ನಾಪೆÉÇೀಕ್ಲು, ನ. 4: ಕುಡಿಯುವ ನೀರು, ರಸ್ತೆ ಸೇರಿದಂತೆ ಗ್ರಾಮೀಣ ಜನರ ಮೂಲಭೂತ ಸೌಲಭ್ಯಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದರು. ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ. 45 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಮೇನೆ, ಬೈರಂಡ ಬಾಣೆ, ಚಂಬಾರಂಡ ಮತ್ತು ಎಮ್ಮೆಮಾಡು ದರ್ಗಾದ ಅನ್ನದಾನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜಿಲ್ಲೆಗೆ ವಾರ್ಷಿಕ ರೂ. 50 ಲಕ್ಷಗಳ ಪ್ಯಾಕೇಜ್ ದೊರೆಯುತ್ತಿದೆ. ಗ್ರಾಮೀಣ ಪ್ರದೇಶ ಮತ್ತು ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದಾರೆ ಎಂದರು. ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ವಿಶೇಷ ಕಾಳಜಿಯಿಂದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಎಮ್ಮೆಮಾಡು ದರ್ಗಾ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವದು ಎಂದರು. ಕಾಂಗ್ರೆಸ್ ಸರಕಾರ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ಮುಂದಿನ ದಿನಗಳಲ್ಲಿ ಪಕ್ಷವನ್ನು ಬೆಂಬಲಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾಹಿತಿ ನೀಡಿ, ಎಮ್ಮೆಮಾಡು ದರ್ಗಾ ರಸ್ತೆಯನ್ನು ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಭರವಸೆ ನೀಡಿದ್ದಾರೆ ಎಂದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಬಿ.ಎಸ್. ತಮ್ಮಯ್ಯ, ಮತ್ರಂಡ ದಿಲ್ಲು, ನಾಪೆÇೀಕ್ಲು ಹೊಬಳಿ ಅಧ್ಯಕ್ಷ ಪಿ.ಎಂ. ಹಂಸ, ಕಾರ್ಯದರ್ಶಿ ಎಂ.ಎಸ್. ಅಶ್ರಫ್, ಬ್ಲಾಕ್ ಕಾರ್ಯದರ್ಶಿ ಅಬ್ದುಲ್ ಅಜೀಜ್, ಸಿ.ಎ. ಮಾಹಿನ್, ಎಂ.ಎಸ್. ಗಫೂರ್, ಐ.ಹೆಚ್. ಮಹಮ್ಮದ್, ಸಿ.ಎಂ. ಇಬ್ರಾಹಿಂ ಹಾಜಿ, ಕೆ.ಎಂ. ರಷೀದ್, ಎಂ.ಎಸ್. ಮೂಸ, ಕಾಳೇರ ಖಾದರ್, ಪಿ.ಕೆ. ಮಹಮ್ಮದ್ ಹನೀಪ್, ಟಿ.ಕೆ. ಯುಸೂಫ್, ಎಂ.ವೈ. ಹ್ಯಾರೀಸ್, ಅಬ್ದುಲ್ ಅಜೀಜ್, ಪಿ.ಹೆಚ್. ಉಬೈದ್, ಪಿ.ಎ. ಗಫೂರ್, ಮತ್ತಿತರ ಕಾರ್ಯಕರ್ತರು ಇದ್ದರು.