ಮಡಿಕೇರಿ, ನ. 3: ಇಲ್ಲಿನ ವೆಬ್ಸ್ ಬಳಿ ಅಂದಾಜು ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಕಳಪೆಯಾಗಿರುವ ಬಗ್ಗೆ ‘ಶಕ್ತಿ’ ವರದಿ ಇಂದು ಜರುಗಿದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸುವದ ರೊಂದಿಗೆ ಈ ಯೋಜನೆಯ ನೀಲಿನಕ್ಷೆ ರೂಪಿಸಿರುವ ಇಂಜಿನಿಯರ್ ಪರಿಶೀಲಿಸಿ ವರದಿ ನೀಡುವ ತನಕ ಕೆಲಸ ಸ್ಥಗಿತಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೂತನ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಕುರಿತು ವಿಪಕ್ಷ ಸದಸ್ಯೆ ಅನಿತಾ ಪೂವಯ್ಯ ಪ್ರಸ್ತಾಪಿಸಿ, ತೀರಾ ಅವೈಜ್ಞಾನಿಕವಾಗಿ ಕಟ್ಟಡ ಕೆಲಸ ನಡೆಯುತ್ತಿರುವದಾಗಿ ಅಧ್ಯಕ್ಷರ ಗಮನ ಸೆಳೆದರು. ಈ ವೇಳೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಹಾಗೂ ಆಡಳಿತ ಸದಸ್ಯ ಹೆಚ್.ಎಂ. ನಂದಕುಮಾರ್ ಸಹಿತ ಇತರ ಸದಸ್ಯರು ಧ್ವನಿಗೂಡಿಸಿದರು.

ಮೈಸೂರಿನ ಗುತ್ತಿಗೆದಾರ ಸಿದ್ದಪ್ಪ ಎಂಬವರಿಗೆ ಕಾಮಗಾರಿ ನೀಡದಂತೆ ತಾನು ಪ್ರಾರಂಭದಲ್ಲೇ ಅಧ್ಯಕ್ಷರು ಹಾಗೂ ಆಯುಕ್ತರ ಗಮನ ಸೆಳೆದಿದ್ದಾಗಿ ಹೆಚ್.ಎಂ. ನಂದಕುಮಾರ್ ನೆನಪಿಸಿದರು. ಈ ಸಂದರ್ಭ ಕಾಮಗಾರಿಯ ಗುಣಮಟ್ಟದ ಬಗ್ಗೆ ವಿಪಕ್ಷ ಸದಸ್ಯರು ಗಂಭೀರ ಟೀಕೆಯೊಂದಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದಾಗ, ಇಂಜಿನಿಯರ್ ಅರುಣ್ ಅಭಿಪ್ರಾಯ ನೀಡಿ ತಾನು ಸಿವಿಲ್ ಇಂಜಿನಿಯರ್ ಆಗಿರುವ ಕಾರಣ ನುರಿತ ಕಟ್ಟಡ ನಿರ್ಮಾಣ ಅನುಭವವಿರುವವರಿಂದ ಮಾತ್ರ ಗುಣಮಟ್ಟ ತಿಳಿಯುವದು ಸಾಧ್ಯ ಎಂದರು.

(ಮೊದಲ ಪುಟದಿಂದ) ಆ ಮೇರೆಗೆÉ ಸಭೆಯು ನಿರ್ಣಯ ಕೈಗೊಂಡು, ಬಸ್ ನಿಲ್ದಾಣ ಯೋಜನೆ ರೂಪಿಸಿರುವ ತಜ್ಞರಿಂದ ಖುದ್ದು ಕಾಮಗಾರಿ ಪರಿಶೀಲನೆಯೊಂದಿಗೆ ಅಭಿಪ್ರಾಯ ನೀಡುವ ತನಕ ಕೆಲಸ ಸ್ಥಗಿತಗೊಳಿಸಲು ತೀರ್ಮಾನಿಸಿತು.

ಯುಜಿಡಿ ಪ್ರತಿಧ್ವನಿ: ನಗರ ಒಳಚರಂಡಿ ಕಾಮಗಾರಿ ಮತ್ತು ಆ ಮೂಲಕ ಹದಗೆಟ್ಟಿರುವ ರಸ್ತೆಗಳ ಬಗ್ಗೆ ತೀವ್ರ ಚರ್ಚೆ ನಡೆದು, ಸಂಬಂಧಿಸಿದ ಇಂಜಿನಿಯರ್ ಜೀವನ್ ಸಭೆಯಲ್ಲಿ ಹದಗೆಟ್ಟಿರುವ ರಸ್ತೆಯನ್ನು ಇದೇ ತಾ. 15ರಿಂದ ಸರಿಪಡಿಸಿಕೊಡಲಾಗುವದು ಎಂದು ಭರವಸೆ ನೀಡಿದರು.

ಒಂದು ಹಂತದಲ್ಲಿ ಈ ಯೋಜನೆಗಾಗಿ ರೂ. 50 ಕೋಟಿ ವ್ಯರ್ಥವೆಂದು ಸದಸ್ಯರು ಒಕ್ಕೊರಲಿನ ಆರೋಪದೊಂದಿಗೆ ಕೆಲಸ ಸ್ಥಗಿತಗೊಳಿಸಿ ತನಿಖೆ ನಡೆಸಲು ಆಗ್ರಹಿಸಿದಾಗ, ಮಧ್ಯೆ ಪ್ರವೇಶಿಸಿದ ಎ.ಸಿ. ದೇವಯ್ಯ, ಕೆ.ಎಸ್. ರಮೇಶ್, ನಂದಕುಮಾರ್ ಮೊದಲಾದವರು ಈಗಿನ ಪರಿಸ್ಥಿತಿಯಲ್ಲಿ ಯೋಜನೆ ತಡೆಹಿಡಿಯಲು ಅಸಾಧ್ಯವೆಂದು ನೆನಪಿಸಿದರು.

ಈ ವೇಳೆ ಕೆಲವರು ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಾರೆ ಎಂದು ಎಸ್‍ಡಿಪಿಐ ಸದಸ್ಯರ ವ್ಯಂಗ್ಯಮಾತು ಬಿಜೆಪಿ ಸಹಿತ ಆಡಳಿತ ಸದಸ್ಯರನ್ನು ಕೆರಳಿಸುವದ ರೊಂದಿಗೆ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಇದೇ ಹಂತದಲ್ಲಿ ಸದಸ್ಯ ಪೀಟರ್ ಮಾತನಾಡಿ, ತನ್ನ ವಾರ್ಡ್‍ನಲ್ಲಿ ಕೆಲಸ ಮಾಡದೆ ರೂ. 2.80 ಲಕ್ಷ ಹಣ ಪಾವತಿಸಲಾಗಿದೆ ಎಂಬ ಆರೋಪವು ಮತ್ತಷ್ಟು ಗೊಂದಲ ಸೃಷ್ಟಿಸಿತು.

ಸಭಾಧ್ಯಕ್ಷರು ದಾಖಲೆ ಪರಿಶೀಲನೆಗೆ ತರಿಸಿದಾಗ, ಅಂತಹ ಯಾವ ಪ್ರಸಂಗ ಸಂಭವಿಸದಿರುವದು ಖಾತರಿಯೊಂದಿಗೆ ಇಡೀ ಸದನವೇ ಪೀಟರ್ ಹಾಗೂ ಅಮೀನ್ ಮೊಹ್ಸಿನ್ ವಿರುದ್ಧ ತಿರುಗಿಬಿದ್ದು, ಸಭೆಯನ್ನು ತಪ್ಪುದಾರಿಗೆ ಎಳೆಯದಂತೆಯೂ, ಪ್ರಚಾರಕ್ಕಾಗಿ ಸಲ್ಲದ ಟೀಕೆ ಮಾಡದಂತೆಯೂ ತಿರುಗೇಟು ನೀಡಿದರು.

ಒಂದು ಹಂತದಲ್ಲಿ ಸದಸ್ಯ ಕೆ.ಎಂ. ಗಣೇಶ್, ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಉದ್ದೇಶಿಸಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ ಪ್ರಸಂಗವೂ ನಡೆಯಿತು. ಈ ವೇಳೆ ಸದಸ್ಯ ನಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ಅದು ಕಾಂಗ್ರೆಸ್ಸಿನ ಆಂತರಿಕ ವಿಷಯವೆಂದು ಅಧ್ಯಕ್ಷರನ್ನು ಸಮರ್ಥಿಸಿಕೊಂಡರು.

ಪರಸ್ಪರ ಟೀಕೆ, ಗೊಂದಲ, ಆರೋಪ, ಪ್ರತ್ಯಾರೋಪಗಳ ನಡುವೆ ಹಗಲು 11 ಗಂಟೆಯಿಂದ 5.30ರ ತನಕ ಜರುಗಿದ ಸಭೆಯಲ್ಲಿ ಸವಿತಾ ರಾಕೇಶ್, ಶ್ರೀಮತಿ ಬಂಗೇರ, ವೀಣಾಕ್ಷಿ, ತಜಸುಂ, ಶಿವಕುಮಾರಿ, ಲಕ್ಷ್ಮಿ, ಗಿಲ್ಬರ್ಟ್, ಜುಲೇಕಾಬಿ ಇವರುಗಳು ಚರ್ಚೆಯಲ್ಲಿ ಗಮನ ಸೆಳೆದರು. ಆಯುಕ್ತೆ ಶುಭ ಹಾಗೂ ಪ್ರಭಾರ ಲೆಕ್ಕಾಧಿಕಾರಿ ತಾಹಿರ್ ಮೊದಲಾದವರು ಸದಸ್ಯರ ಸಂಶಯಗಳಿಗೆ ಪ್ರತ್ಯುತ್ತರ ನೀಡಿದರು.

ಒಟ್ಟಿನಲ್ಲಿ ಇಂದಿನ ಸಭೆ ಆರಂಭದಲ್ಲೇ ಕೋಲಾಹಲದೊಂದಿಗೆ ಕೊನೆ ಕ್ಷಣದವರೆಗೂ ಟೀಕೆಯೊಂದಿಗೆ ಸಾಗಿತ್ತು.

ತೆರಿಗೆ ಕಟ್ಟಲ್ವಾ ???

ತಮ್ಮ ವಾರ್ಡನ್ನು ಕಡೆಗಣಿಸಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಉಪಾಧ್ಯಕೆÀ್ಷ ಹಾಗೂ ಸದಸೆÀ್ಯ ಲೀಲಾ ಶೇಷಮ್ಮ, ವೇದಿಕೆ ಎದುರು ಬಂದು ಕಾಮಗಾರಿಗಳು ಅಪೂರ್ಣ ಗೊಂಡಿರುವ ಬಗ್ಗೆ ಮೊಬೈಲ್‍ನಲ್ಲಿ ಫೋಟೋಗಳನ್ನು ಪ್ರದರ್ಶಿಸಿದರು. ಕಾವೇರಿ ಲೇಜೌಟ್‍ನ ಜನರು ತೆರಿಗೆ ಪಾವತಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು. ಮುಂದಿನ 15 ದಿನಗಳ ಒಳಗೆ ತಮ್ಮ ವಾರ್ಡ್‍ನ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ನಗರಸಭೆಯ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಜೈಲಿಗೆ ಹೋಗಲು ಸಿದ್ಧರಾಗಿ!

ಯುಜಿಡಿ ಯೋಜನೆಯ ಒಳಚರಂಡಿ ವ್ಯವಸ್ಥೆಯಿಂದಾಗಿ ನಗರದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ವಿಷಯ ಪ್ರಸ್ತಾಪವಾಗಿ, ರಸ್ತೆಗಳಿಗೆ ಯಾವದೇ ಹಾನಿಯಾಗದಂತೆ ಉಳಿದ ಕಾಮಗಾರಿಯನ್ನು ಮತ್ತು ಈ ಯೋಜನೆಗೆ ಅಗತ್ಯವಿರುವ ರೀ ಸೈಕ್ಲಿಂಗ್ ಪ್ಲಾಂಟ್‍ಗೆ ಅಗತ್ಯವಿರುವ ಜಮೀನನ್ನು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿದರು.

ನಗರದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದಸರಾ ಮುಗಿದರು ರಸ್ತೆ ದುರಸ್ತಿ ಆರಂಭ ಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ಹೆಚ್.ಎಂ. ನಂದ ಕುಮಾರ್, ಯುಜಿಡಿ ಯೋಜನೆಯ ಪೈಪ್ ಅಳವಡಿಕೆ ಕಾಮಗಾರಿ ಪೂರ್ಣ ಗೊಳ್ಳದೆ ರಸ್ತೆ ಡಾಮರೀಕರಣ ಅಸಾಧ್ಯ ವಾಗಿದೆಯೆಂದು ಸಮಜಾಯಿಷಿಕೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿಜೆಪಿ ಸದಸ್ಯರು ರೀ ಸೈಕ್ಲಿಂಗ್ ಪ್ಲಾಂಟಿಗೆ ಅಗತ್ಯವಿರುವ ಜಮೀನನ್ನು 9 ಪ್ರದೇಶಗಳಲ್ಲಿ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಪ್ಲಾಂಟ್ ಸಿದ್ಧಗೊಳ್ಳದೆ ಉಳಿದ ಕಾಮಗಾರಿ ಯನ್ನು ಆರಂಭಿಸುವದು ಬೇಡವೆಂದು ಸದಸ್ಯ ಉಣ್ಣಿ ಕೃಷ್ಣ ಆಗ್ರಹಿಸಿದರು. ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಗುÀಡ್ಡಗಾಡು ಪ್ರದೇಶವಾಗಿರುವ ಮಡಿಕೆÉೀರಿಗೆ ಇದು ಸರಿಹೊಂದದ ಕಾರಣ ಯೋಜನೆಯನ್ನೆ ಕೈಬಿಡುವಂತೆ ಸರ್ವ ಸದಸ್ಯರು ನಿರ್ಣಯ ಕೈಗೊಳ್ಳೋಣ ವೆಂದು ಸಲಹೆ ನೀಡಿದರು. ಈ ಸಂದರ್ಭ ಮಾತನಾಡಿದ ಪೌರಾಯುಕೆÀ್ತ ಬಿ. ಶುಭ, ಈ ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ತಮಿಳುನಾಡಿನ ಸ್ಥಳೀಯ ಸಂಸ್ಥೆಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಪ್ರಕರಣವನ್ನು ಎದುರಿಸುತ್ತಿವೆ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಅಮಿನ್ ಮೊಹಿಸಿನ್, ಯುಜಿಡಿ ಯೋಜನೆಯ ಒಳಚರಂಡಿ ಕಾಮಗಾರಿಯಿಂದ ನಗರದ ಜನತೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದು, ಯೋಜನೆಯನ್ನು ವಿರೋಧಿಸಿ ನಗರದ ಜನತೆಯ ಒಳಿತಿಗಾಗಿ ಅಧ್ಯಕ್ಷರು ಜೈಲು ಶಿಕ್ಷೆ ಅನುಭವಿಸಲು ಸಿದ್ಧರಾಗಬೇಕೆಂದು ತಿಳಿಸಿದರು.

ಸದಸ್ಯ ಕೆ.ಎಂ.ಗಣೇಶ್ ಕೂಡ, ಜನರಿಗಾಗಿ ಜೈಲು ಶಿಕ್ಷೆಯಾದರು ತೊಂದರೆ ಇಲ್ಲ. ಯುಜಿಡಿ ಕಾಮಗಾರಿ ಯನ್ನು ಸ್ಥಗಿತಗೊಳಿ ಸೋಣವೆಂದು ಸಲಹೆ ನೀಡಿದರು. ಕಾಂಗ್ರೆಸ್ ಸದಸ್ಯ ನಂದ ಕುಮಾರ್ ಹಾಗೂ ಬಿಜೆಪಿ ಸದಸ್ಯರು, ಈ ಹಿಂದಿನ ಆಡಳಿತ ಮಂಡಳಿ ಯುಜಿಡಿಗೆ ಅನುಮೋದನೆ ನೀಡಿದ್ದು, ಈ ಕಾಮಗಾರಿಯನ್ನು ಪÀÇರ್ಣ ಗೊಳಿಸಲೇ ಬೇಕಾಗಿದೆ. ಕಾಮಗಾರಿ ಸಂದರ್ಭ ರಸ್ತೆಗೆ ಹಾನಿಯಾಗದಂತೆ ಕ್ರಮಕೈಗೊಳ್ಳ ಬೇಕಷ್ಟೆ ಎಂದು ತಿಳಿಸಿದರು. ಅಲ್ಲದೆ, ರೀ ಸೈಕ್ಲಿಂಗ್ ಪ್ಲಾಂಟ್ ಜಮೀನನ್ನು ಗುರುತಿಸುವ ಕಾರ್ಯಕ್ಕೆ ಕಂದಾಯ ಅಧಿಕಾರಿಯನ್ನು ನಿಯೋಜಿಸುವಂತೆ ಸಲಹೆ ನೀಡಿದರು. ಮುಂದಿನ 10 ದಿನಗಳ ಒಳಗೆ ಜಾಗ ಗುರುತಿಸುವಂತೆ ಸಭೆ ನಿರ್ಣಯ ಕೈಗೊಂಡಿತು.