ಸೋಮವಾರಪೇಟೆ, ನ.6: ದೇಶದ ಆರ್ಥಿಕತೆಯಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ಕೃಷಿ ಚಟುವಟಿಕೆಗೆ ಹೊಸ ಅನ್ವೇಷಣೆಯೊಂದಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 187 ರೈತ ಉತ್ಪಾದಕರ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಬಾರ್ಡ್ ಸಹಾಯಕ ಮಹಾ ಪ್ರಬಂಧಕರಾದ ಎಂ.ಸಿ.ನಾಣಯ್ಯ ಅಭಿಪ್ರಾಯಿಸಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಮೈಸೂರಿನ ಓಡಿಪಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಭುವನ ಮಂದಾರ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಪ್ರಾರಂಭವಾಗಿರುವ ಕಂಪೆನಿ ರೈತರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ ರೈತರ ವಿಶ್ವಾಸಗಳಿಸಬೇಕು. ರೈತರಿಗೆ ಗುಣಮಟ್ಟದ ಕೃಷಿ ಸಲಕರಣೆಗಳು, ರಸಗೊಬ್ಬರ, ಕೀಟನಾಶಕಗಳನ್ನು ಸರಬರಾಜು ಮಾಡಬೇಕು. ರೈತರು ಬೆಳೆದ ಬೆಳೆಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ದಾಸ್ತಾನು ಕೊಠಡಿ, ಕಣ ಮುಂತಾದ ಸೌಲಭ್ಯ ಕಲ್ಪಿಸಿಕೊಡುವ ಕೆಲಸವನ್ನು ಮಾಡಬೇಕು ಎಂದರು.

28 ವಾಣಿಜ್ಯ ಬ್ಯಾಂಕ್‍ಗಳು ಕಂಪನಿ ಅಭಿವೃದ್ಧಿಗೆ ಸಾಲದ ಸೌಲಭ್ಯ ಒದಗಿಸಲಿವೆ. ಷೇರುದಾರರ ಬಂಡವಾಳಕ್ಕೆ ಬ್ಯಾಂಕ್‍ಗಳು ಸಾಲದ ರೂಪದಲ್ಲಿ ಮ್ಯಾಚಿಂಗ್ ಗ್ರ್ಯಾಂಟ್ಸ್ ನೀಡಲಿವೆ ಎಂದು ಹೇಳಿದರು.

ಕಂಪನಿ ಮುಖ್ಯ ನಿರ್ದೇಶಕ ಎಸ್.ಎಂ. ಡಿಸಿಲ್ವಾ ಮಾತನಾಡಿ, ರೈತರಿಗೆ ಅರಿವು ಮೂಡಿಸಿ ರೈತ ಉತ್ಪಾದಕರ ಸಂಸ್ಥೆಯ ಮೂಲಕ ಸುಸ್ಥಿರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವದರ ಮೂಲಕ ರೈತರನ್ನು ಆರ್ಥಿಕವಾಗಿ ಸ್ವಾವಲಂಬ ನೆಯತ್ತ ಕೊಂಡೊಯ್ಯುವದೆ ರೈತ ಉತ್ಪಾದಕರ ಕಂಪೆನಿಯ ಉದ್ದೇಶವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಓಡಿಪಿ ನಿರ್ದೇಶಕ ಸ್ಟ್ಯಾನಿ ಡಿ’ಅಲ್ಮೇಡಾ, ಕೃಷಿ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್. ರಾಜಶೇಖರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ, ಕಾರ್ಪೋರೇಷನ್ ಬ್ಯಾಂಕ್ ಸಹ ವ್ಯವಸ್ಥಾಪಕ ಎಂ.ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.