ಸೋಮವಾರಪೇಟೆ, ನ.4: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದ ಸುತ್ತ ಮುತ್ತಲಲ್ಲಿರುವ ಸರ್ಕಾರಿ ಜಾಗವನ್ನು ಬೆಂಗಳೂರಿನ ವ್ಯಕ್ತಿಯೋರ್ವರು ಕಬಳಿಕೆ ಮಾಡಲು ಯತ್ನಿಸುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಸಹಕಾರ ನೀಡಿದರೆ ಉಗ್ರ ಹೋರಾಟ ಹಮ್ಮಿ ಕೊಳ್ಳಲಾಗುವದು ಎಂದು ಸ್ಥಳೀಯರು ಹಾಗೂ ಒಕ್ಕಲಿಗ ಯುವ ವೇದಿಕೆಯ ಪ್ರಮುಖರು ಎಚ್ಚರಿಕೆ ನೀಡಿದರು.

ಮಲ್ಲಳ್ಳಿ ಜಲಪಾತದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಇಂದು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಯಿತು.

ಬೆಟ್ಟದಳ್ಳಿ ಗ್ರಾ.ಪಂ. ಅಧ್ಯಕ್ಷೆ ಹೆಚ್.ಆರ್. ಪವಿತ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಲ್ಲಳ್ಳಿ ಜಲಪಾತದ ಬಳಿ ಮೂಲಭೂತ ಸೌಕರ್ಯ ಒದಗಿಸುವದೂ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಜಲಪಾತದ ಬಳಿ ಜಾಗ ಕಬಳಿಸುವ ಹುನ್ನಾರ ನಡೆಸಲಾಗಿದೆ. ಬೆಂಗಳೂರಿನ ವಿಘ್ನೇಶ್ ಎಂಬವರು, ಜಲಪಾತದ ಬಳಿ ಸರ್ವೆ ನಡೆಸಿದ್ದು, ಸರ್ಕಾರಿ ಜಾಗ ತನಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಮೂಲ ನಿವಾಸಿಗಳಿಗೆ ಅನೇಕ ದಶಕದಿಂದ ದಾಖಲೆ ನೀಡದ ಅಧಿಕಾರಿಗಳು, ಕಿರುಕುಳ ಉಂಟು ಮಾಡುತ್ತಿದ್ದು, ಸ್ಥಳೀಯರು ಜಲಪಾತದ ಬಳಿ ನಿರ್ಮಿಸಿದ್ದ ಮನೆ, ಅಂಗಡಿಗಳನ್ನು ನೆಲಸಮ ಮಾಡಲಾಗಿದೆ. ಆದರೆ ಹೊರಭಾಗದ ಮಂದಿಗೆ ಮಣೆ ಹಾಕುತ್ತಿದ್ದಾರೆ ಎಂದು ಯುವ ವೇದಿಕೆ ಅರುಣ್ ಕೊತ್ನಳ್ಳಿ, ಹರಪಳ್ಳಿ ರವೀಂದ್ರ ಸಭೆಯಲ್ಲಿ ಆರೋಪಿಸಿದರು.

ಸರ್ಕಾರಿ ಜಾಗವನ್ನು ಹೊರ ಭಾಗದ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಟ್ಟಲ್ಲಿ ಹೋರಾಟ ಹಮ್ಮಿ ಕೊಳ್ಳಲಾಗುವದು ಎಂದು ಸಭೆಯಲ್ಲಿದ್ದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಅಭಿವೃದ್ಧಿ ಅಧಿಕಾರಿ ತಮ್ಮಯ್ಯ ಅವರುಗಳಿಗೆ ಎಚ್ಚರಿಕೆ ನೀಡಿದರು.

ಜಲಪಾತಕ್ಕೆ ಬರುವ ಪ್ರವಾಸಿಗ ರಿಂದ ಸುಂಕ ವಸೂಲಿ ಮಾಡುವ ಟೆಂಡರ್ ಪಡೆದಿರುವ ವ್ಯಕ್ತಿ ತನ್ನಿಷ್ಟದಂತೆ ದರಗಳನ್ನು ನಿಗದಿ ಪಡಿಸಿದ್ದಾರೆ. ಪಂಚಾಯತ್‍ರಾಜ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ತಕ್ಷಣ ಶುಲ್ಕವನ್ನು ಕಡಿತಗೊಳಿಸಬೇಕು. ಪ್ರವಾಸಿಗರನ್ನು ಸುಲಿಗೆ ಮಾಡಬಾರದು ಎಂದು ಹರಪಳ್ಳಿ ರವೀಂದ್ರ ಒತ್ತಾಯಿಸಿದರು.

ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಜಲಪಾತಕ್ಕೆ ಪ್ರವೇಶ ನೀಡಬೇಕೆಂಬ ನಿಯಮ ವಿದ್ದರೂ ಇದನ್ನು ಗಾಳಿಗೆ ತೂರಲಾಗಿದೆ. ಪ್ಲಾಸ್ಟಿಕ್-ಗಾಜುಗಳನ್ನು ಎಸೆಯದಂತೆ ಯಾವದೇ ಜಾಗ್ರತೆ ವಹಿಸಿಲ್ಲ. ಶುಲ್ಕಸಂಗ್ರಹ ಕೇಂದ್ರವನ್ನು ಅಂಗಡಿಯನ್ನಾಗಿ ಪರಿವರ್ತಿಸಲಾಗಿದೆ. ಈ ಅಂಶಗಳ ಮೇಲೆ ಸಂಬಂಧಿಸಿದ ಗುತ್ತಿಗೆದಾರನಿಗೆ ನೋಟೀಸ್ ಜಾರಿ ಮಾಡಬೇಕು. ಅಥವಾ ಟೆಂಡರ್‍ನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ಸಲಹೆ ನೀಡಿದರು.

ಟೆಂಡರ್‍ನಲ್ಲಿರುವ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ದಾಖಲೆ ಗಳಿದ್ದು, ತಕ್ಷಣ ಕ್ರಮ ಕೈಗೊಳ್ಳಿ ಎಂದು ಕೊತ್ನಳ್ಳಿ ಅರುಣ್, ಗಿರೀಶ್ ಮಲ್ಲಪ್ಪ ಆಗ್ರಹಿಸಿದರು. ಜಲಪಾತದ ಶುಲ್ಕ ಸಂಗ್ರಹ ಟೆಂಡರ್‍ನ್ನು ತನಗೇ ನೀಡಿದ್ದರೆ ಅದರಿಂದ ಬರುವ ಆದಾಯವನ್ನು ಗ್ರಾಮದ ಅಭಿವೃದ್ಧಿ, ದೇವಸ್ಥಾನ ಹಾಗೂ ಜಲಪಾತದ ಅಭಿವೃದ್ಧಿಗೆ ನೀಡುವ ಬಗ್ಗೆ ಗ್ರಾಮಸ್ಥರಿಗೆ ಈ ಹಿಂದೆಯೇ ತಿಳಿಸಿದ್ದರೂ, ಹೊರಭಾಗದ ವ್ಯಕ್ತಿಗಳಿಗೆ ನೀಡಿ ಇದೀಗ ಮನಸೋಯಿಚ್ಛೆ ವಸೂಲಿ ಮಾಡಲಾಗುತ್ತಿದೆ. ಮುಂದಿನ ಬಾರಿ ಈ ಬಗ್ಗೆ ಗಮನಿಸುವಂತೆ ಹರಪಳ್ಳಿ ರವೀಂದ್ರ ಸಭೆಯ ಗಮನ ಸೆಳೆದರು.

ಜಲಪಾತದ ಬಳಿ ಇಟ್ಟುಕೊಂಡಿದ್ದ ಗೂಡಂಗಡಿಗಳನ್ನು ಕಂದಾಯ ಇಲಾಖಾಧಿಕಾರಿಗಳು ತೆರವು ಗೊಳಿಸಿದ್ದಾರೆ. ಮನೆಗಳನ್ನೂ ನಾಶಮಾಡಿ ಅದರೊಳಗಿದ್ದ ವಸ್ತುಗಳನ್ನು ವಶಪಡಿಸಿಕೊಂಡು 3 ತಿಂಗಳು ಕಳೆದರೂ ಇಂದಿಗೂ ವಸ್ತುಗಳನ್ನು ನೀಡಿಲ್ಲ. ತಕ್ಷಣ ಜಿಲ್ಲಾಧಿ ಕಾರಿಗಳು ಈ ಬಗ್ಗೆ ಗಮನಹರಿ¸ Àಬೇಕು. ತಪ್ಪಿದಲ್ಲಿ ರಸ್ತೆ ತಡೆಯೊಂದಿಗೆ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವದು ಎಂದು ಅರುಣ್ ಎಚ್ಚರಿಸಿದರು.

ತಾ. 7ರಂದು ಎಲ್ಲಾ ವಸ್ತುಗಳನ್ನು ವಾರಸುದಾರರಿಗೆ ನೀಡುವ ಬಗ್ಗೆ ತಹಶೀಲ್ದಾರರು ದೂರವಾಣಿ ಮೂಲಕ ಭರವಸೆ ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಸಭೆಯಲ್ಲಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಹೇಳಿದರು.

‘ಬೆಟ್ಟದಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂರಾರು ಕೋಟಿ ವೆಚ್ಚದ ರೆಸಾರ್ಟ್ ನಿರ್ಮಾಣವಾಗುತ್ತಿದ್ದು, ಪಂಚಾಯಿತಿಗೆ ನಿರೀಕ್ಷಿತ ಮಟ್ಟದಲ್ಲಿ ಸುಂಕ ಬಂದಿಲ್ಲ. ರೆಸಾರ್ಟ್ ಬಗೆಗಿನ ದಾಖಲೆಗಳೂ ಪಂಚಾಯಿತಿಯಲ್ಲಿಲ್ಲ. ಎಷ್ಟು ಹಣ ಪಡೆದುಕೊಂಡಿದ್ದೀರಿ ಹೇಳಿ? ಎಂದು ಅರುಣ್ ಅವರು ಪಿಡಿಓ ತಮ್ಮಯ್ಯ ಅವರಲ್ಲಿ ಪ್ರಶ್ನಿಸಿದರು. ‘ಹಣ ತೆಗೆದು ಕೊಳ್ಳೋದಿರಲಿ; ಒಂದು ಕಪ್ ಟೀ ಸಹ ಕುಡಿದಿಲ್ಲ’ ಎಂದು ಅಧಿಕಾರಿ ಸಭೆಯಲ್ಲಿ ಹೇಳಿದರು. ಪುಷ್ಪಗಿರಿ ಮಲ್ಲಿಕಾರ್ಜುನ ದೇವಾಲಯದ ಬಳಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ರಸ್ತೆಗಳನ್ನು ಅಗಲೀಕರಣ ಮಾಡಬೇಕು. ವಸತಿ ಗೃಹಗಳನ್ನು ನಿರ್ಮಿಸಬೇಕು. ಮಡಿಕೇರಿಯಿಂದ ಮಾದಾಪುರ, ಕಿಕ್ಕರಳ್ಳಿ, ಕುಡಿಗಾಣ, ಕೊತ್ನಳ್ಳಿ, ಪುಷ್ಪಗಿರಿ, ಕುಂದಳ್ಳಿ, ಬಿಸಿಲೆ ಮಾರ್ಗ ವಾಗಿ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಬಸ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರಿಗೆ ಹರಪಳ್ಳಿ ರವೀಂದ್ರ ಮತ್ತು ಅರುಣ್‍ಕುಮಾರ್ ಸಲಹೆ ನೀಡಿದರು.

ಪ್ರಮುಖರಾದ ವೆಂಕಟೇಶ್, ದಿನೇಶ್, ನತೀಶ್, ಪ್ರಸ್ಸಿ, ಕೃಷ್ಣಪ್ಪ, ಉದಯ, ಗೋಪಾಲ್, ಪ್ರದೀಪ್, ಕಾಶಿ ಗೋಪಾಲ್, ಬಾಬು ರಾಜೇಂದ್ರ, ಗಣೇಶ್ ಸೇರಿದಂತೆ ಗ್ರಾಮಸ್ಥರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಭೆಯ ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಕುಮಾರಿ, ಸದಸ್ಯರುಗಳಾದ ಶಿವಣ್ಣ, ಯೋಗೇಶ್, ಮಾಚಯ್ಯ, ಸೀತಮ್ಮ, ವಿಶಾಲಾಕ್ಷಿ ಅವರುಗಳು ಉಪಸ್ಥಿತರಿದ್ದರು.