ಮಡಿಕೇರಿ, ನ. 3: ಇಲ್ಲಿನ ಅಂಚೆ ಕಚೇರಿ ಎದುರು ಹಿಂದಿನ ಕಾರಾಗೃಹ ಸಿಬ್ಬಂದಿಯ ವಸತಿಯಿದ್ದ ಸ್ಥಳದಲ್ಲಿ ಕೊಡಗು ತೋಟಗಾರಿಕೆ ಬೆಳೆಗಳ ಸಹಕಾರ ಸಂಘದಿಂದ ‘ಹಾಪ್‍ಕಾಮ್ಸ್’ ಕಟ್ಟಡ ನಿರ್ಮಿಸಲು ತಯಾರಿ ನಡೆದಿದೆ. ಈ ನಡುವೆ ಜಾಗವನ್ನು ರಾಜ್ಯ ಸರಕಾರದ ‘ಇಂದಿರಾ ಕ್ಯಾಂಟೀನ್’ ಯೋಜನೆಗೆ ಬಳಸಿಕೊಂಡು ಪರ್ಯಾಯವಾಗಿ ‘ಹಾಪ್‍ಕಾಮ್ಸ್’ಗೆ ಇಲ್ಲಿನ ದಾಸವಾಳ ಬೀದಿಯಲ್ಲಿ ಜಾಗ ನೀಡಲು ಚಿಂತನೆ ನಡೆದಿದೆ.

ಮೂಲವೊಂದರ ಪ್ರಕಾರ ಏಳು ವರ್ಷಗಳ ಹಿಂದೆ ಜಿಲ್ಲಾ ತೋಟಗಾರಿಕೆ ಬೆಳೆಗಳ ಸಹಕಾರ ಸಂಘಕ್ಕೆ ಈ ನಿವೇಶನವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಸಂಘದಿಂದ ಇಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ತರಕಾರಿ, ಹಣ್ಣು ಹಂಪಲುಗಳ ಮಾರಾಟ ಮಳಿಗೆಗಳನ್ನು (ಹಾಪ್‍ಕಾಮ್ಸ್) ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಈಗಾಗಲೇ ಕರ್ನಾಟಕ ರಾಜ್ಯ ತೋಟಗಾರಿಕಾ ಸಹಕಾರ ಮಾರಾಟ

(ಮೊದಲ ಪುಟದಿಂದ) ಮಂಡಳಿಯಿಂದ ಕಟ್ಟಡ ನಿರ್ಮಾಣ ಸಲುವಾಗಿ ರೂ. 6.25 ಕೋಟಿ ವೆಚ್ಚದ ಕ್ರಿಯಾಯೋಜನೆಗೆ ಜಿಲ್ಲಾ ಸಂಘಕ್ಕೆ ಅನುಮತಿಯೊಂದಿಗೆ ಮೊದಲ ಕಂತಿನಲ್ಲಿ ರೂ. 1.35 ಕೋಟಿ ಅನುದಾನ ಒದಗಿಸಿರುವದಾಗಿ ಗೊತ್ತಾಗಿದೆ.

ಇದೀಗ ಜಿಲ್ಲಾಧಿಕಾರಿಗಳು ಜಿಲ್ಲಾ ಸಂಘದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ‘ಹಾಪ್‍ಕಾಮ್ಸ್’ ನಿವೇಶನ ಬಿಟ್ಟು ಕೊಡುವಂತೆಯೂ, ಪರ್ಯಾಯ ಜಾಗ ನಗರಸಭೆಯಿಂದ ತೋಟಗಾರಿಕಾ ಸಂಘಕ್ಕೆ ಕಲ್ಪಿಸಿಕೊಡಲಾಗುವದೆಂದೂ ಪ್ರಸ್ತಾಪಿಸಿದ್ದು, ಈ ಬೇಡಿಕೆಯನ್ನು ಸಂಘದ ಅಧ್ಯಕ್ಷ ರಮೇಶ್ ಚಂಗಪ್ಪ ತಿರಸ್ಕರಿಸಿದ್ದಾರೆ.

ಬದಲಾಗಿ ಈಗಾಗಲೇ ತಾವು ಹಾಪ್‍ಕಾಮ್ಸ್ ಕಟ್ಟಡಕ್ಕೆ ಪ್ರಸಕ್ತ ಗುರುತಿಸಿರುವ ನಿವೇಶನದಲ್ಲಿ ಕಾಮಗಾರಿಗೆ ಯೋಜನೆಯೊಂದಿಗೆ ನೀಲಿ ನಕಾಶೆ ರೂಪಿಸಿರುವದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪುತ್ತೂರಿನ ಖಾಸಗಿ ನಿರ್ಮಿತಿ ಕೇಂದ್ರ ‘ಮಾಸ್ಟರ್‍ಪ್ಲಾನ್’ ಉದ್ದಿಮೆಗೆ ಗುತ್ತಿಗೆ ಕಾಮಗಾರಿ ವಹಿಸಿರುವದಾಗಿ ತಿಳಿಸಿದ್ದಾರೆ.

ಈಗಾಗಲೇ ಪ್ರಾರಂಭಿಕ ಹಂತದ ಕಾಮಗಾರಿಗಾಗಿ ತೋಟಗಾರಿಕಾ ಸಂಘವು ಪುತ್ತೂರಿನ ಉದ್ದಿಮೆಗೆ ಒಡಂಬಡಿಕೆಯೊಂದಿಗೆ ರೂ. 72.50 ಲಕ್ಷ ಹಣವನ್ನು ಮುಂಗಡ ಪಾವತಿಸಿರುವದಾಗಿ ಮಾಹಿತಿ ನೀಡಿದ್ದಾರೆ. ಹಾಪ್‍ಕಾಮ್ಸ್ ನಿವೇಶನವನ್ನು ಯಾವ ಕಾರಣಕ್ಕೂ ಇಂದಿರಾ ಕ್ಯಾಂಟೀನ್‍ಗೆ ಬಿಟ್ಟು ಕೊಡಲು ಸಾಧ್ಯವಿಲ್ಲವೆಂದು ನಿಲುವು ವ್ಯಕ್ತಪಡಿಸಿದ್ದಾರೆ.

ನೀಡದ ಅನುಮತಿ : ಈ ನಡುವೆ ನಗರಸಭೆ ಆಯುಕ್ತರಿಗೆ ಅರ್ಜಿ ಸಲ್ಲಿಸಿ ನಿವೇಶನ ಸಮತಟ್ಟುಗೊಳಿಸಲು ಅನುಮತಿ ಕೋರಿದ್ದಾಗ ಆಯುಕ್ತರು ಅವಕಾಶ ನೀಡದೆ ತೋಟಗಾರಿಕಾ ಸಹಕಾರ ಸಂಘದ ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡುವಂತೆ ತಿಳಿಸಿ ಅರ್ಜಿ ಹಿಂತಿರುಗಿಸಿರುವದಾಗಿ ಅಧ್ಯಕ್ಷರು ಆರೋಪಿಸಿದ್ದಾರೆ.

ಬದಲಿ ನಿವೇಶನ : ಈ ಹಂತದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರುಗಳು ಹಳೆಯ ದಾಸವಾಳ ಕೆರೆ ನಿವೇಶನ ಮತ್ತು ಹಾಪ್‍ಕಾಮ್ಸ್‍ಗೆ ಈಗಾಗಲೇ ಮಂಜೂರಾಗಿರುವ ಅಂಚೆ ಕಚೇರಿ ಮುಂಭಾಗದ ನಿವೇಶನಗಳ ಖುದ್ದು ಪರಿಶೀಲನೆ ನಡೆಸಿದರು.

ಅಲ್ಲದೆ, ಜಿಲ್ಲಾಧಿಕಾರಿಗಳು ಮತ್ತು ತೋಟಗಾರಿಕಾ ಸಹಕಾರ ಸಂಘದ ಪ್ರಮುಖರೊಂದಿಗೆ ಮುಖತಃ ಚರ್ಚಿಸಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸಲಾಗುವದು ಎಂದು ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.