ಕುಶಾಲನಗರ, ನ. 4: ಕುಶಾಲನಗರ ಸಮೀಪ ಹಾರ್ನಳ್ಳಿ ಹೋಬಳಿಯ ಕಾವೇರಿ ನದಿ ತಟದ ಮೂರು ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಒದಗಿಸುವ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಹೋಬಳಿಯ ಕೊಪ್ಪ, ಆವರ್ತಿ, ಬೈಲುಕೊಪ್ಪ ಗ್ರಾಮಗಳಿಗೆ ಕುಡಿವ ನೀರು ಒದಗಿಸಲು ಸರಕಾರ ರೂ. 18 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆದಿದೆ.

ಕುಶಾಲನಗರ ಸಮೀಪದ ಬೈಚನಹಳ್ಳಿ ಬಳಿ ಕಾವೇರಿ ನದಿಯ ಎದುರು ಭಾಗದ ಗಿರಗೂರು ಬಳಿಯಿಂದ ಪಂಪ್ ಮೂಲಕ ನೀರು ಹಾಯಿಸಿ ಶುದ್ಧೀಕರಿಸಿ ಮೂರು ಗ್ರಾಮಗಳಿಗೆ ಪೈಪ್ ಮೂಲಕ ಹರಿಸುವ ಯೋಜನೆ ಇದಾಗಿದೆ. ಈಗಾಗಲೆ ಯೋಜನೆಯ ಶೇ. 70 ರಷ್ಟು ಕಾಮಗಾರಿ ಮುಗಿದಿದ್ದು ಮಾರ್ಚ್ ಅಂತ್ಯದೊಳಗೆ ಈ ಗ್ರಾಮಗಳಿಗೆ ಕಾವೇರಿಯಿಂದ ಕುಡಿವ ನೀರು ಒದಗಲಿದೆ. ಕ್ಷೇತ್ರದ ಶಾಸಕ ಕೆ. ವೆಂಕಟೇಶ್ ಮುತುವರ್ಜಿಯಿಂದ ಈ ಯೋಜನೆ ತುರ್ತಾಗಿ ನಡೆಯುತ್ತಿದ್ದು ಪಂಪ್ ಹೌಸ್, ಫಿಲ್ಟರ್ ಹೌಸ್ ಕಾಮಗಾರಿ ಪೂರ್ಣಗೊಂಡಿದೆ. ಹೆದ್ದಾರಿ ಬದಿಯಲ್ಲಿ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು ಬೈಲಕೊಪ್ಪೆ, ಆವರ್ತಿ ಗ್ರಾಮದ ತನಕ ಈ ಕೆಲಸ ಮುಂದುವರೆಯಲಿದೆ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶವಂತ್ ಮಾಹಿತಿ ನೀಡಿದ್ದಾರೆ.

ಕೊಪ್ಪ ಗ್ರಾಮದ ನಾಗರೀಕರು ಇದುವರೆಗೆ ಕೊಳವೆ ಬಾವಿ ನೀರು ಕುಡಿಯಲು ಬಳಸುತ್ತಿದ್ದು ಇದೀಗ ಕಾವೇರಿ ನೀರು ಸರಬರಾಜಾಗುವ ಮೂಲಕ ಬಹುದಿನಗಳ ಬೇಡಿಕೆ ಈಡೇರುವಂತಾಗಿದೆ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

ಪಿರಿಯಾಪಟ್ಟಣ ನಗರಕ್ಕೆ ಕಳೆದ 15 ವರ್ಷಗಳಿಂದ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಕುಶಾಲನಗರ ಸಮೀಪದ ಕಾವೇರಿ ನದಿಯಿಂದ 75 ಅಶ್ವಶಕ್ತಿಯ ಎರಡು ಪಂಪ್‍ಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ.