ಗೋಣಿಕೊಪ್ಪ, ನ. 3: ರಾಜ್ಯ ಸರಕಾರದಿಂದ ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಅಚರಣೆಗೆ ತಡೆಯಾಜ್ಷೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಯುನಟೈಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಿನ್ನೆ ಜಸ್ಟೀಸ್ ಹೆಚ್.ಜಿ ರಮೇಶ್ ಮತ್ತು ದಿನೇಶ್ ಅವರ ದ್ವಿಪೀಠದಲ್ಲಿ ನಡೆಯಿತು. ಮುಂದಿನ ವಿಚಾರಣೆಯನ್ನು ತಾ.7ರ ಮಂಗಳವಾರಕ್ಕೆ ಮುಂದೂಡಲಾಗಿದೆ.

ಸುಮಾರು 50 ನಿಮಿಷಗಳ ಕಾಲ ವಾದವನ್ನು ಮಂಡಿಸಿದ ಅರ್ಜಿದಾರರ ಪರ ವಕೀಲರು ನ್ಯಾಯಾಲಯವು ಚರಿತ್ರೆಯ ಸತ್ಯವನ್ನು ಪರಿಗಣಿಸಬೇಕಾಗಿದೆ. ಟಿಪ್ಪು ಕೊಡಗು ಹಾಗೂ ಮಂಗಳೂರಿನಲ್ಲಿ ನಡೆಸಿದಂತಹ ಬಲವಂತದ ಮತಾಂತರ ಹಾಗೂ ನರಮೇದಗಳು ಇತಿಹಾಸದ ಕರಾಳ ಅಧ್ಯಾಯವಾಗಿದೆ.

(ಮೊದಲ ಪುಟದಿಂದ) ಇತಿಹಾಸವನ್ನು ಗಣನೆಗೆ ತೆಗೆದುಕೊಂಡಾಗ 200 ವರ್ಷಗಳು ಕೇವಲ ನಾಲ್ಕು ತಲೆಮಾರಿನಷ್ಟೆ ಅಲ್ಪ ಅವಧಿಯಾಗಿದೆ. 200 ವರ್ಷಗಳ ಹಿಂದಿನ ನೋವುಗಳು ಇಂದಿನ ತಲೆಮಾರಿನವರನ್ನು ಬಾಧಿಸುವದರಲ್ಲಿ ಅರ್ಥವಿದೆ. ನ್ಯಾಯವನ್ನು ಇತಿಹಾಸವನ್ನು ಕೇವಲ ಕಾನೂನಿಗೆ ಸೀಮಿತಗೊಳಿಸದೆ, ಟಿಪ್ಪುವಿನಿಂದ ನೋವನ್ನು ಅನುಭವಿಸಿರುವವರ ಕೂಗಿಗೆ ಸ್ಪಂದಿಸಬೇಕಾಗಿದೆ. ಇತಿಹಾಸದಲ್ಲಿ ಅರ್ಜಿದಾರರ ತವರು ಜಿಲ್ಲೆಯು ಎಂದಿಗೂ ಟಿಪ್ಪು ಸುಲ್ತಾನನ ಅಡಳಿತ ಪ್ರಾಂತ್ಯವಾಗಿರಲಿಲ್ಲ; ಸರಕಾರ ಟಿಪ್ಪು ಜಯಂತಿಯನ್ನು ಕೊಡಗು ಮತ್ತು ಮಂಗಳೂರು ಜಿಲ್ಲೆಗಳಿಗೆ ಬಲವಂತವಾಗಿ ಹೇರಬಾರದು ಎಂದು ವಾದಿಸಿದರು.

ಟಿಪ್ಪು ಜಯಂತಿ ಅಚರಣೆಗೆ ಬಳಸುತ್ತಿರುವ ಸಾರ್ವಜನಿಕ ನಿಧಿಯ ಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರ ವಾದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ಅವಕಾಶ ಕೋರಿದ ಸರಕಾರದ ಪರ ವಕೀಲರ ಮನವಿಯನ್ನು ಪುರಸ್ಕರಿಸಿ ಪ್ರಕರಣವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ಪರವಾಗಿ ವಕೀಲ ಪವನ ಚಂದ್ರ ಶೆಟ್ಟಿ ಹಾಗೂ ಹಿರಿಯ ವಕೀಲ ರಘುಪತಿ ವಾದವನ್ನು ಮಂಡಿಸಿದರು.