ಗೋಣಿಕೊಪ್ಪಲು, ನ. 3: ಇಲ್ಲಿನ ಆಟೋ ಮಾಲೀಕರ ಹಾಗೂ ಚಾಲಕರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಹಾಗೂ ಆಟೋಗಳ ಮೆರವಣಿಗೆ ಕನ್ನಡಾಭಿಮಾನಕ್ಕೆ ಸಾಕ್ಷಿಯಾಯಿತು. ನೂರಾರು ಆಟೋ ಚಾಲಕರು ಆಟೋಗಳನ್ನು ಸಿಂಗರಿಸಿ ಕನ್ನಡ ಬಾವುಟದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಕಾರ್ಯಕ್ರಮಕ್ಕೆ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕನ್ನಡ ಧ್ವಜಾರೋಹಣವನ್ನು ಕೇಶವ ಕಾಮತ್ ಹಾಗೂ ಡಾ. ಚಂದ್ರಶೇಖರ್ ಮಾಡಿದರು. ಶಾಸಕ ಕೆ.ಜಿ. ಬೋಪಯ್ಯ ಪಾಲ್ಗೊಂಡಿದ್ದರು. ಬಸ್ ನಿಲ್ದಾಣ ಹಾಗೂ ಆಟೋ ನಿಲ್ದಾಣ ಸಂಪೂರ್ಣವಾಗಿ ಕನ್ನಡ ಬಾವುಟದಿಂದ ಕಂಗೊಳಿಸುತ್ತಿತ್ತು. ವಿಶೇಷವಾಗಿ ಆಟೋ ನಿಲ್ದಾಣಕ್ಕೆ ಶೃಂಗಾರಗೊಂಡ ಆಕರ್ಷಕವಾದ ದ್ವಾರ ಗಮನ ಸೆಳೆಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಆರಂಭಗೊಂಡ ಮೆರವಣಿಗೆ ಆಟೋ ನಿಲ್ದಾಣದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಕನ್ನಡಾಂಬೆಯ ತೇರು ನೋಡುಗರ ಗಮನ ಸೆಳೆಯಿತು.

ಕನ್ನಡಾಂಬೆಯ ತೇರನ್ನು ಶೃಂಗಾರಗೊಂಡ ಆಟೋಗಳು ಶಿಸ್ತುಬದ್ದವಾಗಿ ಹಿಂಬಾಲಿಸಿದವು. ದೈನಂದಿನ ದುಡಿಮೆಯನ್ನು ಬದಿಗೊತ್ತಿ ಆಟೋ ಚಾಲಕರು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತೊಡಗಿಸಿಕೊಂಡರು. ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಪರ ಘೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳು ಕನ್ನಡಾಂಬೆಯ ವೇಷಧಾರಿಗಳಾಗಿ ಮೆರವಣಿಗೆ ಯೊಂದಿಗೆ ಸಾಗಿದರು.

ಭಗತ್ ಪುರುಷರ ಸ್ವಸಹಾಯ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡ ಕನ್ನಡಾಭಿಮಾನಿಗಳಿಗೆ ಉಚಿತವಾಗಿ ಮಜ್ಜಿಗೆ ವಿತರಿಸಿದರು. ಮೆರವಣಿಯಲ್ಲಿ ಪಾಲ್ಗೊಂಡವರ ಸುರಕ್ಷತೆಗಾಗಿ ಆಯೋಜಕರು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಮಧ್ಯಾಹ್ನ ಸಂಘದ ವತಿಯಿಂದ ಸಾರ್ವಜನಿಕರಿಗೆ ಉಚಿತ ಅನ್ನಸಂತರ್ಪಣೆಯಲ್ಲಿ 2 ಸಾವಿರಕ್ಕೂ ಅಧಿಕ ಜನರು ಅನ್ನದಾನ ಸ್ವೀಕರಿಸಿದರು.

ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಸಿ.ಕೆ ಬೋಪಣ್ಣ, ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ, ಗ್ರಾ.ಪಂ. ಹಾಗೂ ತಾ.ಪಂ. ಸದಸ್ಯರು ಇದ್ದರು.