ಕುಶಾಲನಗರ, ನ. 4: ಐತಿಹಾಸಿಕ ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ನಡೆಯಲಿರುವ ವಾರ್ಷಿಕ ರಥೋತ್ಸವ ಮತ್ತು ಉತ್ಸವಗಳ ಅಂಗವಾಗಿ ತಾ. 5 ರಿಂದ (ಇಂದಿನಿಂದ) 12 ರತನಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಹೇವಿಳಂಬಿ ಸಂವತ್ಸರದ ಕಾರ್ತಿಕ ಕೃಷ್ಣ ಪಕ್ಷದಲ್ಲಿ ತಾ. 7 ರ ಮಂಗಳವಾರ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ಭವ್ಯ ರಥೋತ್ಸವ ಜರುಗಲಿದೆ. ಗಣಪತಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ರಥೋತ್ಸವಕ್ಕೆ ಈಗಾಗಲೆ ಭರದ ಸಿದ್ಧತೆಗಳು ಆರಂಭಗೊಂಡಿದ್ದು ದೇವಾಲಯ ಹಾಗೂ ರಥವನ್ನು ಸ್ವಚ್ಛಗೊಳಿಸಿ ತಳಿರು, ತೋರಣಗಳು, ವಿದ್ಯುತ್

(ಮೊದಲ ಪುಟದಿಂದ) ದೀಪಗಳಿಂದ ಅಲಂಕರಿಸುವ ಕಾರ್ಯ ಭರದಿಂದ ಸಾಗಿದೆ. ಜಾತ್ರೆ ನಡೆಯುವ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ವಿವಿಧ ರೀತಿಯ ಮನರಂಜನಾ ಚಟುವಟಿಕೆಗಳು ಕೇಂದ್ರಗಳು ಈಗಾಗಲೆ ತೆರೆದಿವೆ.

ವಾರ್ಷಿಕ ಪೂಜೋತ್ಸವದ ಅಂಗವಾಗಿ 9 ದಿನಗಳ ಕಾಲ ವಿವಿಧ ರೀತಿಯ ವಿಶೇಷ ಪೂಜೆ, ಅರ್ಚನೆ, ನೈವೇದ್ಯ ಅಭಿಷೇಕಗಳು ನಡೆಯಲಿವೆ. ಪ್ರತಿದಿನ ಸಂಜೆ ವೇಳೆಗೆ ಸೇವಾರ್ಥದಾರರಿಂದ ಉತ್ಸವಗಳು ನಡೆಯಲಿವೆ. ತಾ. 5ರಂದು ಮೂಷಿಕ ವಾಹನ ಉತ್ಸವ, 6 ರಂದು ಚಂದ್ರಬಿಂಬೋತ್ಸವ, 7 ರಂದು ಪಲ್ಲಕ್ಕಿ ಉತ್ಸವ, 8 ರಂದು ಮಂಟಪೋತ್ಸವ, 9 ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 10 ರಂದು ಅನ್ದೋಲಿಕೋತ್ಸವ, 11 ರಂದು ಕಾವೇರಿ ನದಿಯಲ್ಲಿ ತೆಪ್ಪೋತ್ಸವ, 12 ರಂದು ಅಷ್ಟೋತ್ತರ ಶತಮಾನ ಪೂಜೆಗಳು ಜರುಗುವದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಮಾರೋಪಗೊಳ್ಳಲಿವೆ.

ಗಣಪತಿ ದೇವಾಲಯ ರಥೋತ್ಸವದ ಅಂಗವಾಗಿ ಸ್ಥಳೀಯ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ 97ನೇ ಗೋಪ್ರದರ್ಶನ ಮತ್ತು ಜಾತ್ರೆ ತಾ. 5 ರಿಂದ 19 ರ ತನಕ ನಡೆಸಲಾಗುತ್ತದೆ. ಗೋ ಪ್ರದರ್ಶನದಲ್ಲಿ ವಿವಿಧ ತಳಿಯ ರಾಸುಗಳ ಪ್ರದರ್ಶನ ನಡೆಯಲಿದ್ದು ವಿವಿಧ ವಿಭಾಗಗಳಲ್ಲಿ ನಡೆಯುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ತಳಿಯ ರಾಸುಗಳಿಗೆ ಬಹುಮಾನ ವಿತರಿಸಲಾಗುತ್ತದೆ.

ಜಾತ್ರಾ ಅಂಗವಾಗಿ ಗುಂಡೂರಾವ್ ಬಡಾವಣೆಯ ಮೈದಾನದ ಆವರಣದ ಸಾಂಸ್ಕøತಿಕ ವೇದಿಕೆಯಲ್ಲಿ 8 ರಿಂದ 18 ರವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭ 7 ಗಂಟೆಯಿಂದ 8.30 ರವರೆಗೆ ಗಣಪತಿ ದೇವಾಲಯದಲ್ಲಿ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತವೆ.

ಜಾತ್ರೆಯ ಯಶಸ್ಸಿಗಾಗಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಉಪಾಧ್ಯಕ್ಷ ಆರ್. ಬಾಬು, ಗೌರವ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ಖಜಾಂಚಿ ಎಂ.ಕೆ.ದಿನೇಶ್, ಸಹ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ನಿರ್ದೇಶಕರಾದ ಎಸ್.ಎನ್. ನರಸಿಂಹಮೂರ್ತಿ, ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ, ಟಿ.ಆರ್. ಶರವಣಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತರುಗಳು ಎಲ್ಲಾ ರೀತಿಯ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರಬಾಬು ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.