ಬೆಂಗಳೂರು, ನ. 3: ಕರಿಮೆಣಸಿನ ಅನಿರ್ಬಂಧಿತ ಆಮದಿನಿಂದ ಕರ್ನಾಟಕದ ಬೆಳೆಗಾರರು ಮತ್ತು ಖರೀದಿದಾರರು ಅತಂತ್ರರಾಗಿದ್ದು, ಕೇಂದ್ರ ಸರಕಾರ ಕೂಡಲೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವ ಸುರೇಶ್ ಬಾಬು ಅವರಿಗೆ ಬರೆದಿರುವ ಪತ್ರದಲ್ಲಿ ಮುಖ್ಯಮಂತ್ರಿಗಳು ಕರಿಮೆಣಸು ಆಮದಿನಿಂದ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಬೆಳೆಯ ಬೆಲೆಯ ಸ್ಥಿರತೆಗೆ ಶ್ರೀಲಂಕಾದಿಂದ ಆಮದಾಗುತ್ತಿರುವ ಕರಿಮೆಣಸಿನ ಕುರಿತು ಕ್ರಮ ಕೈಗೊಳ್ಳುವದು, ಕೇವಲ ಉತ್ತಮ ಗುಣಮಟ್ಟದ ಕರಿಮೆಣಸನ್ನು ಆಮದು ಮಾಡುವದು, ರೋಗರಹಿತ ಕರಿಮೆಣಸಿಗಾಗಿ ಪರಿಶೀಲನೆ ನಡೆಸುವದು ಇತ್ಯಾದಿ ಕ್ರಮ ಕೈಗೊಳ್ಳಲು ಕೋರಿದ್ದಾರೆ.

ಕಳಪೆ ಗುಣಮಟ್ಟದ ಕರಿಮೆಣಸಿನ ಆಮದಿನಿಂದಾಗಿ ಈ ಹಿಂದೆ ಕೇಜಿಯೊಂದಕ್ಕೆ ಇದ್ದ ರೂ. 650-700 ಬೆಲೆ ಇದೀಗ ರೂ. 350 - 450 ಕುಸಿದಿದೆ ಎಂದು ವಿವರಿಸಿದ್ದಾರೆ.