ವೀರಾಜಪೇಟೆ, ನ. 3: ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದ್ದು, ತನಿಖೆಯಲ್ಲಿ ಸಚಿವ ಜಾರ್ಜ್ ಮೊದಲನೇ ಸ್ಥಾನದಲ್ಲಿರುವದರಿಂದ ತನ್ನ ಸ್ಥಾನ ಹಾಗೂ ಶಾಸಕರ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಪಕ್ಷದ ವತಿಯಿಂದ ವೀರಾಜಪೇಟೆಯಲ್ಲಿ ತಾ:6ರಿಂದ ಮಾರನೇ ದಿನ ಬೆಳಿಗ್ಗೆ 7 ಗಂಟೆಗೆಯವರಗೆ ಉಪವಾಸ ಸತ್ಯಾಗ್ರಹ ಹೂಡಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಏಳು ದಿನಗಳ ಹಿಂದೆ ಸಚಿವರ ರಾಜೀನಾಮೆಗೆ ಗಡುವು ನೀಡಲಾಗಿತ್ತು. ಈ ತನಕ ಮುಖ್ಯಮಂತ್ರಿಯವರು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವದೇ ಕ್ರಮ ಕೈಗೊಳ್ಳದಿರುವ ದರಿಂದ ಜನತಾದಳ ಪಕ್ಷದ ಕಾರ್ಯಕರ್ತರು ಈ ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯ ಸರಕಾರ ನಾಟಕೀಯವಾಗಿ ಸಿಐಡಿ ತನಿಖೆ ನಡೆಸಿದಾಗಲೂ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗಿನ ಸಿಬಿಐನ ತನಿಖೆ ಸಮಯದಲ್ಲಿ ಜಾರ್ಜ್ ರಾಜಿನಾಮೆ ನೀಡಿದರೆ ಪಾರದರ್ಶಕತೆಯ ಮುಕ್ತ ತನಿಖೆಗೆ ಅವಕಾಶವಾಗಲಿದೆ. ಅನ್ಯಾಯಕ್ಕೊಳಗಾಗಿರುವ ಗಣಪತಿ ಕುಟುಂಬಕ್ಕೆ ನ್ಯಾಯ ದೊರಕಿಸುವದು ಪಕ್ಷದ ಉದ್ದೇಶವಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಅರ್ಹರಿಗೆ ನೀಡಿಲ್ಲ. ಸಮಾಜ ಸೇವಕರು, ರೈತರು, ಬುದ್ಧಿ ಜೀವಿಗಳನ್ನು ಕಡೆಗಣಿಸಲಾಗಿದೆ. ಜಾತಿ ಹಾಗೂ ರಾಜಕೀಯ ಒತ್ತಡ, ಪ್ರಭಾವದ ಆಧಾರದ ಮೇಲೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರಿ ಲಂಕೇಶ್ ಹತ್ಯೆ ವೈಜ್ಞಾನಿಕವಾಗಿ ತನಿಖೆಯಾದರೆ ಮಾತ್ರ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯ. ಇಂದಿನ ರಾಜಕೀಯ ವಿದ್ಯಾಮಾನದ ಪ್ರಕಾರ ಮಡಿಕೇರಿ ಕ್ಷೇತ್ರದಲ್ಲಿ ಮಾಜಿ ಸಚಿವ ಜೀವಿಜಯ ಅವರ ಗೆಲುವು ನಿಶ್ಚಿತ ಎಂದು ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿ, ಈಗಾಗಲೇ ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆಗೆ ಚಾಲನೆ ನೀಡಲಾಗಿದ್ದು ಈಗಾಗಲೇ 60 ಮತಗಟ್ಟೆ ಸಮಿತಿಯನ್ನು ರಚಿಸಲಾಗಿದೆ. ಎಲ್ಲೆಡೆಯಲ್ಲಿಯೂ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್ ಮಾತನಾಡಿ ಪಕ್ಷವನ್ನು ಬೇರುಮಟ್ಟದಿಂದಲೇ ಸಂಘಟಿಸುವ ಕಾರ್ಯ ಆರಂಭವಾಗಿದೆ ಎಂದು ಹೇಳಿದರು.

ಕಾಕೋಟುಪರಂಬು ವಲಯ ಅಧ್ಯಕ್ಷ ಅಮ್ಮಂಡ ವಿವೇಕ್ ಮಾತನಾಡಿ ಪಕ್ಷವನ್ನು ಜಾತ್ಯತೀತವಾಗಿ ಸಂಘಟಿಸಲು ಎಲ್ಲ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಬಾಳೆಕುಟ್ಟೀರ ಬೋಪಯ್ಯ, ಕೆದಮುಳ್ಳೂರು ವಲಯ ಅಧ್ಯಕ್ಷ ಮಾತಂಡ ಚಂಗಪ್ಪ ಉಪಸ್ಥಿತರಿದ್ದರು.