(ಕಾಯಪಂಡ ಶಶಿಸೋಮಯ್ಯ)

ಮಡಿಕೇರಿ, ನ. 4: ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡುವಿನ ತನಕ ಹರಿಯುವ ನಾಡಿನ ಜೀವನದಿ, ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯ ಹಾಗೂ ಕಾವೇರಿ ನೀರು ಪಡೆಯುವ ನೆರೆರಾಜ್ಯಗಳಲ್ಲೂ ಆರಾಧಿಸಲ್ಪಡುತ್ತಾಳೆ. ತುಲಾ ಸಂಕ್ರಮಣದ ಸಂದರ್ಭ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿ ಅಲ್ಲಿಂದ ಕಿರು ಸಂಕ್ರಮಣದ ತನಕವೂ ಪವಿತ್ರ ಸ್ನಾನಕ್ಕೆ ಕ್ಷೇತ್ರಕ್ಕೆ ಭಕ್ತಾಧಿಗಳ ದಂಡೇ ಹರಿದುಬರುತ್ತದೆ. ತೀರ್ಥೋದ್ಭವದ ಬಳಿಕ ಪವಿತ್ರ ತೀರ್ಥವನ್ನು ಕೊಂಡೊಯ್ದು ಅಲ್ಲಲ್ಲಿ ತೀರ್ಥ ವಿತರಣೆ ಮಾಡುತ್ತಿರುವದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಬಹುತೇಕ ಕಾವೇರಿ ನೀರನ್ನೇ ಅವಲಂಬಿಸಿದೆ. ಬೆಂಗಳೂರಿನ ಒಂದೆಡೆ ಕಳೆದ ಕೆಲವು ವರ್ಷಗಳಿಂದ ಕಾವೇರಿ ಮಾತೆಯನ್ನು ವಿಶೇಷ ರೀತಿಯಲ್ಲಿ ಆರಾಧಿಸಲಾಗುತ್ತಿದೆ. ಈ ಕುರಿತ ವರದಿಯಿದು.

ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 400 ಕೊಡವ ಕುಟುಂಬ ಗಳಿವೆ. ‘ಸೌತ್ ಎಂಡ್ ವೃತ್ತ’ ಎಂದು ಕರೆಯುವ ಈ ಸ್ಥಳದಲ್ಲಿ ಜಯನಗರ ಕೊಡವ ಸಂಘ ಇದೆ. ಸೌತ್ ಎಂಡ್ ವೃತ್ತದ ಯಡಿಯೂರು ವಾರ್ಡ್‍ನಲ್ಲಿ. ಕೆ.ಆರ್.ಎಸ್.ನಿಂದ ಬೆಂಗಳೂರಿಗೆ ನೀರು ಪೂರೈಕೆಯಾಗುವ 4 ಹಂತದ ಯೋಜನೆಗಳ ಕೊನೆಯ ಪಾಯಿಂಟ್ ಸೇರುವದು ಈ ಸ್ಥಳದಲ್ಲಿ. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬೆಂಗಳೂರು ನಗರ ಹಾಗೂ ನಗರ ಜಿಲ್ಲೆಯ ವಕ್ತಾರರಾಗಿರುವ ಎನ್.ಆರ್. ರಮೇಶ್ ಅವರ ಆಸಕ್ತಿಯ ಫಲವಾಗಿ ಇಲ್ಲಿ ಕಾವೇರಿ ಮಾತೆ ವಿಶೇಷ ರೀತಿಯಲ್ಲಿ ಆರಾಧಿಸಲ್ಪಡುತ್ತಾಳೆ. ಜಯನಗರ ಕೊಡವ ಸಂಘದೊಂದಿಗೆ ಸ್ಥಳೀಯರು ಕೈಜೋಡಿಸಿ ತೀರ್ಥೋದ್ಭವದ ಬಳಿಕ ಇಲ್ಲಿ ಮಾತೆ ಯನ್ನು ತೀರ್ಥ ವಿತರಣೆಯೊಂದಿಗೆ ಪೂಜಿಸಲಾಗುತ್ತದೆ. ಸಂಘದಿಂದ ಎನ್.ಆರ್. ರಮೇಶ್ ಸೇರಿದಂತೆ ಅಲ್ಲಿನವರ ಆಸಕ್ತಿಯ ಫಲವಾಗಿ ಸೌತ್ ಎಂಡ್ ವೃತ್ತದಲ್ಲಿ ಆಕರ್ಷಕವಾದ ಉದ್ಯಾನವನವೊಂದು ನಿರ್ಮಾಣವಾಗಿದೆ. ಮೈಸೂರು ಅರಸರ ಪೈಕಿ ಶಕ್ತಿಶಾಲಿ ಅರಸ ಎಂದು ಗುರುತಿಸಿ ಕೊಂಡಿರುವ ಹೆಚ್ಚು ಯುದ್ಧಗಳನ್ನು ಗೆದ್ದಿರುವ ರಣಧೀರ ಕಂಠೀರವ ಒಡೆಯರ್ ಹೆಸರಿನ ಈ ಉದ್ಯಾನವನ ವಿಶೇಷ ರೀತಿಯಲ್ಲಿದೆ. ಸುಮಾರು ಆರೂವರೆ ಎಕರೆಯಷ್ಟು ವಿಸ್ತೀರ್ಣದಲ್ಲಿ ಬರುವ ಈ ಉದ್ಯಾನವನದಲ್ಲಿ ಅಂದಾಜು 2300 ವರ್ಷಗಳ ಕರ್ನಾಟಕ ಇತಿಹಾಸವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ರಾಜವಂಶಸ್ಥರ ಪ್ರಮುಖ ದೊರೆಗಳ ಪ್ರತಿಮೆಗಳು, ಕ್ರಿ.ಪೂ. 300ರಿಂದ ಕ್ರಿ.ಶ. 1900ರ ತನಕ ಹೆಸರು ಮಾಡಿರುವ ಕನ್ನಡದ ಶ್ರೇಷ್ಠ ಕವಿಗಳ ಸಂಪೂರ್ಣ ವಿವರ ಈ ಉದ್ಯಾನವನದಲ್ಲಿದ್ದು, ಇದೊಂದು ಕರುನಾಡಿನ ಸಮಗ್ರ ಭಂಡಾರವಾಗಿದೆ ಎಂದು ಎನ್.ಆರ್. ರಮೇಶ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದರು. ರಾಜವಂಶಸ್ಥರ ಪೈಕಿ ಪ್ರಮುಖ ದೊರೆಗಳಾದ ಕದಂಬ ವಂಶದ ಮಯೂರ ವರ್ಮ, ಚಾಲುಕ್ಯ ವಂಶದ ಇಮ್ಮಡಿ ಪುಲಿಕೇಶಿ, ರಾಷ್ಟ್ರಕೂಟ ವಂಶದ ಅಮೋಘ ವರ್ಮ, ನೃಪತುಂಗ, ಹೊಯ್ಸಳ ವಂಶದ ವಿಷ್ಣುವರ್ಧನ, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯ ಅವರ 7 ಅಡಿ ಎತ್ತರದ ಪ್ರತಿಮೆಗಳು ಈ ಉದ್ಯಾನವನದಲ್ಲಿವೆ. ಇದರೊಂದಿಗೆ ಶ್ರೇಷ್ಠ ಕವಿಗಳು, ಸಾಧಕ ಕನ್ನಡಿಗರ ವಿವರ ಇಲ್ಲಿವೆ.

ಈ ಉದ್ಯಾನವನದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಾಡಿನ ಜೀವನದಿ ಕಾವೇರಿಯ 7 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕರುನಾಡ ಜೀವನದಿ ಕಾವೇರಿ ಎಂಬ ಹೆಸರಿನೊಂದಿಗೆ ನಿರ್ಮಿಸಲಾಗಿದ್ದು, ಇದರಲ್ಲಿ ಸದಾ ನೀರು ಚಿಮ್ಮುತ್ತಿರುವಂತೆ ವ್ಯವಸ್ಥೆ ಮಾಡಲಾಗಿದೆ. ಕಾವೇರಿಯನ್ನು ಪೂಜಿಸುವದು ಬೆಂಗಳೂರಿನ ಜನತೆಯ ಕರ್ತವ್ಯವೂ ಆಗಿದೆ ಎನ್ನುತ್ತಾರೆ ರಮೇಶ್.

ತೀರ್ಥ ವಿತರಣೆ

ತೀರ್ಥೋದ್ಭವದ ಬಳಿಕ ತಲಕಾವೇರಿಯಿಂದ ಇಲ್ಲಿನ ತೀರ್ಥವನ್ನು ಕೊಂಡೊಯ್ದು ಮರುದಿನ ತೀರ್ಥ ಪೂಜೆಯೊಂದಿಗೆ, ಜನರಿಗೆ ತೀರ್ಥ ವಿತರಣೆ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ಪದ್ಮನಾಭ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಆರ್. ಅಶೋಕ್ ಅವರು ಭಾಗಿಯಾಗಿದ್ದರು. ಈ ವಿಭಾಗದ ಕೊಡವ ಕುಟುಂಬಗಳೊಂದಿಗೆ ಸ್ಥಳೀಯರು ಸೇರಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗಿ ರಮೇಶ್ ಅವರು ತಿಳಿಸಿದ್ದಾರೆ. ಈ ಉದ್ಯಾನವನವಿರುವ ಯಡಿಯೂರು ವಾರ್ಡ್ ಸತತ 8 ವರ್ಷಗಳಿಂದ ದಕ್ಷಿಣ ಭಾರತದ ಮಾದರಿ ವಾರ್ಡ್ ಎಂದು ಪ್ರಶಸ್ತಿ ಪಡೆದುಕೊಳ್ಳುತ್ತಿದೆ.

ಇಂದು ಸಂತೋಷಕೂಟ

ಜಯನಗರ ಕೊಡವ ಸಂಘದಿಂದ ವರ್ಷಕ್ಕೊಮ್ಮೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಸಂತೋಷಕೂಟ, ಕ್ರೀಡಾಕೂಟವನ್ನು ಏರ್ಪಡಿಸಲಾಗುತ್ತಿದೆ. ಈ ಬಾರಿ ತಾ. 5 ರಂದು (ಇಂದು) ಕಾರ್ಯಕ್ರಮವಿದ್ದು, ಈ ವಿಭಾಗದ ಪ್ರಮುಖರು ಸಂಘದವರೊಂದಿಗೆ ಭಾಗಿಯಾಗಲಿದ್ದಾರೆ. ಕಾರ್ಯ ಕ್ರಮದಲ್ಲಿ ಅತಿಥಿಗಳಾಗಿ ಸಂಸದ, ಕೇಂದ್ರ ಸಚಿವ ಅನಂತಕುಮಾರ್, ಶಾಸಕರಾದ ಆರ್.ಅಶೋಕ್, ವಿಜಯ ಕುಮಾರ್, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಎನ್.ಆರ್. ರಮೇಶ್, ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಪಾಲ್ಗೊಳ್ಳು ತ್ತಿದ್ದಾರೆ ಎಂದು ಜಯನಗರದ ಸಂಘದ ಅಧ್ಯಕ್ಷ ಕುಟ್ಟಂಡ ಸನ್ನಿ ಚಂಗಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಸಂಘದಿಂದ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಕೇವಲ ಕೊಡವರಿಗೆ ತೀರ್ಥ ವಿತರಿಸ ಲಾಗುತ್ತಿತ್ತು. ಇದೀಗ ಎನ್.ಆರ್. ರಮೇಶ್, ಆರ್. ಅಶೋಕ್ ಅವರ ಆಸಕ್ತಿಯಿಂದ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಪ್ರತಿಮೆ ಎದುರು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಘದವರೊಂದಿಗೆ ಸ್ಥಳೀಯರೂ ಸೇರಿಕೊಳ್ಳುತ್ತಿದ್ದಾರೆ. ತಲಕಾವೇರಿ ಪ್ರವಾಸಿ ಕೇಂದ್ರವಲ್ಲ, ಕಾವೇರಿಗೆ ತನ್ನದೇ ಆದ ಮಹತ್ವವಿದೆ. ಕಾವೇರಿ ನದಿಯನ್ನು ಉಳಿಸಿ ಕೊಳ್ಳುವದು, ಸ್ವಚ್ಛತೆ ಕಾಪಾಡುವದು ಸೇರಿದಂತೆ ಮಾತೆಯ ಪವಿತ್ರತೆಯ ಬಗ್ಗೆ ಈ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುದು ಎಂದು ಚಂಗಪ್ಪ ಹೇಳಿದರು.