ಮಡಿಕೇರಿ, ನ. 5: ಕೊಡಗು ಜಿಲ್ಲಾ ಧರ್ಮಸ್ಥಳ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ‘ಪ್ರಜಾಸತ್ಯ’ ದಿನಪತ್ರಿಕೆಯ ವತಿಯಿಂದ ನೇತ್ರದಾನ ನೋಂದಾವಣೆ ಅಭಿಯಾನವನ್ನು ಇಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಹಿತದೃಷ್ಟಿಯಿಂದ ಹಾಗೂ ಮಹಿಳೆ ಯರನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಧರ್ಮಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿದೆ. ಇತ್ತೀಚೆಗೆ ಪ್ರಧಾನಿ ಧರ್ಮಸ್ಥಳಕ್ಕೆ ಆಗಮಿಸಿದ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿ ಪಡೆದು ಬಂದಿದ್ದೀರ ಎಂಬದು ಸಂತಸದ ವಿಚಾರ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಶ್ವಿನಿ ಆಸ್ಪತ್ರೆಯ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಮತ್ತು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಮಾತನಾಡಿ ಇದು ಒಳ್ಳೆಯ ಕಾರ್ಯಕ್ರಮವಾಗಿದ್ದು ನೇತ್ರಗಳನ್ನು ಮಂತ್ರಪೂರ್ವಕವಾಗಿ ಸೂರ್ಯ ಚಂದ್ರರಿಗೆ ಹೋಲಿಸುತ್ತೇವೆ. ವೇದಕಾಲದಿಂದಲೂ ನೇತ್ರಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನೇತ್ರಗಳಿಂದ ಜಗತ್ತನ್ನೇ ನೋಡುವ ಸೌಭಾಗ್ಯವಿರುತ್ತದೆ. ದೇಹವನ್ನು, ದೇಹದ ಭಾಗಗಳನ್ನು ದಾನ ಮಾಡಲಾಗುತ್ತದೆ. ಆದರೆ ಕೆಲವೊಬ್ಬರು ಸಂಸ್ಕಾರಗಳಿಗೆ ಲೋಪವಾಗುತ್ತದೆ ಎಂದು ದೇಹದಾನಕ್ಕೆ ಒಪ್ಪುವದಿಲ್ಲ. ನೇತ್ರದಾನದಿಂದ ಪಡೆದುಕೊಂಡ ನೇತ್ರಗಳನ್ನು ಸಂಶೋಧನೆಗಾಗಲಿ ಪ್ರಯೋಗಕ್ಕಾಗಲಿ ಬಳಸಿಕೊಳ್ಳುವದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ಸೂಚಿಸಿದರು. ನೇತ್ರದಾನದಿಂದ ಅಂಧತ್ವದಲ್ಲಿ ನರಳುವವರಿಗೆ ದೃಷ್ಟಿ ಬರುವಂತಹದ್ದು, ಲೋಕವನ್ನೇ ನೋಡದವನಿಗೆ ಲೋಕವನ್ನು ನೋಡಲು ಸಹಕಾರಿಯಾಗುತ್ತದೆ. ನಾನೂ ಕೂಡ ನನ್ನ ನೇತ್ರವನ್ನು ದಾನ ಮಾಡುತ್ತೇನೆ ಎಂದು ಈ ಸಂದರ್ಭ ತಮ್ಮ ನೇತ್ರಗಳನ್ನು ದಾನ ಮಾಡುವದಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡರು. ಮಾಜಿ ಸಚಿವ ಮತ್ತು ಜೆಡಿಎಸ್ ಮುಖಂಡ ಜೀವಿಜಯ ನೇತ್ರದಾನ

(ಮೊದಲ ಪುಟದಿಂದ) ನೋಂದಾದವಣೆಯ ಕಾರ್ಡನ್ನು ಜಿ. ರಾಜೇಂದ್ರ ಅವರಿಗೆ ನೀಡಿದರು.

ಈ ಸಂದರ್ಭ ಜೀವಿಜಯ ಮಾತನಾಡಿ ದಾನಗಳಲ್ಲಿಯೇ ಶ್ರೇಷ್ಠದಾನ ನೇತ್ರದಾನವೆಂಬದು ನನ್ನ ಭಾವನೆ. ಮನುಷ್ಯರು ಯಾರೂ ಶಾಶ್ವತರಲ್ಲ, ಒಂದಲ್ಲ ಒಂದುದಿನ ಮರಣ ವನ್ನಪ್ಪಬೇಕಾಗುತ್ತದೆ. ಹಾಗಾಗಿ ದೇಹ ನಶಿಸಿದರೂ ನೇತ್ರ ಇನ್ನೊಬ್ಬರಿಗೆ ದಾನ ಮಾಡಿದರೆ ನಮ್ಮ ನೇತ್ರ ಮುಂದೆಯೂ ಬದುಕುತ್ತದೆ. ಕೋಟ್ಯಾನುಕೋಟಿ ಜನರು ಇಂದು ಅಂಧತ್ವದಿಂದ ಬಳಲುತ್ತಿದ್ದು ಅವರೆಲ್ಲರಿಗೂ ನೇತ್ರದಾನ ದಿಂದ ಉಪಕಾರವಾಗುವಂತಾಗಲಿ ಎಂದು ಹಾರೈಸಿದರು.

ಸಕ್ಷಮ ಸಂಘಟನಾ ಕಾರ್ಯದರ್ಶಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಜಯರಾಮ್ ಬೊಳ್ಳಾಜೆ ಮಾತನಾಡಿ ‘ಸರ್ವೇಂದ್ರಿಯಂ ನಯನಂ ಪ್ರಧಾನಂ’ ಎಂದರಲ್ಲದೆ, ಬೆಳಕಿನ ಜೊತೆಯಿರಲು ಇಚ್ಚಿಸದವರು ಯಾರೂ ಇಲ್ಲ. ಕೇವಲ ಕಳ್ಳರು ಮತ್ತು ಗೂಬೆಗಳು ಮಾತ್ರ ಕತ್ತಲನ್ನು ಇಷ್ಟಪಡುತ್ತವೆ. ಬೆಳಕಿಲ್ಲದಿದ್ದರೆ ಜೀವನ ಕಷ್ಟಸಾಧ್ಯ. ಜೀವನ ಪೂರ್ತಿ ಅಂಧಕಾರದಿಂದ ಪರಿತಪಿಸುವವರ ಬಗ್ಗೆ ನಮ್ಮಲ್ಲಿ ಸಂವೇದನೆ ಹೆಚ್ಚಾಗಬೇಕು. ಕಣ್ಣನ್ನು ಆದಷ್ಟು ಜೋಪನವಾಗಿಟ್ಟುಕೊಳ್ಳಬೇಕು. ನೇತ್ರದಾನದ ಮಹತ್ವವನ್ನು ಇತರರಿಗೆ ತಿಳಿಸಿ ಎಂದು ಸಲಹೆಯನ್ನಿತ್ತರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ, ನೇತ್ರದಾನಕ್ಕಿಂತ ಮಹಾದಾನ ಬೇರೊಂದಿಲ್ಲ. 1 ಕೋಟಿ ಕೊಡುತ್ತೇನೆಂದರೂ ಜೀವಂತ ವಾಗಿರುವ ಮಾನವ ತನ್ನ ಕಣ್ಣನ್ನು ಬೇರೊಬ್ಬರಿಗೆ ನೀಡಲಾರ ಎಂದು ನೆನಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಜಾಸತ್ಯ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ ಭಾರತ ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಭಾರತದಲ್ಲಿ ಒಟ್ಟು 7 ಲಕ್ಷ ಹಳ್ಳಿಗಳಿವೆ. 60 ಕೋಟಿ ಮಹಿಳೆಯರಿದ್ದಾರೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಹಿಳೆಯನ್ನು ಸ್ವಾವಲಂಬಿಯಾಗಿಸಲು ಎಸ್‍ಕೆಆರ್‍ಡಿಪಿ ಮತ್ತು ಧರ್ಮಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದ್ದು, ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಮಹಿಳೆಯರಿಗೆ ಪರಿಚಯಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಧರ್ಮಸ್ಥಳದ ನಂಬಿಕೆ ಎನ್ನುವ ವಿಚಾರವನ್ನಿಟ್ಟುಕೊಂಡು ಸಮಾಜವನ್ನು ಸಬಲೀಕರಣ ಗೊಳಿಸಿದ್ದಾರೆ. ಸ್ತ್ರೀ ಶಕ್ತಿ ಗುಂಪನ್ನು ಸ್ವಾವಲಂಬಿಗೊಳಿಸಲು ಪ್ರಯತ್ನಿಸಿ ಆರ್ಥಿಕ ಸ್ವಾತಂತ್ರ್ಯದತ್ತ ಕೊಂಡೊಯ್ಯುವಲ್ಲಿ ಧರ್ಮಾಧಿಕಾರಿ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಡಿಕೇರಿ ವಲಯದ ಮೇಲ್ವಿಚಾರಕ ಮುಕುಂದ್ ನೆರವೇರಿಸಿ, ಸ್ವಾಗತವನ್ನು ರಾಜೇಶ್ವರಿ ನಗರದ ಸೇವಾ ಪ್ರತಿನಿಧಿ ಆಶಾ ವರ್ಗೀಸ್ ಮಾಡಿದರೆ, ಸುಬ್ರಮಣ್ಯನಗರದ ಸೇವಾಪ್ರತಿನಿಧಿ ಜಯಂತಿ ವಂದಿಸಿದರು.

ಇದೇ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಜಿ. ರಾಜೇಂದ್ರ, ಸಕ್ಷಮ ಸಂಘಟನಾ ಕಾರ್ಯದರ್ಶಿ ಜಯರಾಮ್ ಬೊಳ್ಳಾಜೆಯವರಿಗೆ ಕೊಡಗಿನಲ್ಲಿ ನೇತ್ರ ಬ್ಯಾಂಕ್ ತೆರೆಯುವ ಕುರಿತಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು.