ಮಡಿಕೇರಿ, ನ. 3: ನಗರದ ಕಾವೇರಿ ಕಲಾಕ್ಷೇತ್ರ ಕಟ್ಟಡವನ್ನು ರೂ. 84 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲು ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡಾಗ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸಹಿತ ಪಕ್ಷಾತೀತವಾಗಿ ಸದಸ್ಯರೆಲ್ಲರು ಆಕ್ಷೇಪಿಸುವದರೊಂದಿಗೆ ಶಿಥಿಲ ಗೊಂಡಿರುವ ಕಟ್ಟಡ ನೆಲಸಮಗೊಳಿಸಿ ಸುಸಜ್ಜಿತ ರೀತಿಯಲ್ಲಿ ಆಧುನಿಕ ಸೌಲಭ್ಯದೊಂದಿಗೆ ನೂತನ ಕಲಾಭವನ ನಿರ್ಮಾಣಕ್ಕೆ ನಿರ್ಣಯ ಕೈಗೊಂಡರು.ಅನೇಕ ವರ್ಷಗಳಿಂದ ಈ ಹಳೆಯ ಕಟ್ಟಡಕ್ಕಾಗಿ ಸಾಕಷ್ಟು ಹಣ ವ್ಯಯಿಸಿದ್ದು, ರೂ. 84 ಲಕ್ಷ ಮೊತ್ತವನ್ನು ಮತ್ತೆ ವ್ಯರ್ಥಗೊಳಿಸುವ ಬದಲಿಗೆ ನೂತನ ಭವನ ನಿರ್ಮಿಸಲು ಸರ್ವ ಸದಸ್ಯರು ಬೆಂಬಲ ಘೋಷಿಸಿದರು. ಈ ಸಂಬಂಧ ವಿಷಯ ಪ್ರಸ್ತಾಪಿಸಿದ ಆಯುಕ್ತೆ ಶುಭ ಅವರ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು.

ಅಲ್ಲದೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ತ್ಯಾಜ್ಯವನ್ನು ನಗರಸಭೆಯಿಂದ ನಿತ್ಯ ವಿಲೇವಾರಿ ಮಾಡುವ ಪ್ರಸ್ತಾವನೆಯನ್ನು ಕೂಡ ಅಸಾಧ್ಯವೆಂದು ಸಭೆ ತಿರಸ್ಕರಿಸಿದರು. ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸುವದು, ಕೋಳಿ, ಮೀನು ಮುಂತಾದ ಮಾಂಸ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡುವದಕ್ಕೆ ತೀವ್ರ ಆಕ್ಷೇಪದೊಂದಿಗೆ ನಿರ್ಣಯ ಅಂಗೀಕರಿಸಲಾಯಿತು.

ನಗರಸಭೆಯ ಕಾಮಗಾರಿ ಸ್ಥಾಯಿ ಸಮಿತಿ ಸಭೆಯಲ್ಲಿ ಅಭಿವೃದ್ಧಿ ಸಂಬಂಧ ಯೋಜನೆ ರೂಪಿಸಿ ಸಾಮಾನ್ಯ ಸಭೆಯ ಅನುಮೋದನೆ ಯೊಂದಿಗೆ ಕೆಲಸ ನಿರ್ವಹಿಸುವದು, ಸಣ್ಣ ಪುಟ್ಟ ತುರ್ತು ಕೆಲಸಗಳನ್ನು ಸ್ಥಾಯಿ ಸಮಿತಿ ತೀರ್ಮಾನದೊಂದಿಗೆ ಮುಂದುವರಿಸುವದು ಮುಂತಾದ ಬಗ್ಗೆ ಬಿಸಿ ಚರ್ಚೆಯಾಯಿತು.

(ಮೊದಲ ಪುಟದಿಂದ) ಅನಧಿಕೃತ ಅಥವಾ ನಿಯಮಾ ಬಾಹಿರ ಮಳಿಗೆಗಳನ್ನು ಮತ್ತು ಪರವಾನಗಿ ಪಡೆಯದ ವ್ಯಾಪರೋದ್ಯಮಗಳನ್ನು ತೆರವುಗೊಳಿಸಲು ಪಕ್ಷಪಾತ ಅಥವಾ ಮತೀಯ ಭೇದಬಾವ ಮಾಡದಂತೆ ನಿರ್ಧರಿಸಲಾಯಿತು. ಮಂಗಳೂರು ರಸ್ತೆಯ ಹೊಟೇಲ್‍ವೊಂದರ ತೆರವು ಗೊಳಿಸದ ಹೊರತು ಮಹದೇವಪೇಟೆಯಲ್ಲಿ ಉದ್ದೇಶ ಪೂರ್ವಕ ಎಲೆಕ್ಟ್ರಾನಿಕ್ ಮಳಿಗೆಯನ್ನು ಗುರಿ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾದಿತು ಎಂದು ಬಿಜೆಪಿ ಸದಸ್ಯರ ಸಹಿತ ಹೆಚ್.ಎಂ. ನಂದಕುಮಾರ್ ಆಯುಕ್ತರಿಗೆ ತಾಕೀತು ಮಾಡಿದರು.

ನಗರಸಭೆ ಶಾಲೆಗಳ ಗೌರವ ಶಿಕ್ಷಕರಿಗೆ ಮಾನವೀಯ ನೆಲೆಯಲ್ಲಿ ವೇತನ ನೀಡವದು, ಬಿ.ಎಸ್.ಎನ್.ಎಲ್. ನಿಂದ ಕೇಬಲ್ ಅಳವಡಿಸಲು ಅವಕಾಶ ಕಲ್ಪಿಸುವದು, ಆಜಾದ್‍ನಗರ ದಲ್ಲಿ ಖಾಸಗಿ ವ್ಯಕ್ತಿಯೊಬ್ಬರ 30 ಸೆಂಟ್ ಜಾಗದಲ್ಲಿ ನಗರಸಭೆ ರಸ್ತೆ ನಿರ್ಮಿಸಿರುವ ಕಾರಣ ಪರ್ಯಾಯ ಜಾಗ ನೀಡಲು ನಿರ್ಣಯಿಸಲಾಯಿತು.

ನಗರದಲ್ಲಿ ಬೀದಿ ದೀಪಗಳನ್ನು ಕಲ್ಪಿಸಲು ವಿಶೇಷ ಎಲ್‍ಇಡಿ ಬಲ್ಬುಗಳನ್ನು ಖರೀದಿಸುವದು, ನೀರು, ಪೈಪ್‍ಲೇನ್ ಇನ್ನಿತರ ಹೊರಗುತ್ತಿಗೆ ಕೆಲಸÀಕ್ಕೆ ಟೆಂಡರ್ ನೀಡುವದು, ನಗರಸಭೆ ತಾತ್ಕಾಲಿಕ ಸಿಬ್ಬಂದಿಯಾಗಿದ್ದ ಅಶ್ವಿನಿ ಎಂಬವರಿಗೆ ತಡೆಹಿಡಿಯ ಲ್ಪಟ್ಟಿದ್ದ ವೇತನ ಪಾವತಿಸುವದು. ಪಟ್ಟಣದೊಳಗಿರುವ ಎಲ್ಲ ಗುಜರಿ ಅಂಗಡಿಗಳ ಸ್ಥಳಾಂತರಕ್ಕೆ ಸಭೆ ತೀಮಾನ ತೆಗೆದಿಕೊಂಡಿತು.

ನಗರಸಭೆಗೆ ಕಂದಾಯ, ವಿವಿಧ ತೆರಿಗೆ ಪಾವತಿಸುತ್ತಿರುವ ಮನೆ ಮಾಲೀಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮಾನವೀಯ ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಇಂದಿನ ಸಭೆ ನಿರ್ಧರಿಸಿತು.

ನಗರಸಭೆ ಅಭಿಯಂತರ ಅರುಣ್ ವರ್ಗಾವಣೆಗೊಂಡು ಎರಡು ತಿಂಗಳ ಹಿಂದೆ ಆದೇಶ ಬಂದಿದ್ದರೂ, ಅವರನ್ನು ತೆರವುಗೊಳಿಸದಿರುವದು, ಕಂದಾಯ ಇಲಾಖೆ ಉದ್ಯೋಗಿ ತಾಹಿತ ಅವರಿಗೆ ಲೆಕ್ಕಪತ್ರ ವಿಭಾಗದ ಹೇಳಿಕೆ ಬಗ್ಗೆಯು ಪ್ರಸ್ತಾಪಿಸಿದ ಚುಮ್ಮಿ ದೇವಯ್ಯ ಹಾಗೂ ಅಮಿನ್ ಅವರುಗಳ ಬಿಡುಗಡೆಗೆ ಬೇಡಿಕೆ ಇಟ್ಟರಾದರೂ, ಆಯುಕ್ತರು ಮತ್ತು ಆಡಳಿತ ಪ್ರಮುಖರು ಅಸಮ್ಮತಿ ವ್ಯಕ್ತಪಡಿಸಿದರು. ಹದಗೆಟ್ಟಿರುವ ರಸ್ತೆಗಳ ದುರಸ್ಥಿ, ಬೇಸಿಗೆಯಲ್ಲಿ ಎದುರಾಗಲಿರುವ ನೀರಿನ ಸಮಸ್ಯೆ, ನಗರಸಭಾ ಸಿಬ್ಬಂದಿ ಕೊರತೆ, ಅಶುಚಿತ್ವ, ಚರಂಡಿ ಅವ್ಯವಸ್ಥೆ ಮುಂತಾದ ವಿಷಯಗಳು ಸಭೆಯಲ್ಲಿ ಪ್ರತಿಧ್ವನಿಸಿತು.