ಮಡಿಕೇರಿ, ನ. 4: ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ “ಕಲಾಶ್ರೀ ಆಯ್ಕೆ ಶಿಬಿರ” ನಡೆಯಿತು.

ಕಾರ್ಯಕ್ರಮಕ್ಕೆ ಭಾರತಿ ರಮೇಶ್ ಚಾಲನೆ ನೀಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಹೆಚ್.ಐ. ಮಮ್ತಾಜ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ಈ ಆಯ್ಕೆ ಶಿಬಿರದಲ್ಲಿ ಜಿಲ್ಲೆಯ ಮೂರು ತಾಲೂಕುಗಳಿಂದ ತಾಲೂಕು ಮಟ್ಟದ “ಕಲಾಶ್ರೀ ಆಯ್ಕೆ ಶಿಬಿರ”ದಲ್ಲಿ ಭಾಗವಹಿಸಿ 4 ಕ್ಷೇತ್ರಗಳಲ್ಲಿ ಪ್ರತೀ ಕ್ಷೇತ್ರದಿಂದ 2 ಮಕ್ಕಳಂತೆ ಒಟ್ಟು 24 ಮಕ್ಕಳು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಮಟ್ಟದಿಂದ ವಿವಿಧ ಕ್ಷೇತ್ರಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದವರನ್ನು ರಾಜ್ಯ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮಮ್ತಾಜ್ ಮಾಹಿತಿ ನೀಡಿದರು.

ವಿಜ್ಞಾನದಲ್ಲಿ ನೂತನ ಅವಿಷ್ಕಾರ ಮಾದರಿ ಪ್ರದರ್ಶನದಲ್ಲಿ ಭಾರತೀಯ ವಿದ್ಯಾಭವನದ ಮಾಸ್ಟರ್ ಕೆ.ಟಿ. ಮುದ್ದಯ್ಯ ಪ್ರಥಮ ಸ್ಥಾನ ಹಾಗೂ ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಶಾಲೆಯ ಮಾಸ್ಟರ್ ವಿಹಾನ್ ಕುಶಾಲಪ್ಪ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಸೃಜನಾತ್ಮಕ ಬರವಣಿಗೆಯಲ್ಲಿ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆಯ ಎಂ.ಯು. ಶ್ರಾವಣಿ ಪ್ರಥಮ ಸ್ಥಾನ ಹಾಗೂ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಪಿ.ಆರ್. ತಾನ್ಯಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಮೂರ್ನಾಡು, ಜ್ಞಾನ ಜ್ಯೋತಿ ಶಾಲೆಯ ಬಿ.ಎಸ್. ಶ್ರೀಲಕ್ಷ್ಮಿ ಪ್ರಥಮ ಸ್ಥಾನ ಹಾಗೂ ಸೋಮವಾರಪೇಟೆ ಸಾಂದೀಪನಿ ಆಂಗ್ಲ ಮಾದ್ಯಮ ಶಾಲೆಯ ಸಿ.ಪಿ. ಶ್ರೀಲಕ್ಷ್ಮಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸೃಜನಾತ್ಮಕ ಕಲೆಯಲ್ಲಿ ಮಡಿಕೇರಿ ಭಾರತೀಯ ವಿದ್ಯಾಭವನದ ಮಾಸ್ಟರ್ ಪಿ.ಆರ್. ಆರ್ಯ ಪ್ರಥಮ ಸ್ಥಾನ ಹಾಗೂ ಮಡಿಕೇರಿ ಭಾರತೀಯ ವಿದ್ಯಾಭವನದ ಪಿ.ಎನ್. ಮೋಕ್ಷ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಸಾವಿತ್ರಿ, ಪ್ರಸನ್ನ ಕುಮಾರ್, ಭರತ್, ಭಾರತಿ ರಮೇಶ್, ದಮಯಂತಿ, ಮಂಜುಳ, ಇಂದ್ರಾಣಿ, ಸತೀಶ್ ಕುಮಾರ್ ಭಾಗವಹಿಸಿದ್ದರು.

ಪ್ರಥಮ ದರ್ಜೆ ಸಹಾಯಕಿ ಸತ್ಯಭಾಮ ನಿರೂಪಿಸಿದರೆ, ಜಿಲ್ಲಾ ಬಾಲ ಭವನ ಕಚೇರಿ ಸಹಾಯಕ ಕೆ.ಪಿ. ಸಜಿತ್ ವಂದಿಸಿದರು.