ಮಡಿಕೇರಿ, ನ. 4: ಸ್ವತಂತ್ರ ಭಾರದತ ಮೂರು ಸೇನೆಗಳ ಏಕಮೇವ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪ ಹಾಗೂ ಸೈನ್ಯದ 4ನೇ ಮುಖ್ಯಸ್ಥ (ಜನರಲ್) ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಇವರುಗಳ ಕಂಚಿನ ಪ್ರತಿಮೆಗಳನ್ನು ಪ್ರಸಕ್ತ ಭಾರತ ಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರು ಅನಾವರಣಗೊಳಿಸಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರವೇಶದ್ವಾರ ಬಳಿ ಸುಂದರ ಉದ್ಯಾನದೊಂದಿಗೆ ರಮಣೀಯ ಪರಿಸರದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಮಹಾನ್ ಸೇನಾನಿಗಳ ಪ್ರತಿಮೆಗಳನ್ನು ಅಕ್ಕಪಕ್ಕದಲ್ಲಿ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ನಿರ್ಮಿಸಿದ್ದು, ಸೇನಾ ಮುಖ್ಯಸ್ಥರೊಂದಿಗೆ ಕೊಡಂದೇರ ಕುಟುಂಬಸ್ಥರ ಸಹಿತ ಇತರ ಗಣ್ಯರು ಗೌರವ ನಮನ ಸಲ್ಲಿಸಿದರು.

ಕಾವೇರಿ ಕಾಲೇಜು ಆವರಣದಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯಲ್ಲಿ ಇಡೀ ಪ್ರದೇಶ ಸೇನಾ ಹತೋಟಿಯೊಂದಿಗೆ ಅತ್ಯಂತ ಶಿಸ್ತುಬದ್ಧ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿತು. ಇಡೀ ಕಾಲೇಜು ಆವರಣ ಮಾತ್ರವಲ್ಲದೆ ಗೋಣಿಕೊಪ್ಪಲು ಮುಖ್ಯ ರಸ್ತೆ ಸಹಿತ ಸೇವಾ ಮುಖ್ಯಸ್ಥರ ಆಗಮನ ಹಿನ್ನೆಲೆ ವಿಶೇಷ ಭದ್ರತೆ ಕೈಗೊಳ್ಳಲಾಗಿತ್ತು.

ಸೀಮಿತ ಆಹ್ವಾನಿತರ ಹೊರತಾಗಿ ಯಾರೊಬ್ಬರಿಗೂ ಕಾರ್ಯಕ್ರಮ ಸ್ಥಳ ಪ್ರವೇಶಿಸಿದಂತೆ ಕಣ್ಗಾವಲು ಇರಿಸಲಾಗಿತ್ತು. ಕಾರ್ಯಕ್ರಮ ಸಂಘಟಕರು ಹಾಗೂ ಬಂಧುಗಳ ಸಹಿತ ಕೊಡಂದೇರ ಕುಟುಂಬಸ್ಥರು, ನಿವೃತ್ತ ಸೈನಾಧಿಕಾರಿಗಳು, ಕಾವೇರಿ ವಿದ್ಯಾಸಂಸ್ಥೆಯ ಪ್ರಮುಖರು, ಜನಪ್ರತಿನಿಧಿಗಳಾದ ಕೆ.ಜಿ. ಬೋಪಯ್ಯ ಹಾಗೂ ವೀಣಾ ಅಚ್ಚಯ್ಯ ಮುಂತಾದವರು ಗಣ್ಯರೊಂದಿಗೆ ಕಾಣಿಸಿಕೊಂಡರು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬೋಧಕ ವೃಂದ, ವಿದ್ಯಾರ್ಥಿ ಸಮೂಹ ಸೇರಿದಂತೆ ಐದು ಸಾವಿರಕ್ಕೂ ಅಧಿಕ ಮಂದಿ ಈ ವೀರ ಸೇನಾನಿಗಳ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾದರು. ಮಾಧ್ಯಮ ಬಳಗಕ್ಕೂ ಪ್ರತ್ಯೇಕವಾಗಿ ವೇದಿಕೆಯಿಂದ ಅನತಿ ಅಂತರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಭಾಕಾರ್ಯಕ್ರಮ: ಸೇನಾ ಮುಖ್ಯಸ್ಥರ ಆಗಮನಕ್ಕೆ ಒಂದು ಗಂಟೆ ಮುಂಚಿತವಾಗಿ ತಯಾರಿಯೊಂದಿಗೆ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಸರ್ವರನ್ನು ಸ್ವಾಗತಿಸಿದರೆ, ಕಾವೇರಿ ಕಾಲೇಜು ವಿದ್ಯಾರ್ಥಿನಿಯರ ಬಳಗ ಪ್ರಾರ್ಥನೆ ನೆರವೇರಿಸಿತು. ಸೈನ್ಯಾಧಿಕಾರಿ ಮೇಜರ್ ವಿ.ಬಿ. ಪಾಂಡೆ ಆಂಗ್ಲೆ ಹಾಗೂ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನಿರೂಪಿಸಿದರೆ,

(ಮೊದಲ ಪುಟದಿಂದ) ಫೋರಂ ಸಂಚಾಲಕ ಬಿದ್ದಂಡ ನಂದಾ ನಂಜಪ್ಪ ಕನ್ನಡದಲ್ಲಿ ವಿಷಯ ಮುಟ್ಟಿಸಿದರು.

ಸೇನಾ ವಾದ್ಯದೊಂದಿಗೆ ಎನ್‍ಸಿಸಿ, ಸ್ಕೌಟ್ ಮತ್ತು ಗೈಡ್ಸ್ ಸಹಿತ ಸೈನಿಕ ದಳ ಸೇವಾ ಮುಖ್ಯಸ್ಥರ ಆಗಮನ ವೇಳೆ ಬೆಂಗಾವಲಾಗಿ ಸುತ್ತು ವರಿದಿತ್ತು. ಇತರ ಸೇನಾಧಿಕಾರಿಗಳು, ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸಜೋ ಹಾಗೂ ಪೊಲೀಸ್ ಅಧೀಕ್ಷಕ ಡಾ. ಪಿ. ರಾಜೇಂದ್ರ ಪ್ರಸಾದ್ ಇವರುಗಳು ಸ್ಥಳೀಯ ಗಣ್ಯರೊಂದಿಗೆ ಜನರಲ್ ಬಿಪಿನ್ ರಾವತ್ ಅವರನ್ನು ಬರಮಾಡಿಕೊಂಡರು.

ಪಾಲಿಬೆಟ್ಟ ಹೆಲಿಪ್ಯಾಡ್‍ಗೆ ಹಗಲು 10.30ಕ್ಕೆ ಸರಿಯಾಗಿ ಬಂದಿಳಿದ ಸೇನಾ ಮುಖ್ಯಸ್ಥರನ್ನು ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಪುಷ್ಪಗುಚ್ಛ ನೀಡಿ ಬರಮಾಡಿ ಕೊಂಡರು. ಅಲ್ಲಿಂದ ಕೆಲ ನಿಮಿಷ ಟಾಟಾ ಕಾಫಿ ಅತಿಥಿ ಗೃಹಕ್ಕೆ ಭೇಟಿಯೊಂದಿಗೆ ಶರವೇಗದಲ್ಲಿ ಗೋಣಿಕೊಪ್ಪಲುವಿಗೆ ರಸ್ತೆ ಮಾರ್ಗದಲ್ಲಿ ಸೇನಾ ವಾಹನ ಬೆಂಗಾವಲಿನಲ್ಲಿ ಪಯಣಿಸಿದರು.

ಅಭೂತಪೂರ್ವ ಸ್ವಾಗತ: ಕಾರ್ಯಕ್ರಮಕ್ಕೆ 11 ಗಂಟೆಗೆ 5 ನಿಮಿಷ ಮುಂಚಿತವಾಗಿ ತಲಪಿದ ಜನರಲ್ ಬಿಪಿನ್ ರಾವತ್ ಹಾಗೂ ಅವರೊಂದಿಗೆ ಬಂದಿದ್ದ ದಕ್ಷಿಣ ಭಾರತ ಸೇನಾ ಮುಖ್ಯಸ್ಥರನ್ನು ಕಾರ್ಯಕ್ರಮ ಸಂಘಟಕರು ಕೊಡಂದೇರ ಕುಟುಂಬದೊಂದಿಗೆ ಗೌರವ ಪೂರ್ವಕ ಬರಮಾಡಿ ಕೊಂಡರು. ಪ್ರೊ. ಇಟ್ಟೀರ ಬಿದ್ದಪ್ಪ ಕೊಡಗಿನ ವೀರ ಸೈನಿಕ ಪರಂಪರೆಯ ಸ್ಮರಣೆಯೊಂದಿಗೆ ಕುಲಮಾತೆ ಶ್ರೀ ಕಾವೇರಿ, ಇಗ್ಗುತ್ತಪ್ಪ ಸಹಿತ ದೇವಾನುದೇವತೆಗಳನ್ನು ಸ್ತುತಿಸಿ ಸೇನಾ ಮುಖ್ಯಸ್ಥರಿಗೆ ಶುಭ ಕೋರಿದರು.

ಕಾರ್ಯಕ್ರಮ ಪ್ರವೇಶ ದ್ವಾರದಲ್ಲಿ ಆಯೋಜಿಸಿದ್ದ ಕೊಡಗಿನ ಸಾಂಪ್ರದಾಯಿಕ ‘ನೆಲಕ್ಕಿ ಬೊಳಕ್’ಗೆ ಅತಿಥಿಗಣ್ಯರಾದಿಯಾಗಿ ಅಲ್ಲಿ ನೆರೆದಿದ್ದವರು ಅಕ್ಷತೆಯೊಂದಿಗೆ ಗುರು ಹಿರಿಯರನ್ನು, ಭರತ ಭೂಮಿಯ ರಣಾಂಗಣ ಕಲಿಗಳನ್ನು ನಮಿಸಿದರು.

ಪ್ರತಿಮೆ ಅನಾವರಣ: ಸಾಂಪ್ರದಾಯಿಕ ಸ್ವಾಗತದೊಂದಿಗೆ ಪುಳಕಗೊಂಡ ಹಸನ್ಮುಖಿ ರಾವತ್ ಅವರು, ಕುಶಲತೋಪುಗಳಿಂದಿಗೆ ಸೇನಾ ವಾದ್ಯ ಮೊಳಗುತ್ತಿದ್ದಂತೆ, ಭಾರತಾಂಬೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿ ಹೆಸರು ಚಿರಸ್ಥಾಯಿಗೊಳಿಸಿರುವ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಸೋದರರ ಪ್ರತಿಮೆಗಳನ್ನು ನಾಡಿಗೆ ಸಮರ್ಪಿಸಿ ಗೌರವ ನಮನ ಸಲ್ಲಿಸಿದರು.

ನೆರದಿದ್ದ ಜನಸ್ತೋಮದಿಂದ ಹರ್ಷೋದ್ಗಾರ, ಭಾರತಾಂಬೆಗೆ ಜೈಕಾರ ಸಹಿತ ಕರತಾಡನ ಪ್ರತಿಧ್ವನಿಸಿತು. ಜ. ಬಿಪಿನ್ ರಾವತ್ ಅವರಿಗೆ ಈ ವೇಳೆ ಕೊಡಗಿನ ಐತಿಹಾಸಿಕ ಸಂಪ್ರದಾಯದ ಪೀಚೆಕತ್ತಿ ನೀಡಿ ಗೌರವಿಸಲಾಯಿತು.

ಸಾಧನೆಗೆ ಸನ್ಮಾನ: ಈ ಸಂದರ್ಭ ಗಣರಾಜ್ಯೋತ್ಸವ ಪಥ ಸಂಚಾಲನದಲ್ಲಿ ಸಾಧನೆ ತೋರಿರುವ ಅಜ್ಜಿನಂಡ ಜಿ. ಐಶ್ವರ್ಯ ದೇಚಮ್ಮ ಹಾಗೂ ಕಂಜಿತಂಡ ಅಯ್ಯಪ್ಪ ಅವರುಗಳನ್ನು ಸೇನಾ ಮುಖ್ಯಸ್ಥರ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದ ಉದ್ದೇಶ ಹಾಗೂ ಫೋರಂ ಚಟುವಟಿಕೆ ಬಗ್ಗೆ ನಿವೃತ್ತ ಸೈನ್ಯಾಧಿಕಾರಿಗಳಾದ ಕೋದಂಡ ಸೋಮಣ್ಣ ಮತ್ತು ಕಂಡ್ರತಂಡ ಸುಬ್ಬಯ್ಯ ಅವರುಗಳು ಮಾತನಾಡಿದರು. ಪ್ರಸಕ್ತ ಸೇನಾ ಮುಖ್ಯಸ್ಥರಾಗಿರುವ ಜನರಲ್ ರಾವತ್ ತಮ್ಮ ಭಾಷಣದಲ್ಲಿ ಕೊಡಗಿನ ಜನರು ಆಗಿ ಹೋಗಿರುವ ಈ ನಾಡಿನ ವೀರ ಸೇನಾನಿಗಳ ಪರಂಪರೆ ಮುಂದುವರಿಸಿ ಕೊಡಗಿಗೆ, ಭಾರತಕ್ಕೆ ಕೀರ್ತಿ ತರುವಂತೆ ಕರೆ ನೀಡಿದರು.

ದತ್ತು ಪುತ್ರ: ವೀರ ಸೇನಾನಿಗಳನ್ನು ಕೊಡವ ಭಾಷೆಯಲ್ಲಿ ಸ್ಮರಿಸುತ್ತ, ಇಟ್ಟೀರ ಬಿದ್ದಪ್ಪ ಫೀ.ಮಾ. ಕಾರ್ಯಪ್ಪ ಅವರನ್ನು ಭಾರತ ಸೇನೆಯ ಭೀಷ್ಮ ಹಾಗೂ ಜನರಲ್ ತಿಮ್ಮಯ್ಯರನ್ನು ಅರ್ಜುನ ಎಂದು ಉದಾಹರಿಸಿದರೆ, ಬಿಪಿನ್ ರಾವತ್ ಅವರಿಗೆ ಕೊಡಗಿನ ಪೀಚೆಕತ್ತಿ ನೀಡಿ ಗೌರವಿಸಿದ ನಿವೃತ್ತ ಸೈನ್ಯಾಧಿಕಾರಿ ಲೆ.ಜ. ಬಿ.ಸಿ. ನಂದಾ ಅವರು ಪ್ರಸಕ್ತ ಸೈನಾಧಿಕಾರಿಗೆ ನಾಡಿನ ಸಾಂಪ್ರದಾಯಿಕ ಈ ಪೀಚೆಕತ್ತಿ ನೀಡುವದರೊಂದಿಗೆ ತಾವು ದತ್ತು ಪುತ್ರನಾಗಿ ಸ್ವೀಕರಿಸಿರುವದಾಗಿ ಹರ್ಷದ ನಗು ಬೀರಿದರು.

ಚಹಾ ಕೂಟ: ಸಭಾ ಕಾರ್ಯಕ್ರಮ ಮುಗಿದೊಡನೆ ಸೇನಾ ಮುಖ್ಯಸ್ಥರು ಆಹ್ವಾನಿತ ಅತಿಥಿಗಣ್ಯರೊಂದಿಗೆ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದರು. ತೀರಾ ಸರಳತೆಯೊಂದಿಗೆ ನಗುಮೊಗದಿಂದ ಎಲ್ಲರೊಂದಿಗೆ ಬೆರೆತು ದೇಶದ ಭೂಸೇನೆಯ ಮುಖ್ಯಸ್ಥರಾಗಿರುವ ಜನರಲ್ ರಾವತ್ ಅವರು, ಅಪೇಕ್ಷೆಪಟ್ಟವರೊಡನೆ ಛಾಯಾ ಚಿತ್ರಕ್ಕೆ ಸ್ಪಂದಿಸಿದರು. ಆ ಬಳಿಕ ಮರಳಿ ಸೇನಾ ವಾಹನದಲ್ಲಿ ಬೆಂಗಾವಲು ಪಡೆಯೊಂದಿಗೆ ಪಾಲಿಬೆಟ್ಟ ಹೆಲಿಪ್ಯಾಡ್‍ಗೆ ಪ್ರಯಾಣಿಸಿ ರಾಜಧಾನಿಯತ್ತ ಹಿಂತೆರಳಿದರು.

ಫೋರಂ ಪ್ರಮುಖರು: ಕಾವೇರಿ ಕಾಲೇಜು ಆವರಣದಲ್ಲಿ ಪ್ರತಿಮೆ ಅನಾವರಣಗೊಳಿಸಲು ಶ್ರಮಿಸಿದ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಉಪಾಧ್ಯಕ್ಷ ಮಾಚಿಮಾಡ ರವೀಂದ್ರ, ಕಾರ್ಯದರ್ಶಿ ಉಳ್ಳಿಯಡ ಪೂವಯ್ಯ, ಖಜಾಂಚಿ ಮಲ್ಚಿರ ಬೋಸ್, ಸಂಚಾಲಕ ಮೇಜರ್ ಬಿ.ಎ. ನಂಜಪ್ಪ, ನಿರ್ದೇಶಕರುಗಳಾದ ನೆಲ್ಲಮಕ್ಕಡ ಶಂಭು ಸೋಮಯ್ಯ, ಕಬ್ಬಚ್ಚಿರ ಸುಬ್ರಮಣಿ, ಕಳ್ಳಿಚಂಡ ರಾಬಿನ್, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ಮಾರ್ಚಂಡ ಗಣೇಶ, ನಂದೇಟಿರ ರಾಜ, ಚೇಂದಂಡ ಚುಮ್ಮಿ ಮತ್ತು ಗಣಪತಿ ಹಾಗೂ ನವೀನ್ ಸೇರಿದಂತೆ ಕುಟುಂಬಸ್ಥರು, ದಾನಿಗಳು, ನೆಂಟರಿಷ್ಟರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್. ದೇವಯ್ಯ ಸೇರಿದಂತೆ ವಿವಿಧ ಪ್ರಮುಖರಾದ ರಾಜೀವ್ ಬೋಪಯ್ಯ, ಬಿ.ಎಸ್. ತಮ್ಮಯ್ಯ, ಮಂಡೇಡ ರವಿ, ನೆಲ್ಲಿರ ಚಲನ್, ಟಿ.ಆರ್. ಪ್ರಮೋದ್, ಕಡೆಮಾಡ ಗಿರೀಶ್ ಗಣಪತಿ ಮುಂತಾದವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರೆ, ಚೆರಿಯಪಂಡ ಶರತ್ ಮತ್ತು ಕೊಕ್ಕಂಡ ಧರ್ಮಜ ಅವರುಗಳು ನಿನ್ನೆ ಈ ಸಂಬಂಧ ಆಗಮಿಸಿದ್ದ ಇನ್ನೂರು ಮಂದಿ ಸೈನಿಕರಿಗೆ ಭೋಜನ ವ್ಯವಸ್ಥೆ ಕಲ್ಪಿಸಿದ್ದರು. ಕೊಡಂದೇರ ಕುಟುಂಬದ ಅಧ್ಯಕ್ಷ ಸುಬ್ಬಯ್ಯ ಹಾಗೂ ಉಪಾಧ್ಯಕ್ಷ ಕಿರಣ್ ಚಂಗಪ್ಪ ಸೇರಿದಂತೆ 40ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಚಿತ್ರಗಳು: ಹೆಚ್.ಕೆ. ಜಗದೀಶ್, ಅಜಿತ್ ಕರುಂಬಯ್ಯ, ಎನ್.ಎನ್. ದಿನೇಶ್