ಮಡಿಕೇರಿ, ನ.3 : ಸಮಸ್ತ ಮಹಲ್ ಜಮಾಅತ್ ಒಕ್ಕೂಟದ ಕೇಂದ್ರ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಮಹಲ್ ಜಮಾಅತ್‍ನ ಆಡಳಿತ ಮಂಡಳಿ ಸದಸ್ಯರಿಗಾಗಿ ಒಂದು ದಿನದ ತರಬೇತಿ ಶಿಬಿರ ತಾ. 5ರಂದು ವೀರಾಜಪೇಟೆ ಸಮೀಪದ ಪೆರುಂಬಾಡಿಯ ಶಂಷುಲ್ ಉಲಮಾ ಮಹಿಳಾ ಅನಾಥ ಮಂದಿರ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಸ್ತ ಎಂಬವದು ಒಂದು ಧಾರ್ಮಿಕ ಸಂಘಟನೆಯಾಗಿದ್ದು, ಭಾರತದ ಮುಸಲ್ಮಾನರ ಮಧ್ಯೆ ಧಾರ್ಮಿಕ ಆಚಾರ - ವಿಚಾರ ಮತ್ತು ಅನುಷ್ಠಾನ ವಿಷಯಗಳಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ, ಪ್ರವಾದಿ ಮಹಮ್ಮದ್ ಪೈಗಂಬರರು ಪ್ರಚಾರ ಮಾಡಿ ಅನುಷ್ಠಾನಕ್ಕೆ ತಂದ ಇಸ್ಲಾಂನ ನೈಜ ಅನುಷ್ಠಾನಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಂಸ್ಥೆ 1926ರಲ್ಲಿ ಜನ್ಮತಾಳಿದೆ ಎಂದರು. ದೇಶದ ಮುಸಲ್ಮಾನರಿಗೆ ಮಾರ್ಗದರ್ಶನ ಮಾಡುತ್ತಾ ಸನ್ಮಾರ್ಗದ ಕಡೆಗೆ ಕೊಂಡೊಯ್ಯುವಲ್ಲಿ ಸಂಸ್ಥೆ ಯಶಸ್ಸು ಸಾಧಿಸಿದೆ ಎಂದು ಹೇಳಿದರು.

ಮುಸ್ಲಿಮರನ್ನು ಬಾಧಿಸುವ ಸರ್ವ ವಿಷಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಸಂಕೀರ್ಣ ಸಮಸ್ಯೆಗಳ ಕುರಿತು ಸ್ಪಷ್ಟ ಫತ್ವಾ ಹೊರಡಿಸಿ ಕುಟುಂಬಗಳು, ಮೊಹಲ್ಲಾಗಳು, ಪ್ರಾದೇಶಿಕ ಇಸ್ಲಾಮಿ ಸಂಘಟನೆಗಳು, ವ್ಯಕ್ತಿಗಳಲ್ಲಿರುವ ಭಿನ್ನಮತಗಳನ್ನು ಪರಿಹರಿಸಿ ಉತ್ತಮ ಸಮಾಜ ನಿರ್ಮಿಸುವದು ಸಮಸ್ತದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಇದೀಗ 9786 ಮದರಸಗಳಲ್ಲಿ 13 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದೆ. ಇದರೊಂದಿಗೆ ಸುಮಾರು 1.25 ಲಕ್ಷ ಮಂದಿಗೆ ಅಧ್ಯಾಪಕ ವೃತ್ತಿಯನ್ನು ಕಲ್ಪಿಸಿ ನಿರುದ್ಯೋಗ ಸಮಸ್ಯೆಯನ್ನೂ ದೂರ ಮಾಡಿದೆ ಎಂದು ಅವರು ವಿವರಿಸಿದರು.

ಅರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಅಧ್ಯಾಪಕರ ಕುಟುಂಬಗಳಿಗೆ ನೆರವಾಗಲು ಕ್ಷೇಮ ಪದ್ಧತಿಯನ್ನು ಹುಟ್ಟುಹಾಕಿ ಸುಮಾರು 14 ವಿಧದ ಸೇವಾ ಸಹಾಯ ಪದ್ಧತಿ ಮತ್ತು 6 ತರಹದ ಕ್ಷೇಮ ಪದ್ಧತಿಗಳು ಚಾಲ್ತಿಯಲ್ಲಿದ್ದು, ಕೊಡಗು ಜಿಲ್ಲೆಯಲ್ಲೂ ಸಮಸ್ತದ ಅಧೀನದಲ್ಲಿ 40 ಮದರಸಗಳು ಹಾಗೂ 200 ಅಧ್ಯಾಪಕರು ಇರುವದಾಗಿ ತಿಳಿಸಿದರು.

ತಾ. 5ರಂದು ನಡೆಯುವ ಶಿಬಿರದ ಅಧ್ಯಕ್ಷತೆಯನ್ನು ಮಹಲ್ ಆಡಳಿತ ಮಂಡಳಿ ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ಕೆ.ಎಸ್. ತಂಙಳ್ ವಹಿಸಲಿದ್ದು, ಪಿಣಂಙÉೂೀಡ್ ಅಬೂಬಕ್ಕರ್ ಮುಸ್ಲಿಯಾರ್ ತರಬೇತಿ ನೀಡಲಿದ್ದಾರೆ. ಮೊಹಿದ್ದೀನ್ ಕುಟ್ಟಿ ಮಾಸ್ಟರ್ ಮುಖ್ಯ ಭಾಷಣ ಮಾಡಲಿದ್ದಾರೆ. ಕೊಡಗಿನ ಉಪ ಖಾಝಿ ಅಬ್ದುಲ್ಲಾ ಫೈಝಿ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಎಸ್‍ಕೆಯುಎಂಸಿಸಿ ಅಧ್ಯಕ್ಷ ಅಬೂಬಕ್ಕರ್ ಮೌಲವಿ, ವಿದ್ಯಾಭ್ಯಾಸ ಬೋರ್ಡ್‍ನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮೌಲವಿ, ಮಹಲ್ ಮಂಡಳಿ ಜಿಲ್ಲಾಧ್ಯಕ್ಷ ಉಸ್ಮಾನ್ ಹಾಜಿ ಮತ್ತಿತರರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ, ಉಪಾಧ್ಯಕ್ಷ ಹಮೀದ್ ಪೆರುಂಬಾಡಿ, ಕಾರ್ಯದರ್ಶಿ ಹಾರೂನ್ ಹಾಜಿ ಹಾಗೂ ಸದಸ್ಯ ಹಸನ್ ಕುಂಙÂ ಸುಂಟಿಕೊಪ್ಪ ಅವರುಗಳು ಹಾಜರಿದ್ದರು.