ಸೋಮವಾರಪೇಟೆ, ನ. 4: ತಾಲೂಕಿನ ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗಲಾಗಿದ್ದು, ಇದನ್ನು ಖಂಡಿಸಿ ತಾ. 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ.ಈ. ಸುರೇಶ್ ಎಚ್ಚರಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ವಸತಿ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ವಿಶ್ವನಾಥ್ ಅವರಿಗೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಇದೀಗ ಕರ್ತವ್ಯಕ್ಕೆ ಹಾಜರಾಗದಂತೆ ತಾಕೀತು ಮಾಡಲಾಗಿದೆ. ತಕ್ಷಣ ಇವರನ್ನು ಕರ್ತವ್ಯದಲ್ಲಿ ಮುಂದುವರೆಸದೇ ಹೋದಲ್ಲಿ ತಾ. 10 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಕೊಡ್ಲಿಪೇಟೆ ನಿವಾಸಿ ಎಂ.ಎನ್. ವಿಶ್ವನಾಥ್ ಆಲೂರು-ಸಿದ್ದಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಹಾಸನದ ಸೆಕ್ಯೂರಿಟಿ ಏಜೆನ್ಸಿಯೊಂದರ ಮೂಲಕ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೀಗ ಶಾಲೆಯ ಪ್ರಾಂಶುಪಾಲರು ಏಕಾಏಕಿ ಕೆಲಸಕ್ಕೆ ಬರಬಾರದೆಂದು ತಡೆಯೊಡ್ಡಿದ್ದಾರೆ. ಇದು ಖಂಡನೀಯ ಎಂದರು.

ವಸತಿ ನಿಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದ ಎಂ.ಎನ್. ವಿಶ್ವನಾಥ್ ಮಾತನಾಡಿ, ಶಾಲೆಯಲ್ಲಿನ ಕೆಲವು ಅಕ್ರಮಗಳ ಬಗ್ಗೆ ತನಗೆ ತಿಳಿದಿದ್ದು, ಕೆಲವೊಂದನ್ನು ಪ್ರಶ್ನಿಸಲು ಮುಂದಾಗು ತ್ತಿದ್ದುದ್ದಕ್ಕೆ ಶಾಲೆಯ ಪ್ರಾಂಶುಪಾಲರು ಹಾಗೂ ವಸತಿ ನಿಲಯದ ಮೇಲ್ವಿಚಾರಕ ಸೇರಿಕೊಂಡು ಕಿರುಕುಳ ನೀಡುತ್ತಿದ್ದರು.

ಅದನ್ನೂ ಪ್ರಶ್ನಿಸಲು ಮುಂದಾದ ತನ್ನನ್ನು ಸೆಕ್ಯೂರಿಟಿ ಏಜೆನ್ಸಿ ಮೂಲಕ ಕೆಲಸದಿಂದ ತೆಗೆದು ಹಾಕಿದ್ದಾರೆ. ಅದರ ಬೆನ್ನಲ್ಲೇ ತಾನು ಕುಟುಂಬದೊಂದಿಗೆ ವಾಸಿಸುತ್ತಿರುವ ವಸತಿಗೃಹದಿಂದ ಖಾಲಿ ಮಾಡುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ತನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಉಪಾಧ್ಯಕ್ಷ ಜಗದೀಶ್, ಸದಸ್ಯ ವಿಜಯ್‍ಕುಮಾರ್ ಉಪಸ್ಥಿತರಿದ್ದರು.