ಮಡಿಕೇರಿ, ನ. 4: ತೀರಾ ಹಿಂದುಳಿದಿರುವ ನಾಪೋಕ್ಲು ಸಮೀಪದ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ ಎಂದು ಆರೋಪಿಸಿರುವ ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ನಾಗರಿಕ ಹಿತರಕ್ಷಣಾ ಸಮಿತಿ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ತಾ. 6ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷೆ ಟಿ.ವಿ.ಭವಾನಿ ಹಾಗೂ ಪ್ರಧಾನ ಕಾರ್ಯದರ್ಶಿ ಬಶೀರ್ ಆಲಿ, ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೂ ಚಿಂತನೆ ನಡೆಸಿದ್ದಾರೆ ಎಂದರು. ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ಗ್ರಾಮಗಳು ರಸ್ತೆ, ಚರಂಡಿ, ಬೀದಿ ದೀಪ, ಅಂಗನವಾಡಿ, ಶೌಚಾಲಯದ ಕೊರತೆಯನ್ನು ಎದುರಿಸುತ್ತಿವೆ. ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಕಾವೇರಿ ನದಿ ದಂಡೆಯಲ್ಲಿ ಸುರಿಯುತ್ತಿರುವ ಬೆಳವಣಿಗೆ ಕಂಡು ಬಂದಿದೆ. ನದಿ ನೀರು ಕಲುಷಿತ ಗೊಂಡು ನಾಡಿನಲ್ಲಿ ರೋಗರುಜಿನಗಳು ಹರಡುತ್ತಿದ್ದು, ಕುಡಿಯುವ ನೀರಿಗೂ ಬರ ಬಂದಿದೆ. ಈ ಎಲ್ಲಾ ಸಮಸ್ಯೆಗಳ ಕುರಿತು ಕಳೆದ 5 ವರ್ಷಗಳಿಂದ ಶಾಸಕರು, ಸಂಸದರು, ಜಿ.ಪಂ., ತಾ.ಪಂ., ಗ್ರಾ.ಪಂ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ, ಅಧಿಕಾರಿಗಳಾಗಲಿ, ಜನಪ್ರತಿನಿಧಿ ಗಳಾಗಲಿ ಯಾವದೇ ರೀತಿಯಲ್ಲಿ ಸ್ಪಂದಿಸಿಲ್ಲ. ಇತ್ತೀಚೆಗೆ ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಲ್ಲದೆ, ಈ ಭಾಗದ ಜನಪ್ರತಿನಿಧಿಗಳನ್ನು ಗ್ರಾಮಸ್ಥರು ಸಭೆಗೆ ಆಹ್ವಾನಿಸಿದ್ದರೂ, ಅವರು ಬಾರದೇ ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾ. 6 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವದಾಗಿ ಪ್ರಮುಖರು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಎ. ಹ್ಯಾರಿಸ್, ಖಜಾಂಚಿ ಮೊಹಮ್ಮದ್, ಸದಸ್ಯರಾದ ಜೈನುಲ್ ಅಬೀದ್ ಹಾಗೂ ಟಿ.ಎಸ್. ಚಿಂತನ್ ಹಾಜರಿದ್ದರು.