ಮಡಿಕೇರಿ, ನ. 3: ಕೊಡಗು ಸಮೃದ್ಧ ಜಿಲ್ಲೆಯಾಗಿದ್ದು, ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಕೋರಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾನೂನು ಸುವ್ಯವಸ್ಥೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೊಡಗು ಆರ್ಥಿಕ, ಶೈಕ್ಷಣಿಕ, ಕೃಷಿ, ಉತ್ತಮ ಪರಿಸರ, ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದ್ದು, ಸಮೃದ್ಧಿಯಾಗಿದೆ. ಅದನ್ನು ಕಾಪಾಡಿಕೊಂಡು ಹೋಗುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಕೊಡಗು ಜಿಲ್ಲೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು, ಅದನ್ನು ಉಳಿಸಿಕೊಂಡು ಹೋಗುವದು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಶಾಂತಿ ಸುವ್ಯವಸ್ಥೆ ಹಾಳಾದಲ್ಲಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಹೋಂ ಸ್ಟೇ, ರೆಸಾರ್ಟ್‍ಗಳನ್ನು ನಂಬಿ ಬದುಕುವವರ ಜೀವನ ಮಟ್ಟ ಕುಗ್ಗಲಿದೆ. ಜೊತೆಗೆ ಪ್ರವಾಸಿ ಕೇಂದ್ರಗಳಿಗೆ ಬರುವವರ ಸಂಖ್ಯೆ ಕ್ಷೀಣಿಸಲಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

(ಮೊದಲ ಪುಟದಿಂದ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಟಿಪ್ಪು ಜಯಂತಿ ಸಂದರ್ಭ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುವದು. ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗುವದು. ಸೇನಾ-ಮಿಲಿಟರಿ ಪೊಲೀಸ್, ಹೋಂ ಗಾರ್ಡ್ ಹೀಗೆ ಎಲ್ಲಾ ಹಂತದ ಪೊಲೀಸರನ್ನು ನಿಯೋಜಿಸಿ ಅಗತ್ಯ ಬಂದೋಬಸ್ತ್ ಮಾಡಿಕೊಳ್ಳಲಾಗುವದು. ವಿವಿಧ ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗುವದು ಎಂದು ಹೇಳಿದರು.

ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್ ಅಳವಡಿಸಲು ಅನುಮತಿ ನೀಡಬಾರದು. ಅನುಮತಿ ಬೇಕಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಪೊಲೀಸ್ ಇಲಾಖೆಗೆ ಹಿಂಬರಹ ಬರೆದು ಕಳುಹಿಸುವಂತೆ ಪಿ. ರಾಜೇಂದ್ರ ಪ್ರಸಾದ್ ಹೇಳಿದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಹಂತದಲ್ಲಿ ಶಾಂತಿ ಸಭೆಯನ್ನು ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಗಾಗಲೇ ದಸರಾ, ಕಾವೇರಿ ತುಲಾ ಸಂಕ್ರಮಣ ಜಾತ್ರೆ, ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲಾಗಿದೆ. ಮುಂದೆಯೂ ಪ್ರತಿ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ತಹಶೀಲ್ದಾರರೊಂದಿಗೆ ಪೊಲೀಸ್ ಅಧಿಕಾರಿಗಳು, ತಾ.ಪಂ. ಇಒಗಳು ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ತಹಶೀಲ್ದಾರ್‍ರಾದ ಕುಸುಮ, ಮಹೇಶ್, ಗೋವಿಂದರಾಜು, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಂದರರಾಜ್, ಪೌರಾಯುಕ್ತೆ ಬಿ. ಶುಭ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ತಾ.ಪಂ. ಇಒಗಳಾದ ಚಂದ್ರಶೇಖರ್, ಜೀವನ್ ಕುಮಾರ್, ಅಗ್ನಿಶಾಮಕ ಇಲಾಖೆಯ ಚೇತನ್, ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕಿ ಗೀತಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ, ಇತರರು ಇದ್ದರು.

ಸುಂಟಿಕೊಪ್ಪ :ಸರಕಾರಿ ಕಾರ್ಯಕ್ರಮವಾದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಸುಂಟಿಕೊಪ್ಪದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಂಟಿಕೊಪ್ಪ ಠಾಣೆಯ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿಗಳು ಸಂಪೂರ್ಣ ಸಮವಸ್ತ್ರ ಧಾರಣೆಯೊಂದಿಗೆ ಪಟ್ಟದ ಮುಖ್ಯ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.

ಸಿದ್ದಾಪುರ : ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರದಲ್ಲಿ ಪೊಲೀಸ್ ಪಥಸಂಚಲನ ನಡೆಯಿತು. ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವ ವಹಿಸಿದ್ದರು.

ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ನಂಜುಂಡ ಸ್ವಾಮಿ ಅವರ ನೇತೃತ್ವದಲ್ಲಿ ಇಂದು ಸ್ಥಳೀಯ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ ಮಾಡಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಯಿತು.

ಶನಿವಾರಸಂತೆ :ಪೊಲೀಸ್ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಎಂ.ಹೆಚ್. ಗೋವಿಂದ್ ಅವರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.

ಭಾಗಮಂಡಲ : ಭಾಗಮಂಡಲದಲ್ಲಿ ಠಾಣಾಧಿಕಾರಿ ಸದಾಶಿವ ಅವರು ಪಥ ಸಂಚಲನದ ನೇತೃತ್ವ ವಹಿಸಿದ್ದರು.

ಸಿದ್ದಾಪುರ : ಟಿಪ್ಪು ಜಯಂತಿ ಬಗ್ಗೆ ಕಾನೂನು ಮೀರಿ ವರ್ತಿಸಿದರೆ ನಿರ್ದಾಕ್ಷಣ ಕ್ರಮ ಕೈಗೊಳ್ಳಲಾಗುವದೆಂದು ಮಡಿಕೇರಿ ವಿಭಾಗದ ಡಿ.ವೈ.ಎಸ್.ಪಿ. ಸುಂದರಾಜ್ ಎಚ್ಚರಿಕೆ ನೀಡಿದ್ದಾರೆ.

ಸಿದ್ದಾಪುರ ಪಂಚಾಯಿತಿಯ ಸಭಾಂಗಣದಲ್ಲಿ ಟಿಪ್ಪು ಜಂಯತಿ ಆಚರಣೆ ಪ್ರಯುಕ್ತ ಸರ್ವ ಜನಾಂಗದ ಹಾಗೂ ರಾಜಕೀಯ ಪಕ್ಷ ಸಂಘಟನೆಗಳ ಪದಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೆ ಸರ್ಕಾರ ಹಾಗೂ ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳದಲ್ಲೇ ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಲಾಗಿದ್ದು ಇದಲ್ಲದೇ ಯಾವದೇ ಜಾಗದಲ್ಲಿ ಮೆರವಣಿಗೆ ಪ್ರತಿಭಟನೆಗಳಿಗೆ ಅವಕಾಶವಿರುವದಿಲ್ಲ ಕಾನೂನು ಉಲ್ಲಂಘನೆ ಮಾಡುವÀವರ ವಿರುದ್ದ ನಿರ್ದಾಕ್ಷ್ಷಿಣ್ಯ ಕ್ರಮ ಜರುಗಿಸಲಾಗುವದೆಂದರು. ಸಭೆಯಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಠಾಣಾಧಿಕಾರಿ ಎ.ಜೆ. ಸುಬ್ರಮಣ್ಯ ಹಾಗೂ ವಿವಿಧ ಪಕ್ಷದ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಸಲಹೆಗಳನ್ನು ನೀಡಿದರು.

ಶ್ರೀಮಂಗಲ : ತಾ. 10ರಂದು ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪೊನ್ನಂಪೇಟೆಯಿಂದ ಹಲವು ಕೊಡವ ಸಮಾಜಗಳು ಮಡಿಕೇರಿಯವರೆಗೆ ಹಮ್ಮಿಕೊಂಡಿರುವ ವಾಹನ ಜಾಥಕ್ಕೆ ಟಿ.ಶೆಟ್ಟಿಗೇರಿಯ ಮೂಂದ್‍ನಾಡ್ ಕೊಡವ ಸಮಾಜದ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ ತಿಳಿಸಿದ್ದಾರೆ.