ಸೋಮವಾರಪೇಟೆ, ನ. 3: ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕಾಣಿಕೆ ನೀಡುತ್ತಿರುವ ಆಟೋ ಚಾಲಕರು ಸೋಮವಾರಪೇಟೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಯೋಜಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಕಾರಣರಾದರು.

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 11ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ, ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ, ಸಾಂಸ್ಕøತಿಕ ರಸಮಂಜರಿ ಕಾರ್ಯಕ್ರಮಗಳು ಬೆಳಗ್ಗಿನಿಂದ ತಡ ರಾತ್ರಿಯವರೆಗೂ ನಡೆದು ಸಾರ್ವಜನಿಕರ ಮನಸೂರೆ ಗೊಂಡವು.

ಬೆಳಿಗ್ಗೆ 8 ಗಂಟೆಗೆ ಇಲ್ಲಿನ ಆಟೋ ನಿಲ್ದಾಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿತು. ನಂತರ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಲಾಯಿತು. 9 ಗಂಟೆಗೆ ಕಕ್ಕೆಹೊಳೆ ಸಮೀಪದ ಬಸವೇಶ್ವರ ಪ್ರತಿಮೆ ಬಳಿಯಿಂದ ನೂರಾರು ಆಟೋಗಳ ಮೆರವಣಿಗೆ, ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದ ಡೊಳ್ಳು ಕುಣಿತದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ನಂತರ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ನಡೆಯಿತು. ನಂತರ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕುಣಿಯೋಣು ಬಾರಾ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷ ಆರ್. ಮೋಹನ್ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ.ಪಂ. ಸದಸ್ಯೆ ಲೀಲಾ ನಿರ್ವಾಣಿ, ಶೀಲಾ ಡಿಸೋಜ, ಮಹಿಳಾ ಸಮಾಜ ಅಧ್ಯಕ್ಷೆ ನಳಿನಿ ಗಣೇಶ್, ಕರವೇ ತಾಲೂಕು ಅಧ್ಯಕ್ಷ ದೀಪಕ್, ಮಹಿಳಾ ಘಟಕಾಧ್ಯಕ್ಷೆ ರೂಪಾ ಸುರೇಶ್, ಚೌಡ್ಲು ವಿಎಸ್‍ಎಸ್‍ಎನ್ ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಕಾಟ್ನಮನೆ ವಿಠಲ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಂತರ ನಡೆದ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆ ಸಭಿಕರ ಮನ ರಂಜಿಸಿತು. ಸಂಜೆ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.