*ಗೋಣಿಕೊಪ್ಪಲು, ನ. 4: ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದರೆ ಉತ್ತಮ ಶಿಕ್ಷಣ ಅಗತ್ಯ. ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಕಡೆಗೆ ಗಮನಹರಿಸಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದ ಸ್ವಾಮೀಜಿ ಹೇಳಿದರು.

ತಿತಿಮತಿ ಲ್ಯಾಂಪ್ಸ್ ಅಕಾಡೆಮಿ ವತಿಯಿಂದ ನೂತನವಾಗಿ ತೆರೆದಿರುವ ಶಾಲಾ ಸಮುಚ್ಚಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮಕ್ಕಳ ಪ್ರಗತಿಯತ್ತ ಗಮನಹರಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.

ದೇವರಪುರದ ಸೇಂಟ್ ಜೋಸೆಫ್ ಚರ್ಚ್ ಫಾದರ್ ಜ್ಯೋತಿಲಾಲ್ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಮೌಲ್ಯ ಶಿಕ್ಷಣದ ಅಗತ್ಯವಿದೆ. ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಇಂದಿನ ಸಂದರ್ಭದಲ್ಲಿ ಮಕ್ಕಳನ್ನು ತಿದ್ದಿ ತೀಡಬೇಕಾದರೆ ಮೌಲ್ಯ ಶಿಕ್ಷಣ ಮಾತ್ರ ಸಾಧ್ಯ ಎಂದು ತಿಳಿಸಿದರು.

ಪ್ರಾಂಶುಪಾಲ ತಮಲೀಕ್ ದಾರಿಮಿ, ನೆಲ್ಲಿಹುದಿಕೇರಿ ಮದರಸದ ಸಲೀಂ ಮಾತನಾಡಿದರು. ಡಿಡಿಪಿಐ ದೇವನಾಯಕ್, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಹೆಚ್.ಕೆ. ಪಾಂಡು, ಬಿಇಒ ಲೋಕೇಶ್, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಸುಮನ್ ಮೂಡಗದ್ದೆ, ಪಿ.ವಿ. ಶಬರೀಷ್ ವಿಕ್ರಮ್ ಹಾಜರಿದ್ದರು.