ಲೋಕೇಶ್ ಸಾಗರ್

ಮಡಿಕೇರಿ, ನ. 3: ಕನ್ನಡಿಗರು ಕನ್ನಡವನ್ನು ಉಸಿರಿನ ಭಾಷೆಯಾಗಿ ಬಳಸುವದೇ ನಿಜವಾದ ಕನ್ನಡ ರಾಜ್ಯೋತ್ಸವ. ಈ ಉತ್ಸವ ಒಂದು ದಿನಕ್ಕೆ ಸೀಮಿತವಲ್ಲ. ವರ್ಷಪೂರ್ತಿಯಾಗಿ ಆಚರಿಸಿದ ಸಾರ್ಥಕತೆ ನಾವು ಕನ್ನಡವನ್ನು ನಿತ್ಯ ಜೀವನದಲ್ಲಿ ಬಳಸಿದಾಗ ಒದಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದರು.

ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ಮೂರ್ನಾಡು ಹೋಬಳಿ ಘಟಕದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ಪ್ರಭಾವಕ್ಕೆ ಸಿಲುಕಿರುವ ನಮಗೆ ಪರಭಾಷೆಗಳ ಅಮಲು ಏರಿದ್ದು ಕನ್ನಡದ ಮೇಲಿರುವ ವಿಶ್ವಾಸವೇ ಕಡಿಮೆಯಾಗಿದೆ. ಕನ್ನಡವು ಎಲ್ಲದಕ್ಕೂ ನಿಲುಕಬಲ್ಲ ಸಮರ್ಥ ಭಾಷೆಯಾಗಿದ್ದು, ಬಳಕೆ ಮಾಡುವಲ್ಲಿ ಅಳುಕು ಸಲ್ಲದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಕಿಗ್ಗಾಲು ಗಿರೀಶ್ ಕನ್ನಡ ಅತಿ ಹಳೆಯ ಭಾಷೆಗಳಲ್ಲೊಂದು. ಹಲ್ಮಿಡಿಯ ಶಾಸನ, ಕವಿರಾಜ ಮಾರ್ಗಗಳೇ ಇದಕ್ಕೆ ಸಾಕ್ಷಿ. ಪ್ರಪಂಚದ ಹೆಚ್ಚು ಬಳಕೆಯಾಗುವ ಭಾಷೆಗಳ ಪಟ್ಟಿಯಲ್ಲಿ 27ನೇ ಸ್ಥಾನವನ್ನು ಕನ್ನಡ ಹೊಂದಿದೆ ಎಂದರು.

ರಸಪ್ರಶ್ನೆ ಸ್ಪರ್ಧೆ: ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆಯನ್ನು ಕಿಗ್ಗಾಲು ಗಿರೀಶ್, ರಾಜೇಶ್ವರಿ ಶಿವಾನಂದ್, ವೆಂಕಟರಮಣ ಭಟ್ ನಿರ್ವಹಿಸಿದರು. ಪ್ರಥಮ ಸ್ಥಾನ ಬಿಮಲ್ ಎಸ್. ಮತ್ತು ಬಿ.ವಿ. ಸಿಂಧು ಜ್ಞಾನಜ್ಯೋತಿ ಪ್ರೌಢಶಾಲೆ, ಮೂರ್ನಾಡು , ಸಿಂಚನ್ ಕುಮಾರ್ ಮತ್ತು ಎಸ್.ಎನ್. ಷಣ್ಮುಖ ಅರುಣ ಪ್ರೌಢಶಾಲೆ ಚೇರಂಬಾಣೆ ದ್ವಿತೀಯ ಹಾಗೂ ಪಿ.ಸಿ. ಸೋಮಯ್ಯ ಮತ್ತು ಹೆಚ್.ಎಸ್. ಕೃತಿನ್ ಮೂರ್ನಾಡು ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆದರು. ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ನಿರ್ದೇಶಕ ಕೋಡಿ ಚಂದ್ರಶೇಖರ್, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಪಿ.ಎಸ್. ರವಿಕೃಷ್ಣ, ಅಬೂಬಕರ್, ಮಹೇಶ್, ಪ್ರಾಂಶುಪಾಲ ಹೆಚ್.ಬಿ. ಬೆಳ್ಯಪ್ಪ ಉಪಸ್ಥಿತರಿದ್ದರು.