ಕುಶಾಲನಗರ, ನ. 3: ಶಿರಂಗಾಲ ಬಳಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಹಾಗೂ ಭೂವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಶಿರಂಗಾಲದ ಉಮಾಮಹೇಶ್ವರಿ ದೇವಾಲಯ ಬಳಿ ಮರಳು ತುಂಬಿದ ಒಂದು ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರ ತಡರಾತ್ರಿಯಲ್ಲಿ ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಬಿ.ರೇಷ್ಮ, ಉಪ ತಹಶೀಲ್ದಾರ್ ನಂದಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ದಿಢೀರ್ ಧಾಳಿ ನಡೆಸಿದ ಸಂದರ್ಭ 4 ರಿಂದ 5 ವ್ಯಕ್ತಿಗಳು ನದಿಯಲ್ಲಿ ತೆಪ್ಪಗಳ ಸಹಾಯದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭ ಸ್ಥಳದಲ್ಲಿದ್ದ ಮರಳು ತುಂಬಿದ ಟ್ರಾಕ್ಟರ್ ಒಂದನ್ನು ವಶಪಡಿಸಿಕೊಂಡಿದ್ದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಉಪ ತಹಶೀಲ್ದಾರ್ ನಂದಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎ.12.7265 ಮತ್ತು (ಕೆಎ.12 ಟಿ.7266) ನೋಂದಣಿಯುಳ್ಳ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಅನ್ನು ಮರಳು ಸಹಿತ ವಶಕ್ಕೆ ತೆಗೆದುಕೊಂಡು ಗಿರೀಶ್ ಮತ್ತು ಆತನ ಸಂಗಡಿಗರ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.