ಮಡಿಕೇರಿ, ನ. 4 : ಕುಶಾಲನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಬಗ್ಗೆ ನಿರಂತರ ವರದಿ ಮಾಡಿದ್ದಕ್ಕಾಗಿ ಠಾಣಾಧಿಕಾರಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಕುಶಾಲನಗರ ಪತ್ರಕರ್ತ ಕೆ.ಬಿ. ಷಂಶುದ್ದೀನ್, ಪ್ರಥಮ ವರ್ತಮಾನ ವರದಿಯಿಂದ ತನ್ನ ಹೆಸರನ್ನು ಕೈಬಿಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳುಗಾರಿಕೆ ನಡೆಸುತ್ತಿದ್ದವರನ್ನು ಬ್ಲಾಕ್‍ಮೇಲ್ ಮಾಡಿ ಹಣಕ್ಕಾಗಿ ಒತ್ತಾಯಿಸಿದ್ದಾಗಿ ಆರೋಪ ಹೊರಿಸಿ ಮೊದಲ ಆರೋಪಿಯನ್ನಾಗಿ ತನ್ನನ್ನು ಗುರುತಿಸಲಾಗಿದೆ. ಅಕ್ಟೋಬರ್ 26 ರಂದು ಈ ಪ್ರಕರಣ ನಡೆದಿದೆಯೆಂದು ಉಲ್ಲೇಖಿಸಲಾಗಿದ್ದು, ಆ ದಿನ ತಾನು ತಮಿಳುನಾಡಿನಲ್ಲಿ ಸ್ನೇಹಿತನ ವಿವಾಹ ಸಮಾರಂಭದÀಲ್ಲಿ ಭಾಗಿಯಾಗಿದ್ದೆ ಎಂದು ಸ್ಪಷ್ಟಪಡಿಸಿದರು.

ಮರಳು ದಂಧೆ ಮತ್ತು ಠಾಣಾಧಿಕಾರಿ ಕಾರ್ಯವೈಖರಿ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಿದ್ದಕ್ಕಾಗಿ ದ್ವೇಷವನ್ನು ಸಾಧಿಸುವ ಉದ್ದೇಶದಿಂದ ತನ್ನ ವಿರುದ್ಧ ವಿನಾಕಾರಣ ದೂರು ದಾಖಲಿಸಿಕೊಳ್ಳಲಾಗಿದೆ. ತಾನು ತಮಿಳುನಾಡಿನಲ್ಲಿ ಇದ್ದ ಬಗ್ಗೆ ಸಾಕ್ಷ್ಯ ಸಹಿತ ಮೇಲಧಿಕಾರಿಗಳಿಗೆ ದೂರು ನೀಡಿದ್ದು, ಗೊಂದಲವನ್ನು ಸರಿಪಡಿಸುವ ಭರವಸೆ ದೊರೆತ್ತಿದೆ. ಈ ಹಿನ್ನೆಲೆಯಲ್ಲಿ ಸಧ್ಯಕ್ಕೆ ಧರಣಿ ಸತ್ಯಾಗ್ರಹ ನಡೆಸುವ ನಿರ್ಧಾರದಿಂದ ಹಿಂದೆ ಸರಿದಿದ್ದು, ಮುಂದಿನ ಒಂದು ತಿಂಗಳ ಒಳಗೆ ಆರೋಪ ಪಟ್ಟಿಯಿಂದ ಹೆಸರನ್ನು ಕೈಬಿಡದಿದ್ದಲ್ಲಿ ಡಿವೈಎಸ್‍ಪಿ ಕಛೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಮತ್ತೊಬ್ಬ ಪತ್ರಕರ್ತ ಕೆ.ಆರ್.ಪ್ರಭುದೇವ್ ಮಾತನಾಡಿ, ಪತ್ರಕರ್ತರ ನೈತಿಕ ಬಲ ಕುಗ್ಗಿಸುವ ಯತ್ನವನ್ನು ಠಾಣಾಧಿಕಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ ಅವರು, ನಿರಪರಾಧಿಗಳಿಗೆ ಶಿಕ್ಷೆ ಆಗುವದನ್ನು ಉನ್ನತ ಅಧಿಕಾರಿಗಳು ತಪ್ಪಿಸಬೇಕೆಂದು ಮನವಿ ಮಾಡಿದರು. ಅಧಿಕಾರಿಗಳಿಂದ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಗೃಹ ಸಚಿವರನ್ನು ಭೇಟಿಯಾಗುವದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಹೆಚ್.ಸಿ. ಜಯಪ್ರಕಾಶ್ ಉಪಸ್ಥಿತರಿದ್ದರು.