ಸುಂಟಿಕೊಪ್ಪ, ನ. 4: ಮಾದಾಪುರ ರಸ್ತೆಯಲ್ಲಿ ಲಾರಿ ಮತ್ತು ಪಿಕ್‍ಆಪ್ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪಿಕ್‍ಆಪ್ ವಾಹನದಲ್ಲಿ ತೆರಳುತ್ತಿದ್ದ 8 ಮಂದಿಗೆ ಗಾಯವಾದ ಘಟನೆ ಸಂಜೆ ಸಂಭವಿಸಿದೆ.

ಮಾದಾಪುರದಿಂದ ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದ (ಕೆಎ 12 5063) ಲಾರಿ ಮತ್ತು ಸುಂಟಿಕೊಪ್ಪ ಕಡೆಯಿಂದ ಮಾದಾಪುರಕ್ಕೆ ತೋಟದ ಕಾರ್ಮಿಕರನ್ನು ಕರದೊಯ್ಯುತ್ತಿದ್ದ ಬೊಲೆರೋ ಪಿಕ್‍ಆಪ್ (ಕೆಎ 02 ಎಬಿ 4132) ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಪಿಕ್ ಆಪ್ ವಾಹನದ ಹಿಂಭಾಗದಲ್ಲಿ ಕುಳಿತಿದ್ದ 8 ಮಂದಿ ಕಾರ್ಮಿಕರಿಗೆ ವಾಹನದ ರಾಡುಗಳು ತಗುಲಿ ತಲೆ, ಕಿವಿ, ಮುಖ, ಕೈಗಳಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಪಿಕ್‍ಆಪ್ ವಾಹನದ ಚಾಲಕನ ನಿಯಂತ್ರಣ ತಪ್ಪಿರುವದು ಈ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಎಸ್. ಜಯರಾಮ್ ಸ್ಥಳಕ್ಕೆ ಭೇಟಿ ನೀಡಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.