ಮಡಿಕೇರಿ, ನ. 3: ಸರ್ಕಾರದ ಕೆಲಸ ದೇವರ ಕೆಲಸವಾಗಿದ್ದು, ಸರ್ಕಾರಿ ಕಚೇರಿಗಳಿಗೆ ಬರುವವರನ್ನು ಗೌರವದಿಂದ ಕಾಣಬೇಕು. ಸಾರ್ವಜನಿಕರನ್ನು ಸತಾಯಿಸದೆ ನಿಯಮಾನುಸಾರ ಕರ್ತವ್ಯ ನಿರ್ವಹಿಸಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ ಅವರು ಸಲಹೆ ಮಾಡಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ‘ಜಾಗೃತಿ ಅರಿವು’ ಸಪ್ತಾಹದ ಅಂಗವಾಗಿ ನಡೆದ ಕಾನೂನು ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಸೇವೆ ಮಹತ್ತರವಾಗಿದ್ದು, ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ನ್ಯಾಯಾಧೀಶರು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ಸರ್ಕಾರಿ ಕಚೇರಿಗಳನ್ನು ಅವಲಂಬಿಸಿದ್ದಾರೆ. ಜೊತೆಗೆ ಸರ್ಕಾರಿ ಕಚೇರಿಗಳು ಸಹ ಸಾರ್ವಜನಿಕರಿಗಾಗಿ ಇರುವದು ಎಂಬದನ್ನು ಮರೆಯಬಾರದು. ತಕ್ಷಣ ಕೆಲಸವಾಗಲಿ ಎಂಬ ಉದ್ದೇಶದಿಂದ ಲಂಚ ಕೊಡುವದು ಸರಿಯಲ್ಲ ಮತ್ತು ಪಡೆಯುವದು ಸಹ ತಪ್ಪಾಗುತ್ತದೆ. ಈ ಬಗ್ಗೆ ಯೋಚಿಸಬೇಕಿದೆ ಎಂದು ಸಲಹೆ ಮಾಡಿದರು.

ಸಾರ್ವಜನಿಕ ಸೇವೆಯಲ್ಲಿರು ವವರು ಹಣದ ಆಸೆ ಆಮಿಷಕ್ಕೆ ಬಲಿಯಾದರೆ ಜೀವನ ಪೂರ್ತಿ ನರಳಬೇಕಾಗುತ್ತದೆ. ಆದ್ದರಿಂದ ಲಂಚದಿಂದ ದೂರವಿರಬೇಕು. ಲಂಚ ಪಡೆಯುವದು ಸಾಭೀತಾದರೆ ಕನಿಷ್ಟ 4 ವರ್ಷಕ್ಕೂ ಹೆಚ್ಚು ಶಿಕ್ಷೆ ಇದೆ ಎಂದು ನ್ಯಾಯಾಧೀಶರು ಹೇಳಿದರು.

ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್ ಮಾತನಾಡಿ ಭ್ರಷ್ಟಾಚಾರವು ಸಾಮಾಜಿಕ ಪಿಡುಗಾಗಿದ್ದು, ಕಾನೂನಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಅಗತ್ಯ ಎಂದು ಹೇಳಿದರು.

ಅಮೇರಿಕಾ, ಸಿಂಗಾಪುರ, ಚೀನಾ ಹೀಗೆ ನಾನಾ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಠಿಣ ಕಾನೂನುಗಳಿವೆ. ದೇಶದಲ್ಲಿಯೂ ಸಹ ಕಠಿಣ ಶಿಕ್ಷೆ ಇದೆ ಎಂದು ಹೇಳಿದರು.

ಲೋಕಾಯುಕ್ತ ವಿಶೇಷ ಅಭಿಯೋಜಕ ಎಂ.ಎಂ. ಕಾರ್ಯಪ್ಪ ಅವರು ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ ಕುರಿತು ಮಾತನಾಡಿ ಭ್ರಷ್ಟಾಚಾರ ನಿಲ್ಲುವ ಪರಿಸ್ಥಿತಿಯಲ್ಲಿ ಇಲ್ಲ. 1988 ರಲ್ಲಿ ಲಂಚ ನಿರೋಧಕ ಕಾಯ್ದೆ ಜಾರಿಗೆ ಬಂದಿದ್ದು, ಈ ವ್ಯಾಪ್ತಿಗೆ ಸಮಾಜದಲ್ಲಿನ ಪ್ರತಿ ಯೊಬ್ಬರೂ ಬರಲಿದ್ದಾರೆ ಎಂದರು.

ಲಂಚವು ಕುಟುಂಬದಿಂದಲೇ ಆರಂಭವಾಗುತ್ತದೆ. ಮನೆಯಲ್ಲಿ ಮಕ್ಕಳನ್ನು ಅಂಗಡಿಗೆ ಹೋಗಿ ಪದಾರ್ಥ ತರುವಂತೆ ಪುಸಲಾಯಿಸಲು ಹೆಚ್ಚುವರಿ ತಿಂಡಿ ಅಥವಾ ಹಣದ ಆಮಿಷವನ್ನು ಒಡ್ಡುತ್ತೇವೆ. ಇದರಿಂದಾಗಿ ಮಾನಸಿಕವಾಗಿ ಚಿಕ್ಕಂದಿನಿಂದಲೇ ಒಂದು ರೀತಿ ಬೇಡಿಕೆ ಇಡುತ್ತಿದ್ದೇವೆ ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಆಸೆ, ಅತಿಯಾಸೆ, ದುರಾಸೆ ಹೆಚ್ಚಾಗುತ್ತಿದೆ. ಇದು ಕಡಿಮೆಯಾದಲ್ಲಿ ಮಾತ್ರ ಭ್ರಷ್ಟಾಚಾರ ಅಥವಾ ಲಂಚ ಕಡಿಮೆಯಾಗಲು ಸಾಧ್ಯ ಎಂದು ಕಾರ್ಯಪ್ಪ ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ಮಾತನಾಡಿ ಲಂಚ ಎಂದರೆ ಗಾಳಿ ಇದ್ದಂತೆ, ಗಾಳಿಯನ್ನು ಹಿಡಿಯಲು ಸಾಧ್ಯವೇ ಎಂದು ಅಭಿಪ್ರಾಯಪಟ್ಟರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಸೆಲ್ವಕುಮಾರ್, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಶರ್ಮಿಳಾ ಕಾಮತ್, ಸರ್ಕಾರಿ ಪ್ರಧಾನ ಅಭಿಯೋಜಕ ಫಿರೋಜ್ ಖಾನ್ ಇತರರು ಇದ್ದರು.

ವಕೀಲರ ಸಂಘದ ಉಪಾಧ್ಯಕ್ಷ ಕೆ.ಡಿ.ದಯಾನಂದ ಸ್ವಾಗತಿಸಿದರು. ದಯಾ ಹೊನ್ನಪ್ಪ ಪ್ರಾರ್ಥಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿ, ವಂದಿಸಿದರು.