚಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿಯಿದೆ. ಆದರೂ ಈ ವಾಹನದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ನಿನ್ನೆ ದಿನ ಕನ್ನಡರಾಜ್ಯೋತ್ಸವ ಸಮಾರಂಭದಲ್ಲಿ ಪಥ ಸಂಚಲನದ ವೇಳೆ ಈ ವಾಹನ ಬಳಕೆಯಾಗಬೇಕಿತ್ತು. ಇದಕ್ಕಾಗಿ 2 ದಿವಸ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ‘ರಿಹರ್ಸಲ್’ ಕೂಡ ಮಾಡಲಾಗಿತ್ತು. ಬಳಿಕ ನಿನ್ನೆ ಬೆಳಿಗ್ಗೆ ಕ್ರೀಡಾಂಗಣಕ್ಕೆ ತೆರಳಬೇಕಿದ್ದ ವಾಹನ ಕಾವೇರಿ ಹಾಲ್ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲಿ ಕೈಕೊಟ್ಟಿದೆ. ಎಷ್ಟೇ ಪರದಾಡಿದರೂ ಜೀಪು ಸ್ಟಾರ್ಟ್ ಆಗಲಿಲ್ಲ. ಕ್ರೀಡಾಂಗಣವನ್ನು ತಲುಪಲಿಲ್ಲ. ಪರಿಣಾಮ ತೆರೆದ ವಾಹನದಲ್ಲಿ ಸಚಿವರು ಗೌರವವಂದನೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಬದಲಿಗೆ ಪಥ ಸಂಚಲನ ತಂಡಗಳೇ ಮೈದಾನದಲ್ಲಿ ಒಂದು ಸುತ್ತು ಸಾಗಿ ಸಚಿವರಿಗೆ ಗೌರವ ವಂದನೆ ನೀಡುವಂತಾಯಿತು.

ಈ ಬಗ್ಗೆ ಸಚಿವರ ಅಥವಾ ಪೊಲೀಸ್ ವರಿಷ್ಠರ ಗಮನಕ್ಕೆ ಬಂದಿದೆಯೋ ಗೊತ್ತಿಲ್ಲ. ಆದರೆ ದುರವಸ್ಥೆಯ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳುವ ಅನಿವಾರ್ಯತೆ ಇದೆ.

-ಉಜ್ವಲ್ ರಂಜಿತ್