ಸೋಮವಾರಪೇಟೆ, ನ.2 : ಸೋಮವಾರಪೇಟೆ ತಾಲೂಕು ಕಚೇರಿಯ ಆಯಕಟ್ಟಿನ ಅಧಿಕಾರ ಸ್ಥಾನದಲ್ಲಿ ಕುಳಿತು ಸಾರ್ವಜನಿಕರಿಂದ ಸಾವಿರಾರು ರೂಪಾಯಿ ಲಂಚ ಪಡೆಯುತ್ತಿದ್ದ ಅಧಿಕಾರಿ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ.

ನೂರಾರು ಸಾರ್ವಜನಿಕರು ತಾಲೂಕು ಕಚೇರಿಗೆ ಆಗಮಿಸಿ ಸರ್ಕಾರಿ ದಾಖಲೆಗಳಿಗೆ ಪರಿತಪಿಸುತ್ತಿ ರುವ ಸಂದರ್ಭದಲ್ಲೇ ತಂದೆಯ ಸ್ವಂತ ನಿವೇಶನವನ್ನು ವರ್ಗಾಯಿಸಿ ಭೂ ಪರಿವರ್ತನೆ ಮಾಡಿಕೊಡುವಂತೆ ಬಂದಿದ್ದ ವ್ಯಕ್ತಿಯಿಂದ ಮೂರೇ ಮೂರು ತಿಂಗಳಲ್ಲಿ 78 ಸಾವಿರ ಲಂಚ ಪಡೆದಿದ್ದೂ ಅಲ್ಲದೇ ಹೆಚ್ಚುವರಿಯಾಗಿ 5 ಸಾವಿರ ಸ್ವೀಕರಿಸುತ್ತಿದ್ದ ಸಂದರ್ಭ ಇಲ್ಲಿನ ಶಿರಸ್ತೇದಾರ್ ಧರ್ಮಪ್ಪ ಎಸಿಬಿ ಬಲೆಯೊಳಗೆ ಬಿದ್ದಿದ್ದಾರೆ.

ಸಮೀಪದ ಕೂಗೇಕೋಡಿ ಗ್ರಾಮದ ಶಿವಶಂಕರ್ ಎಂಬವರು ಮೂರು ತಿಂಗಳ ಹಿಂದೆ ತನ್ನ ತಂದೆಗೆ ಸೇರಿದ 28 ಸೆಂಟ್ಸ್ ನಿವೇಶನವನ್ನು ಭೂ ಪರಿವರ್ತನೆ ಮಾಡಿ ತನ್ನ ಹೆಸರಿಗೆ ವರ್ಗಾಯಿಸುವಂತೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

28 ಸೆಂಟ್ಸ್‍ಗೆ 78 ಸಾವಿರ : ಈ ಅರ್ಜಿ ತನ್ನ ಟೇಬಲ್‍ಗೆ ಬರುತ್ತಿದ್ದಂತೆ ಚುರುಕಾದ ಶಿರಸ್ತೇದಾರ್, ಅರ್ಜಿದಾರ ಶಿವಶಂಕರ್ ಅವರನ್ನು ಕರೆದು ಹಣಕ್ಕೆ ಬೇಡಿಕೆಯಿಟ್ಟರು. ಬೇರೆ ದಾರಿಯಿಲ್ಲದೇ ಶಿವಶಂಕರ್ ಅವರು ವಿವಿಧ ಕಂತುಗಳಲ್ಲಿ ರೂ. 78 ಸಾವಿರವನ್ನು ನೀಡಿದ್ದರು ಎನ್ನಲಾಗಿದೆ. ಆದರೂ ದಾಖಲಾತಿಗಳನ್ನು ನಿರ್ವಹಿಸದ ಶಿರಸ್ತೇದಾರ್ ಧರ್ಮಪ್ಪ, ಹೆಚ್ಚುವರಿ ಯಾಗಿ ರೂ. 5 ಸಾವಿರ ಬೇಡಿಕೆ ಯಿಟ್ಟಿದ್ದರು. 28 ಸೆಂಟ್ಸ್ ನಿವೇಶನ ವನ್ನು ಪರಿವರ್ತಿಸಿ ಶಿವಶಂಕರ್ ಅವರ ಹೆಸರಿಗೆ ವರ್ಗಾಯಿಸಲು ಈತ ಈಗಾಗಲೇ ಪಡೆದಿದ್ದು 78 ಸಾವಿರ ಲಂಚ!

ಕಾರ್ಯಾಚರಣೆ : ಶಿರಸ್ತೇದಾರ್ ಧರ್ಮಪ್ಪ ಮತ್ತೆ ಹಣಕ್ಕೆ ಬೇಡಿಕೆಯಿಡುತ್ತಿರುವ ಬಗ್ಗೆ ಶಿವಶಂಕರ್ ಅವರು ತನ್ನ ಸ್ನೇಹಿತ ಕ್ಲಬ್ ರಸ್ತೆಯಲ್ಲಿರುವ ವರ್ಕ್‍ಶಾಪ್‍ನ ಮಾಲೀಕ ಕಿರಣ್ ಅವರ ಬಳಿ ತಿಳಿಸಿದ್ದರು. ಕಿರಣ್ ಅವರು ತಾಲೂಕು ಕಚೇರಿಯ ಭ್ರಷ್ಟಾಚಾರ ಹಾಗೂ ಧರ್ಮಪ್ಪ ಅವರು ಹಣಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಕಳೆದ ತಾ. 31ರಂದು ಪೂರ್ವಾಹ್ನ 10 ಗಂಟೆಗೆ ‘ಶಕ್ತಿ’ಯ ಗಮನಕ್ಕೆ ತಂದರು.

ಅಂದೇ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಲಂಚಬಾಕನನ್ನು ಬಲೆಗೆ ಕೆಡಹುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೊಬೈಲ್‍ನಲ್ಲಿನ ವೀಡಿಯೋ ರೆಕಾರ್ಡರ್ ಚಾಲೂ ಸ್ಥಿತಿಯಲ್ಲಿಟ್ಟುಕೊಂಡು ಶಿವಶಂಕರ್ ಅವರನ್ನು ತಾಲೂಕು ಕಚೇರಿಗೆ ಕಳುಹಿಸಲಾಯಿತು. ಅಲ್ಲಿ ಧರ್ಮಪ್ಪ ಅವರು ಮತ್ತೊಮ್ಮೆ ಹಣಕ್ಕೆ ಬೇಡಿಕೆ ಯಿಟ್ಟಿದ್ದು ಚಿತ್ರೀಕರಣಗೊಂಡಿತು.

ನ. 1ರಂದು ರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ರಜೆ ಇದ್ದ ಹಿನ್ನೆಲೆ ಇಂದು ದೂರುದಾರ ಶಿವಶಂಕರ್ ಮತ್ತು ಅವರ ಸ್ನೇಹಿತ ಕಿರಣ್ ಅವರನ್ನು ಮಡಿಕೇರಿಗೆ ಕಳುಹಿಸಿ ಲಿಖಿತವಾಗಿ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.

ಅಪರಾಹ್ನ 4 ಗಂಟೆಗೆ ಸೋಮವಾರಪೇಟೆಗೆ ಆಗಮಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಶಿರಸ್ತೇದಾರ್ ಧರ್ಮಪ್ಪ ಅವರು ಕಚೇರಿಯ ‘ಸರ್ಕಾರಿ ಕುರ್ಚಿ’ಯಲ್ಲೇ ಕುಳಿತು ಶಿವಶಂಕರ್ ಅವರಿಂದ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ‘ರೆಡ್‍ಹ್ಯಾಂಡ್’ ಆಗಿ ಸಿಕ್ಕಿಬಿದ್ದರು.

ಮೂರು ತಿಂಗಳಿನಿಂದ ಹಣಕ್ಕೆ ಬೇಡಿಕೆಯಿಟ್ಟು 78 ಸಾವಿರ ಪಡೆದಿ ದ್ದರೂ ಸಹ ಇದುವರೆಗೂ ದಾಖಲಾತಿ ಗಳನ್ನು ಮಾಡಿಕೊಟ್ಟಿರಲಿಲ್ಲ. ಹೆಚ್ಚುವರಿಯಾಗಿ 5 ಸಾವಿರಕ್ಕೆ ಬೇಡಿಕೆ ಇಟ್ಟ ಸಂದರ್ಭ 10 ದಿನಗಳ ಕಾಲ ಕಾಲಾವಕಾಶ ಬೇಕು ಎಂದು ಶಿರಸ್ತೇದಾರ್ ತಿಳಿಸಿದ್ದರು ಎಂದು ದೂರುದಾರ ಶಿವಶಂಕರ್ ತಿಳಿಸಿದ್ದಾರೆ.

ಭ್ರಷ್ಟಾಚಾರದ ಕಚೇರಿ: ಸೋಮವಾರಪೇಟೆ ತಾಲೂಕು ಕಚೇರಿ ಇತ್ತೀಚಿನ ದಿನಗಳಿಂದ ಭ್ರಷ್ಟಾಚಾರದ ಕಚೇರಿ ಎಂಬ ಅಪವಾದಕ್ಕೆ ಅಂಟಿ ಕೊಂಡಿದೆ. ಸಣ್ಣಪುಟ್ಟ ದಾಖಲೆಗಳಿಂದ ಹಿಡಿದು ಕಂದಾಯ ದಾಖಲೆಗಳಿಗೆ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.

ಕಳೆದ ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕಚೇರಿ ಎದುರು ಕೊಡ್ಲಿಪೇಟೆ ಭಾಗದ ಸ್ವಾತಂತ್ರ್ಯ ಹೋರಾಟಗಾರ ದಾಳಿ ಅವರು ತಮ್ಮ ಕುಟುಂಬಸ್ಥರೊಂದಿಗೆ ಪ್ರತಿಭಟನೆ ಕುಳಿತ ಸಂದರ್ಭ ಸ್ಥಳಕ್ಕೆ ಬಂದ ಶಾಸಕ ಅಪ್ಪಚ್ಚು ರಂಜನ್ ಅವರೂ ಸಹ ತಾಲೂಕು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ನೇರವಾಗಿಯೇ ಅಧಿಕಾರಿಗಳ ಬೆವರಿಳಿಸಿ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಭ್ರಷ್ಟಾಚಾರದ ಕರ್ಮಕಾಂಡ ನಿಂತಿರಲಿಲ್ಲ. ಅಕ್ರಮ ಸಕ್ರಮ ಸಮಿತಿಯಡಿ ಭೂ ಮಂಜೂರಾತಿಗೆ ಏಕರೆಯೊಂದಕ್ಕೆ 20 ರಿಂದ 30 ಸಾವಿರ ಲಂಚದ ಬೇಡಿಕೆ ಇಡುತ್ತಿದ್ದ ಬಗ್ಗೆಯೂ ಹಲವಷ್ಟು ಮಂದಿ ದೂರಿದ್ದರು.

ಕಾಂಗ್ರೆಸ್ ಪಕ್ಷದ ಮುಖಂಡರೂ ಸಹ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಸೋಮವಾರಪೇಟೆ ತಾಲೂಕು ಕಚೇರಿಯ ಅಧಿಕಾರಿಗಳು ಸರ್ಕಾರಿ ದಾಖಲೆ ನೀಡಲು ಸಾವಿರಾರು ರೂಪಾಯಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಾರ್ವಜನಿಕ ರಿಂದ ಈ ಬಗ್ಗೆ ದೂರುಗಳು ಬಂದಿದ್ದು, ಅಂತಹ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಗೊಳಿಸಿ ಸಾಮೂಹಿಕವಾಗಿ ವರ್ಗಾವಣೆ ಗೊಳಿಸಲು ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗುವದು ಎಂದು ಎಚ್ಚರಿಸಿದ್ದರು.

ಇಂತಹ ಎಚ್ಚರಿಕೆಗಳಿಗೆ ಬೆದರದ ದಪ್ಪ ಚರ್ಮದ ಲಂಚಬಾಕರು ತಮ್ಮ ಚಾಳಿಯನ್ನು ಮುಂದುವರೆಸಿದ್ದರು. ಇದೀಗ ಶಿರಸ್ತೇದಾರ್ ಧರ್ಮಪ್ಪ ಅವರು ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ನ್ಯಾಯಾಂಗ ಶಿಕ್ಷೆಗೆ ಗುರಿಯಾಗಿದ್ದಾರೆ. ಇದು ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿ ಎಂಬದು ಸಾರ್ವಜನಿಕರ ಆಶಯ. ಇದರೊಂದಿಗೆ ತಾಲೂಕು ಕಚೇರಿಯ ಕರ್ತವ್ಯದ ವೇಳೆಯಲ್ಲೇ ಕೆಲ ಸಿಬ್ಬಂದಿಗಳು ಮದ್ಯಪಾನ ಮಾಡಿರುತ್ತಾರೆ ಎಂಬ ದೂರುಗಳೂ ವ್ಯಾಪಕವಾಗಿದ್ದು, ಅಂತವರಿಗೆ ತಕ್ಕ ಶಾಸ್ತಿಯಾಗುವ ದಿನಗಳೂ ದೂರವಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಶಿರಸ್ತೇದಾರ್ ಧರ್ಮಪ್ಪ ಅವರನ್ನು ವಶಕ್ಕೆ ಪಡೆದ ಕಾರ್ಯಾ ಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಶಾಂತಮಲ್ಲಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಮಂಜು, ಸಿಬ್ಬಂದಿ ಗಳಾದ ಲೋಹಿತ್, ದಿನೇಶ್, ರಾಜೇಶ್, ಸಜನ್, ದೀಪಿಕಾ, ಸುರೇಶ್, ಪ್ರವೀಣ್ ಅವರುಗಳು ಭಾಗವಹಿಸಿದ್ದರು. ವಶಕ್ಕೆ ಪಡೆದ ಅಧಿಕಾರಿಯನ್ನು ಸಂಜೆ ಮಡಿಕೇರಿಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ನಡೆಸಿದ ನಂತರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

- ವಿಜಯ್ ಹಾನಗಲ್