ಮಡಿಕೇರಿ, ನ. 6: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ತನ್ನನ್ನು ನಗರಸಭೆಯ ಅಧ್ಯಕ್ಷಸ್ಥಾನ ತ್ಯಜಿಸುವಂತೆ ಯಾವ ಸಂದರ್ಭದಲ್ಲೂ ಹೇಳಿಲ್ಲವೆಂದು ಪ್ರತಿಕ್ರಿಯಿಸಿರುವ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ತಾನು ಕಾಂಗ್ರೆಸ್ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುವೆ ಎಂದು ‘ಶಕ್ತಿ’ ಮೂಲಕ ಸ್ಪಷ್ಟಪಡಿಸಿದ್ದಾರೆ.ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಜಿಲ್ಲಾ ಭೇಟಿ ಸಂದರ್ಭ ತಾ. 8 ರೊಳಗೆ ಅಧ್ಯಕ್ಷ ಸ್ಥಾನ ತೊರೆಯಲು ಕಾಲಮಿತಿ ನೀಡಿದ್ದಾರಲ್ಲವೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇದೆಲ್ಲ ಕೇವಲ ಊಹಾಪೋಹಾವೆಂದರು.ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಡಿಕೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ ವರಿಷ್ಠರ ತೀರ್ಮಾನದಂತೆ ತಾನು ಅಧ್ಯಕ್ಷಳಾಗಿದ್ದು, ಮುಂದೆಯೂ ಪಕ್ಷದ ನಾಯಕರ ಅಣತಿಯಂತೆ ನಡೆದುಕೊಳ್ಳುವೆ ಎಂದು ಅವರು ತಮ್ಮ ನಿಲುವು ವ್ಯಕ್ತಪಡಿಸಿದರು.
ವಿನಾಕಾರಣ ಯಾವದೇ ಪತ್ರಿಕಾ ಹೇಳಿಕೆ ಅಥವಾ ಗೊಂದಲಕ್ಕೆ ಆಸ್ಪದ ಕೊಡುವದಿಲ್ಲವೆಂದು ಹೇಳಿದರು.
ಹಣ ಬಾರದೆ ಬೇಸರ
ಮಡಿಕೇರಿ ದಸರಾ ನಾಡ ಹಬ್ಬಕ್ಕೆ ರಾಜ್ಯ ಕನ್ನಡ
(ಮೊದಲ ಪುಟದಿಂದ) ಮತ್ತು ಸಂಸ್ಕøತಿ ಇಲಾಖೆಯಿಂದ ಬಿಡುಗಡೆಯಾಗಬೇಕಿದ್ದ ಹಣ ಇನ್ನೂ ಲಭಿಸಿಲ್ಲವೆಂದು ‘ಶಕ್ತಿ’ ಗಮನ ಸೆಳೆದಾಗ, ಸಣ್ಣ ಲೋಪದಿಂದಾಗಿ ವಿಳಂಬಕ್ಕೆ ಕಾರಣವಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಚೆಕ್ ಬಂದಿದ್ದರೂ, ಅದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹೆಸರಿಗೆ ಬಂದಿದ್ದರಿಂದ ಹಿಂತಿರುಗಿಸಲಾಗಿದ್ದು, ಸದ್ಯದಲ್ಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ಹೊರಗೆಡವಿದರು.
ರಸ್ತೆ ಪರಿಸ್ಥಿತಿಯೇನು?
ಮಡಿಕೇರಿ ನಗರಸಭೆಯ ರಸ್ತೆಗಳ ದುರಸ್ತಿಗೆ ಇನ್ನು ಕಾಲಕೂಡಿ ಬಂದಿಲ್ಲವೆ? ಎಂಬ ಪ್ರಶ್ನೆಗೆ, ಇಂದು ಕೂಡ ಮಳೆ ಸುರಿಯಲಾರಂಭಿಸಿದ್ದು, ಈ ಪರಿಸ್ಥಿತಿಯಲ್ಲಿ ಕೆಲಸ ಮಾಡುವದಾದರೂ ಹೇಗೆ? ಎಂದು ಅಧ್ಯಕ್ಷರು ಮಾರ್ನುಡಿದರು.