ಗೋಣಿಕೊಪ್ಪಲು, ನ. 5: ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಹಬ್ಬವನ್ನು ಮೀಸಲಿಡದೆ ವರ್ಷಂಪ್ರತಿ ಕನ್ನಡಿಗರ ಮನದಲ್ಲಿ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡವನ್ನು ಪೋಷಿಸುವ ಕೆಲಸ ಮಾಡಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ರಹೀಂ ಉಚ್ಚಿಲ ಹೇಳಿದರು.

ಇಲ್ಲಿನ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಬಸ್ ನಿಲ್ದಾಣದಲ್ಲಿ ನಡೆದ 8ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡವನ್ನು ಪೋಷಿಸುವಲ್ಲಿ ಆಟೋಚಾಲಕರು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಭಾಷೆಯನ್ನು ಪ್ರೀತಿಸಿದರೆ ಮಾತ್ರ ಅದರ ಉಳಿವು ಸಾಧ್ಯ. ಕರ್ನಾಟಕದಲ್ಲಿ ಇತರ ಭಾಷೆ ನಡುವೆ ಸಿಲುಕಿ ಕನ್ನಡ ನಲುಗಿ ಹೋಗುತ್ತಿದ್ದು ಭಾಷೆಯ ಉಳಿವಿಗೆ ಎಲ್ಲರು ಕೈಜೋಡಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕಂಡ ವಿಜು ಸುಬ್ರಮಣಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮಹತ್ವ ನೀಡುವ ಮೂಲಕ ಭಾಷೆಯ ಪೋಷಣೆಗೆ ಮುಂದಾಗಬೇಕು ಎಂದರು.

ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು.

ದಿಯೋಟಿಬ್ಬ ಪರ್ವತರೋಹಣ ಮಾಡಿದ ಮಧು, ಸಂಚೀತ್, ಪ್ರೀತಂ, ಸನತ್ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಸಿ.ಕೆ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಬಾನಂಡ ಪೃಥ್ಯು. ತಾ.ಪಂ ಸದಸ್ಯರಾದ ಜಯಪೂವಯ್ಯ, ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಧರ್ಮಗುರು ಟೋನಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ, ಮಾಜಿ ಅಧ್ಯಕ್ಷ ಕೇಶವ ಕಾಮತ್, ಹೋಬಳಿ ಅಧ್ಯಕ್ಷ ಡಾ.ಚಂದ್ರಶೇಖರ್ ಇದ್ದರು.

ರಸಮಂಜರಿ ಕಾರ್ಯಕ್ರಮ : 8ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಸೋನು ಮೇಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.