ಮಡಿಕೇರಿ, ನ. 5: ತಾ. 10 ರಂದು ಜಿಲ್ಲಾಡಳಿತದಿಂದ ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಯಾವದೇ ಅಹಿತಕರ ಘಟನೆಗಳು ಸಂಭವಿಸದಂತೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಕಟ್ಟೆಚ್ಚರ ವಹಿಸುವದರೊಂದಿಗೆ, ನೆರೆಯ ರಾಜ್ಯ ಕೇರಳ ಸೇರಿದಂತೆ ಇತರ ಗಡಿ ಜಿಲ್ಲೆಗಳ ಪೊಲೀಸ್ ಅಧೀಕ್ಷಕರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದೆ.ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್‍ಕುಮಾರ್ ಅವರು ಇಂದು ಖುದ್ದಾಗಿ ಜಿಲ್ಲೆಗೆ ಆಗಮಿಸುವದ ರೊಂದಿಗೆ, ಕಳೆದ ವರ್ಷ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಸಂದರ್ಭ ಯಾವದೇ ಅಹಿತಕರ ಘಟನೆಗಳಿಗೆ ಎಡೆಯಾಗದಂತೆ ನಿಗಾವಹಿಸಿದ ರೀತಿಯಲ್ಲಿ ವ್ಯಾಪಕ ಬಂದೋಬಸ್ತ್‍ಗೆ ನಿರ್ದೇಶಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಉಪ ಅಧೀಕ್ಷಕರುಗಳಾದ ಕೆ.ಎಸ್. ಸುಂದರರಾಜ್, ನಾಗಪ್ಪ, ಸಂಪತ್ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳನ್ನು ಆಹ್ವಾನಿಸಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ತುರ್ತು ಸಮಾಲೋಚನೆ ನಡೆಸಿದರು.

ಈ ವೇಳೆ ಐಜಿಪಿ ವಿಪುಲ್ ಕುಮಾರ್ ಅವರು, ಜಿಲ್ಲಾ ಕೇಂದ್ರವೂ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಕೊಡಗಿನ ಗಡಿ ಚೆಕ್‍ಪೋಸ್ಟ್‍ಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆದರಲ್ಲದೆ, ಇಲಾಖೆ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ಒತ್ತಿ ಹೇಳಿದ್ದಾಗಿ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.

ಜಿಲ್ಲೆಯಲ್ಲಿ ಆಡಳಿತದಿಂದ ಆಯೋಜಿಸುವ ಟಿಪ್ಪು ಜಯಂತಿ ಹೊರತಾಗಿ ಯಾರೊಬ್ಬರು ಕಾನೂನು ಸುವ್ಯವಸ್ಥೆಗೆ ಭಂಗ ತಂದೊಡ್ಡದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲು ಸೂಚಿಸಿರುವ ಅವರು, ಭದ್ರತೆ ಲೋಪವಾಗದಂತೆ ತಿಳಿ ಹೇಳಿದ್ದಾರೆ.

ಪೊಲೀಸ್ ಕಾರ್ಯ ಚುರುಕು

ಕರ್ನಾಟಕ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಭೇಟಿಯ ಸಂದರ್ಭ ಸಾಕಷ್ಟು ತಯಾರಿಯಲ್ಲಿದ್ದ ಕೊಡಗು ಪೊಲೀಸರು ಜಿಲ್ಲೆಯೆಲ್ಲೆಡೆ ಮುಂಜಾಗ್ರತಾ ಕ್ರಮಗಳನ್ನು ಚುರುಕುಗೊಳಿಸಿದ್ದಾರೆ. ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು ವೀರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ಸಹಿತ ಕೆಳ ಹಂತದ ಅಧಿಕಾರಿಗಳೊಂದಿಗೆ ಮಾಕುಟ್ಟ, ಪೆರುಂಬಾಡಿ ಸಹಿತ ಗಡಿ ಚೆಕ್‍ಪೋಸ್ಟ್‍ಗಳ ಭದ್ರತಾ ಕ್ರಮವನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ನೇತೃತ್ವದಲ್ಲಿ ಸಂಪಾಜೆ, ಕರಿಕೆ ಹಾಗೂ ಇತರೆಡೆ ಗಡಿಭಾಗಗಳ ಪರಿಶೀಲನೆಯೊಂದಿಗೆ, ತೀರಾ ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಕಟ್ಟೆಚ್ಚರ ಕೈಗೊಂಡಿರುವದಾಗಿ ತಿಳಿದು ಬಂದಿದೆ.

ಇನ್ನು ಸೋಮವಾರಪೇಟೆ ಹಾಗೂ ಕುಶಾಲನಗರದ ವಿವಿಧೆಡೆಗಳಿಗೆ ಹೊಂದಿಕೊಂಡಿರುವ ನೆರೆಯ ಗಡಿ ಜಿಲ್ಲೆಗಳ ಚೆಕ್‍ಪೋಸ್ಟ್‍ಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಉಪ ಅಧೀಕ್ಷಕ ಸಂಪತ್ ನೇತೃತ್ವದಲ್ಲಿ ಪರಿಶೀಲನೆಯೊಂದಿಗೆ ಮುನ್ನೆಚ್ಚರಿಕೆ

(ಮೊದಲ ಪುಟದಿಂದ) ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಮಾತುಕತೆ: ಮೂರು ವರ್ಷ ಹಿಂದೆ ನೆರೆಯ ಕೇರಳ ಹಾಗೂ ಇತರೆಡೆಗಳಿಂದ ಮತಾಂಧ ಶಕ್ತಿಗಳು ಕೋಮು ದಳ್ಳುರಿಗೆ ಯತ್ನಿಸಿರುವ ಮಾಹಿತಿ ಮೇರೆಗೆ, ಅಯಾ ಜಿಲ್ಲೆಗಳ ಪೊಲೀಸ್ ವರಿಷ್ಠರೊಂದಿಗೆ ಸಂಪರ್ಕ ಸಾಧಿಸಿರುವ ಕೊಡಗು ಪೊಲೀಸರು ಕಾನೂನು ಸುವ್ಯವಸ್ಥೆಯೊಂದಿಗೆ ಶಾಂತಿ ಕಾಪಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಗೌಪ್ಯ ಮಾತುಕತೆ ನಡೆಸಿರುವದಾಗಿ ತಿಳಿದು ಬಂದಿದೆ.

ನೆರೆಯ ಕಣ್ಣೂರು, ಕಾಸರಗೋಡು, ಹಾಸನ, ಮೈಸೂರು ಮುಂತಾದೆಡೆಯ ಪೊಲೀಸ್ ವರಿಷ್ಠರು, ಕೊಡಗು ಪೊಲೀಸ್ ಮುಖ್ಯಸ್ಥರೊಡಗೂಡಿ ಸಮಾಲೋಚನೆಯೊಂದಿಗೆ ಟಿಪ್ಪು ಜಯಂತಿ ಹಿನ್ನೆಲೆ ನಿರಂತರ ಸಂಪರ್ಕ ಸಾಧಿಸಲು ಕ್ರಮಕೈಗೊಂಡಿರುವದಾಗಿ ‘ಶಕ್ತಿ’ಗೆ ವಿಶ್ವಸನೀಯ ಮೂಲಗಳಿಂದ ಖಚಿತ ಮಾಹಿತಿ ಲಭಿಸಿದೆ.