ಗೋಣಿಕೊಪ್ಪಲು, ನ. 4: ಕೊಡಗಿನ ಯುವಕರು ಜಿಲ್ಲೆಯಿಂದ ವಲಸೆ ಹೋಗದಿರಿ. ನಿಮ್ಮ ಆಸ್ತಿ ಪಾಸ್ತಿಯನ್ನು ಮಾರದಿರಿ ಎಂದು ಭಾರತದ ಭೂಸೇನಾ ಮಹಾ ದಂಡನಾಯಕ ಬಿಪಿನ್ ರಾವತ್ ಕರೆ ನೀಡಿದರು. ಇಂದು ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಪ್ರತಿಮೆಗಳನ್ನು ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ಅನಾವರಣಗೊಳಿಸಿದ ಬಳಿಕ ಅವರು ‘ಶಕ್ತಿ’ಯೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಕೊಡಗು ಜಿಲ್ಲೆ ಸೇನಾ ಯೋಧರ ನಾಡು, ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರು ಮಾರ್ಗಾನುಸರಣೆ, ಯುವ ಪೀಳಿಗೆಗೆ ಅಗತ್ಯವಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪದವಿಗಳಿಸಿ ಯುವಕರು ಜಿಲ್ಲೆಯಿಂದ ಹೊರ ಹೋಗುವ ಬದಲು ಆ ಪದವಿಯನ್ನು ಕೊಡಗಿನ ಸೇವೆಗೆ ಸದುಪಯೋಗಗೊಳಿಸಲಿ, ಮರಳಿ ತಾಯ್ನಾಡಿಗೆ ಹಿಂತಿರುಗಿ ಜಿಲ್ಲೆ ಜನರ ಸೇವೆಗಾಗಿ ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಗಳನ್ನು ಹುಟ್ಟೂರಿನಲ್ಲಿಯೇ ಮುಂದುವರಿಸಲಿ ಎಂದು ರಾವತ್ ಆಶಿಸಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡುತ್ತಿದ್ದ ರಾವತ್ ಅವರು ಜನರಲ್ ಸೋಮಣ್ಣ ಅವರ ಮನವಿಗೆ ಸ್ಪಂದಿಸಿ ಫೀ.ಮಾ. ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತರತ್ನ ಪುರಸ್ಕಾರ ಪ್ರದಾನ ಮಾಡಲು ಕೇಂದ್ರ ಸರಕಾರದೊಂದಿಗೆ ವ್ಯವಹರಿಸುವದಾಗಿ ಭರವಸೆಯಿತ್ತರು.

ಸೇನಾನಿಗಳ ಬಗ್ಗೆ ಪ್ರಶಂಸೆ : ಸೇನಾನಿಗಳಾದ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಅವರುಗಳು ದೇಶಕ್ಕಾಗಿ ಸವಾಲುಗಳನ್ನು ಎದುರಿಸಿದ್ದಾರೆ. ಸ್ಥೈರ್ಯ ಮೆರೆದಿದ್ದಾರೆ. ಸಮಗ್ರತೆ ಸಾಧಿಸಿದ್ದಾರೆ.

(ಮೊದಲ ಪುಟದಿಂದ) 1953ರಲ್ಲಿ ಸೇವಾ ವಿಭಾಗದಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಎದುರಾದಾಗ ಫೀ.ಮಾ. ಕಾರ್ಯಪ್ಪÀ ಅವರು, ಭೂಸೇನೆ, ವಾಯುಸೇನೆ, ನೌಕಾಸೇನೆ ಈ ಮೂರು ವಿಭಾಗಗಳ ಮಹಾದಂಡನಾಯಕರಾಗಿ ನಿಭಾಯಿಸಿ ಈ ದೇಶದಲ್ಲಿ ಮತ್ತೆ ಐಕಮತ್ಯ ಸಾಧಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅದೇ ರೀತಿ ಜ. ತಿಮ್ಮಯ್ಯ ಅವರು, ಅನೇಕ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಿ ದೇಶ ಸೇವೆ ಗೈದಿದ್ದಾರೆ. ಈ ಇಬ್ಬರು ಎಂದೆಂದಿಗೂ ಜನತೆಗೆ ಮಾರ್ಗದರ್ಶಕ ನಾಯಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೂ. 10 ಲಕ್ಷ ಘೋಷಣೆ: ಈ ಇಬ್ಬರು ಸೇನಾನಿಗಳ ಪ್ರತಿಮೆಯನ್ನು ಸ್ಥಾಪಿಸಲು ಫೀ.ಮಾ. ಕಾರ್ಯಪ್ಪ ಮತ್ತು ಜನರ್ ತಿಮ್ಮಯ್ಯ ಫೋರಂ ಉದಾರದಾನಿಗಳ ನೆರವಿನಿಂದ ಶ್ರಮಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾವತ್ ಅವರು, ಸೇವಾ ವಿಭಾಗದಿಂದ ಹೆಚ್ಚುವರಿ ರೂ. 10 ಲಕ್ಷ ಬಿಡುಗಡೆಗೊಳಿಸುವದಾಗಿ ಪ್ರಕಟಿಸಿದರು.

ನಿವೃತ್ತ ಯೋಧರು ಸೈನ್ಯಾಧಿಕಾರಿಗಳಿಗೆ ಈ ಸಂದರ್ಭ ಅವರು ವಿಶೇಷ ಸವಲತ್ತುಗಳನ್ನು ಘೋಷಿಸಿದರು. ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಹೆಣ್ಣು ಮಕ್ಕಳ ವಿವಾಹ ಸಂದರ್ಭ ರೂ. 1 ಲಕ್ಷ ಸಹಾಯಧನ ನೀಡುವ ಕುರಿತು ಪ್ರಕಟಿಸಿದರು. ಅಲ್ಲದೆ ಇ.ಸಿ.ಹೆಚ್.ಎಸ್. ಕೇಂದ್ರದಲ್ಲಿ ಔಷಧಿಗಳ ಕೊರತೆ ಉಂಟಾಗುತ್ತಿದೆ. ಮುಖ್ಯ ಕೇಂದ್ರದಿಂದ ಔಷಧಿ ಬರುವದು ತಡವಾಗುತ್ತಿದೆ. ಕಳಪೆ ಗುಣಮಟ್ಟದ ಔಷಧಿಗಳು ಸರಬರಾಜಾಗುತ್ತಿರುವ ಬಗ್ಗೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ಇ.ಸಿ.ಹೆಚ್.ಎಸ್. ಕೇಂದ್ರಗಳು ನೇರವಾಗಿ ಸ್ಥಳೀಯ ಔಷಧಿ ಮಾರಾಟಗಾರರಿಂದ ಅಗತ್ಯ ಔಷಧಿಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ರಾವತ್ ತಿಳಿಸಿದರು.

ಅಲ್ಲದೆ ಪಿಂಚಣಿ ಬಗ್ಗೆ ಸಕಾಲದಲ್ಲಿ ದೊರೆಯುತ್ತಿಲ್ಲ ಎನ್ನುವ ಪುಕಾರಿದೆ. ಈ ಸಂದರ್ಭ ಯೋಧರು ತಮ್ಮ ಅಹವಾಲುಗಳನ್ನು ಭೂಸೇನಾ ಕೇಂದ್ರಕ್ಕೆ ರವಾನಿಸಲು ಅಂತರ್ಜಾಲ ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ರಾವತ್ ಮಾಹಿತಿಯಿತ್ತರು. ಈ ಸಂದರ್ಭ ಬ್ರಿಗೇಡಿಯರ್ ಸಚ್ಚ್‍ದೇವ್, ಲೇ.ಜ. ಆನಂದ್, ಮೆ.ಜ. ಗುಜ್ಜರ್ ಹಾಗೂ ಕಿರಿಯ ಸೇನಾಧಿಕಾರಿಗಳು ಹಾಜರಿದ್ದರು.